ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ದೆಯಲ್ಲಿದ್ದ ದಂಪತಿ ಉಸಿರುಗಟ್ಟಿ ಸಾವು

ಬೇಗೂರಿನ ದೇವರ ಚಿಕ್ಕನಹಳ್ಳಿಯಲ್ಲಿ ಘಟನೆ * ಅಡುಗೆ ಅನಿಲ ಸೋರಿಕೆ ಕಾರಣ?
Last Updated 12 ನವೆಂಬರ್ 2019, 21:48 IST
ಅಕ್ಷರ ಗಾತ್ರ

ಬೆಂಗಳೂರು: ರಾತ್ರಿ ಮಲಗಿದ್ದ ದಂಪತಿ ಉಸಿರುಗಟ್ಟಿ ಶಂಕಾಸ್ಪದವಾಗಿ ಮೃತಪಟ್ಟ ಘಟನೆ ಬೇಗೂರಿನ ದೇವರ ಚಿಕ್ಕನಹಳ್ಳಿಯ ಮನೆಯೊಂದರಲ್ಲಿ ನಡೆದಿದೆ.

ಆಂಧ್ರಪ್ರದೇಶದ ಚಿತ್ತೂರಿನ ನಾಗಮುನಿ (35) ಮತ್ತು ಅವರ ಪತ್ನಿ ಪದ್ಮಾವತಿ (30) ಮೃತರು. ಅಡುಗೆ ಅನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಬೇಗೂರು ಪೊಲೀಸರು ತಿಳಿಸಿದರು.

ಭಾನುವಾರ (ನ.10) ರಾತ್ರಿ ಈ ಘಟನೆ ಸಂಭವಿಸಿದೆ. ಸೋಮವಾರ (ನ. 11) ಸಂಜೆ ಬೆಳಕಿಗೆ ಬಂದಿದೆ. ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು, ಮನೆ ಬಾಗಿಲು ಮುರಿದು ಶವಗಳನ್ನು ಹೊರತೆಗೆದರು. ಈ ಸಂಬಂಧ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ನಾಗಮುನಿ ಮತ್ತು ಪದ್ಮಾವತಿ ನಾಲ್ಕು ವರ್ಷಗಳ ಹಿಂದೆ ಕೂಲಿ ಅರಸಿಕೊಂಡು ನಗರಕ್ಕೆ ಬಂದಿದ್ದರು. ದೇವರಚಿಕ್ಕನಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಫ್ಲೈವುಡ್ ಅಂಗಡಿಯಲ್ಲಿ ನಾಗಮುನಿ ಕೆಲಸ ಮಾಡಿಕೊಂಡಿದ್ದರೆ, ಪತ್ನಿ ಸಿದ್ಧ ಉಡುಪುಗಳ ತಯಾರಿಕಾ ಕಾರ್ಖಾನೆಗೆ ಹೋಗುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ಚಿತ್ತೂರಿನಲ್ಲಿ ಇದ್ದಾರೆ.

ಪ್ರತಿದಿನದಂತೆ ಅಂದು ಕೂಡಾ ರಾತ್ರಿ 9 ಗಂಟೆಗೆ ಊಟ ಮುಗಿಸಿ, ನೆರೆಹೊರೆಯವರನ್ನು ಮಾತನಾಡಿಸಿ ದಂಪತಿ ಮಲಗಿದ್ದರು. ತಡರಾತ್ರಿ ಮನೆಯಲ್ಲಿದ್ದ ಅಡುಗೆ ಅನಿಲ ಸೋರಿಕೆಯಾಗಿದೆ. ಗಾಢ ನಿದ್ದೆಯಲ್ಲಿದ್ದ ದಂಪತಿ ಉಸಿರುಗಟ್ಟಿ ಮಲಗಿದಲ್ಲೇ ಮೃತಪಟ್ಟಿದ್ದಾರೆ.

ಮರುದಿನ ಸಂಜೆಯಾದರೂ ಮನೆತ ಬಾಗಿಲು ತೆರೆಯದ ಕಾರಣ, ಸ್ಥಳೀಯ ನಿವಾಸಿಗಳು ಬಾಗಿಲು ಬಡಿದಿದ್ದರು. ಆದರೆ ಒಳಗಿನಿಂದ ಪ್ರತಿಕ್ರಿಯೆ ಬಂದಿರಲಿಲ್ಲ.

ಕಿಟಕಿ ತೆರೆದು ನೋಡಿದಾಗ ಹಾಸಿಗೆಯಲ್ಲಿ ದಂಪತಿ ಮಲಗಿರುವುದು ಕಂಡುಬಂದಿದೆ. ಹೊರಗಿನಿಂದ ನೀರು ಎರಚಿ ಎಬ್ಬಿಸಲು ಪ್ರಯತ್ನಿಸಿದರೂ ದಂಪತಿ ಎಚ್ಚರಗೊಂಡಿರಲಿಲ್ಲ.

ಹೀಗಾಗಿ, ತುರ್ತು ಸಹಾಯವಾಣಿ 100 ಸಂಖ್ಯೆಗೆ ಕರೆ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು, ಮನೆ ಬಾಗಿಲಿನ ಚಿಲಕ ಮುರಿದು ನೋಡಿದಾಗ ಹಾಸಿಗೆ ಮೇಲೆ ಮಲಗಿದ್ದ ಸ್ಥಿತಿಯಲ್ಲಿಯೇ ಇಬ್ಬರೂ ಮೃತಪಟ್ಟಿರುವುದು ಗೊತ್ತಾಗಿದೆ. ಬಳಿಕ, ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

‘ಮನೆಯ ಒಳಗೆ ಅಡುಗೆ ಅನಿಲ ಸೋರಿಕೆ ಆಗಿರುವುದು ಕಂಡುಬಂದಿದೆ. ನಿದ್ದೆಯ ಮಂಪರಿನಲ್ಲಿದ್ದ ದಂಪತಿ, ಅನಿಲ ಸೋರಿಕೆ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ತಜ್ಞರ ವರದಿ ಆಧರಿಸಿ ಮುಂದಿನ ತನಿಖೆ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT