ಗೌರಿ ಹತ್ಯೆ ಪ್ರಕರಣ : ವಿಡಿಯೊ ಕಾನ್ಫ್‌ರೆನ್ಸ್‌ಗೆ ಆರೋಪಿಗಳು

4
ಮಂಪರು ಪರೀಕ್ಷೆಗೆ ಒಪ್ಪಿದ ಆರೋಪಿ; ಅರ್ಜಿ ಸಲ್ಲಿಕೆ ಸಾಧ್ಯತೆ

ಗೌರಿ ಹತ್ಯೆ ಪ್ರಕರಣ : ವಿಡಿಯೊ ಕಾನ್ಫ್‌ರೆನ್ಸ್‌ಗೆ ಆರೋಪಿಗಳು

Published:
Updated:

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳನ್ನು ವಿಡಿಯೊ ಕಾನ್ಫ್‌ರೆನ್ಸ್‌ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಎಸ್‌ಐಟಿ ಅಧಿಕಾರಿಗಳು ಬಂಧಿಸಿರುವ, ಮದ್ದೂರಿನ ಕೆ.ಟಿ.ನವೀನ್‌ಕುಮಾರ್‌, ವಿಜಯಪುರದ ಪರಶುರಾಮ ವಾಘ್ಮೋರೆ, ಮನೋಹರ್ ದುಂಡಪ್ಪ ಯಡವೆ, ಮಹಾರಾಷ್ಟ್ರದ ಅಮೋಲ್‌ ಕಾಳೆ, ಅಮಿತ್ ದೇಗ್ವೇಕರ್, ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಅದರ ಅವಧಿ ಮುಕ್ತಾಯವಾಗಿದ್ದರಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು, ಜೈಲಿನಿಂದಲೇ ವಿಡಿಯೊ ಕಾನ್ಫ್‌ರೆನ್ಸ್‌ ಮೂಲಕ ಬೆಂಗಳೂರಿನ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಗಳನ್ನು ಬುಧವಾರ ಹಾಜರುಪಡಿಸಿದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 14ರವರೆಗೆ ವಿಸ್ತರಿಸಿದರು.

ಮಂಪರು ಪರೀಕ್ಷೆಗೆ ಒಪ್ಪಿದ ಆರೋಪಿ: ಪ್ರಕರಣದಡಿ ಮೊದಲಿಗೆ ಬಂಧಿಸಲಾದ ಕೆ.ಟಿ.ನವೀನ್‌ಕುಮಾರ್‌, ಈ ಹಿಂದೆ ಮಂಪರು ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದ. ಇದೀಗ ಪರೀಕ್ಷೆಗೆ ಆತ ಒಪ್ಪಿಗೆ ವ್ಯಕ್ತಪಡಿಸಿದ್ದಾನೆ.

ಆತನ ಪರ ವಕೀಲರಾದ ವೇದಮೂರ್ತಿ, ಮಂಪರು ಪರೀಕ್ಷೆಗೆ ಅನುಮತಿ ಕೋರಿ ನ್ಯಾಯಾಲಯಕ್ಕೆ ಗುರುವಾರ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

‘ನವೀನ್, ಈ ಹಿಂದೆಯೇ ಪರೀಕ್ಷೆಗೆ ಒಪ್ಪಿಕೊಂಡಿದ್ದ. ಎಸ್‌ಐಟಿ ಅಧಿಕಾರಿಗಳು ಆತನನ್ನು ಗುಜರಾತ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆದೊಯ್ದಿದ್ದರು. ಅಧಿಕಾರಿಗಳ ತಪ್ಪು ಮಾಹಿತಿಯಿಂದಾಗಿ ಆತ ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದ. ಹೀಗಾಗಿ, ವಾಪಸ್‌ ಕರೆತರಲಾಗಿತ್ತು’ ಎಂದು ವಕೀಲ ವೇದಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಈಗ ಪುನಃ ಆತ ಪರೀಕ್ಷೆಗೆ ಒಪ್ಪಿದ್ದಾನೆ. ಅದನ್ನೇ ನ್ಯಾಯಾಲಯದ ಗಮನಕ್ಕೆ ತರಲಿದ್ದೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !