ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ‘ಬಿ’ ತಂಡಕ್ಕೆ ದೇವಧರ್ ಟ್ರೋಫಿ

ಕ್ರಿಕೆಟ್: ಆರ್‌. ಸಮರ್ಥ್‌ ಶತಕ ವ್ಯರ್ಥ
Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಧರ್ಮಶಾಲ: ಬಲಿಷ್ಠ ಕರ್ನಾಟಕ ಕ್ರಿಕೆಟ್ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿದ ಭಾರತ ‘ಬಿ’ ತಂಡವು ದೇವಧರ್‌ ಟ್ರೋಫಿಯನ್ನು ಗೆದ್ದುಕೊಂಡಿತು.

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಕ್ರೀಡಾಂಗಣದಲ್ಲಿ (ಎಚ್‌ಪಿಸಿಎ) ಗುರುವಾರ ನಡೆದ ಫೈನಲ್‌ನಲ್ಲಿ 280 ರನ್‌ಗಳ ಗುರಿ ಬೆನ್ನತ್ತಿದ ಭಾರತ ‘ಬಿ’ ತಂಡದವರು ಆರಂಭದಿಂದಲೇ ದಿಟ್ಟ ಆಟವಾಡಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳ ತಾಳ್ಮೆ ಮತ್ತು ಮಧ್ಯಮ ಕ್ರಮಾಂಕದ ಆಟಗಾರರ ಅಬ್ಬರ ತಂಡದ ಜಯವನ್ನು ಸುಲಭಗೊಳಿಸಿತು.

ಋತುರಾಜ್ ಗಾಯಕವಾಡ್ (58; 48 ಎ, 2 ಸಿ, 7 ಬೌಂ) ಮತ್ತು ಈಶ್ವರನ್‌ (69; 82 ಎ, 8 ಬೌಂ) ಮೊದಲ ವಿಕೆಟ್‌ಗೆ 84 ರನ್‌ ಸೇರಿಸಿ ಕರ್ನಾಟಕದ ಪಾಳಯದಲ್ಲಿ ಆತಂಕ ಮೂಡಿಸಿದರು. ಋತುರಾಜ್‌ ಔಟಾದ ಬೆನ್ನಲ್ಲೇ ಸ್ಫೋಟಕ ಬ್ಯಾಟ್ಸ್‌ಮನ್‌ ಹನುಮವಿಹಾರಿ ವಿಕೆಟ್ ಪಡೆಯುವಲ್ಲಿ ರಾಜ್ಯ ತಂಡದವರು ಯಶಸ್ವಿಯಾದರು. ಆದರೆ ಈಶ್ವರನ್ ಮತ್ತು ನಾಯಕ ಶ್ರೇಯಸ್ ಅಯ್ಯರ್‌ ಮೂರನೇ ವಿಕೆಟ್‌ಗೆ 62 ರನ್‌ ಸೇರಿಸಿದರು.

ಈಶ್ವರನ್ ಮರಳಿದ ನಂತರ ನಾಯಕನ ಜೊತೆಗೂಡಿದ ಮನೋಜ್ ತಿವಾರಿ ತಂಡದ ಹಾದಿಯನ್ನು ಇನ್ನಷ್ಟು ಸುಲಭಗೊಳಿಸಿದರು. ನಾಲ್ಕನೇ ವಿಕೆಟ್‌ಗೆ ಇವರಿಬ್ಬರು ಸೇರಿಸಿದ 83 ರನ್‌ ಪಂದ್ಯದ ಗತಿಯನ್ನೇ ಬದಲಿಸಿತು. ಶ್ರೇಯಸ್ 61 ರನ್‌ (69 ಎಸೆತ; 7 ಬೌಂ) ಗಳಿಸಿ ಔಟಾದರೆ, ತಿವಾರಿ (59; 51 ಎ, 8 ಬೌಂ) ಅಜೇಯರಾಗಿ ಉಳಿದರು.

ಆರ್‌.ಸಮರ್ಥ್ ಆಸರೆ
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕರ್ನಾಟಕದ ಆರಂಭಿಕ ಜೋಡಿ  ವೈಫಲ್ಯ ಕಂಡಿತು. ಎರಡು ಪಂದ್ಯಗಳಲ್ಲಿ ಪರಿಣಾಮಕಾರಿ ಬ್ಯಾಟಿಂಗ್ ಮಾಡಲಾಗದ ಮಯಂಕ್‌ ಅಗರವಾಲ್‌ ಮತ್ತು ನಾಯಕ ಕರುಣ್ ನಾಯರ್‌ ಅವರು ಕ್ರಮವಾಗಿ 14 ಮತ್ತು 10 ರನ್ ಗಳಿಸಿ ಔಟಾದರು.

33 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡ ತಂಡಕ್ಕೆ ಆರ್‌.ಸಮರ್ಥ್ ಮತ್ತೊಮ್ಮೆ ಆಸರೆಯಾದರು. ಮೊದಲ ಎರಡು ಪಂದ್ಯಗಳಲ್ಲಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಗುರುವಾರವೂ ಮಿಂಚಿದರು. ತಾಳ್ಮೆಯ ಬ್ಯಾಟಿಂಗ್ ಮಾಡಿದ ಅವರು ಶತಕ ಗಳಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು. 120 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಎಂಟು ಬೌಂಡರಿ ಸಿಡಿಸಿದ ಅವರು 107 ರನ್‌ ಗಳಿಸಿದರು.

ಕಳೆದ ಪಂದ್ಯದಲ್ಲಿ ಸಮರ್ಥ್‌ ಅವರಿಗೆ ಉತ್ತಮ ಬೆಂಬಲ ನೀಡಿದ್ದ ಪವನ್‌ ದೇಶಪಾಂಡೆ ಗುರುವಾರ ಬೇಗನೇ ವಿಕೆಟ್ ಒಪ್ಪಿಸಿದರು. ಸ್ಟುವರ್ಟ್ ಬಿನ್ನಿ ಕೂಡ ಕ್ರೀಸ್‌ನಲ್ಲಿ ವಿಫಲರಾದರು. ಹೀಗಾಗಿ ತಂಡ 64 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆದರೆ ಸಮರ್ಥ್ ಜೊತೆಗೂಡಿದ ವಿಕೆಟ್ ಕೀಪರ್ ಸಿ.ಎಂ.ಗೌತಮ್‌ (76; 84 ಎ, 2 ಸಿ, 6 ಬೌಂ) ಐದನೇ ವಿಕೆಟ್‌ಗೆ 132 ರನ್‌ಗಳ ಜೊತೆಯಾಟ ಆಡಿ ಇನಿಂಗ್ಸ್‌ಗೆ ಬಲ ತುಂಬಿದರು. ಗೌತಮ್ ಔಟಾದ ನಂತರ ಶ್ರೇಯಸ್ ಗೋಪಾಲ್‌ ಕೂಡ ಎದುರಾಳಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. 22 ಎಸೆತಗಳಲ್ಲಿ 38 ರನ್‌ (1 ಸಿಕ್ಸರ್‌, 4 ಬೌಂ) ಗಳಿಸಿದ ಅವರು 64 ರನ್‌ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ:
50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 279 (ಮಯಂಕ್ ಅಗರವಾಲ್‌ 17, ಕರುಣ್‌ ನಾಯರ್‌ 10, ಆರ್‌.ಸಮರ್ಥ್‌ 107, ಪವನ್ ದೇಶಪಾಂಡೆ 13, ಸಿ.ಎಂ.ಗೌಗಮ್‌ 76, ಶ್ರೇಯಸ್ ಗೋಪಾಲ್‌ 38, ಕೆ.ಗೌತಮ್‌ 10; ಉಮೇಶ್‌ ಯಾದವ್‌ 48ಕ್ಕೆ2, ಎಸ್‌.ಅಹಮ್ಮದ್‌ 49ಕ್ಕೆ3); ಭಾರತ ‘ಬಿ’: 48.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 281 (ಋತುರಾಜ್ ಗಾಯಕವಾಡ್‌ 58, ಎ.ಆರ್.ಈಶ್ವರನ್‌ 69, ಹನುಮ ವಿಹಾರಿ 21, ಶ್ರೇಯಸ್ ಅಯ್ಯರ್‌ 61, ಮನೋಜ್‌ ತಿವಾರಿ 59; ಶ್ರೇಯಸ್ ಗೋಪಾಲ್‌ 55ಕ್ಕೆ2). ಫಲಿತಾಂಶ: ಭಾರತ ‘ಬಿ’ ತಂಡಕ್ಕೆ 6 ವಿಕೆಟ್ ಜಯ; ಪ್ರಶಸ್ತಿ. ಪಂದ್ಯಶ್ರೇಷ್ಠ–ಆರ್‌.ಸಮರ್ಥ್‌ (ಕರ್ನಾಟಕ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT