ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ, ಸಂಸದರಾಗಿ ಆಯ್ಕೆಯಾದರೆ ರದ್ದಾಗಲಿದೆ ಪಾಲಿಕೆ ಸದಸ್ಯತ್ವ

Last Updated 10 ಡಿಸೆಂಬರ್ 2020, 15:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಸದಸ್ಯರು ವಿಧಾನ ಮಂಡಲದ ಅಥವಾ ಸಂಸತ್ತಿನ ಸದಸ್ಯರಾಗಿ ಆಯ್ಕೆಯಾದರೆ, ಆ ಬಳಿಕವೂ ಅವರು ಪಾಲಿಕೆ ಸದಸ್ಯರಾಗಿ ಮುಂದುವರಿಯುವುದಕ್ಕೆ 1976ರ ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿತ್ತು. ಆದರೆ, ಬಿಬಿಎಂಪಿ ಮಸೂದೆ 2020ರಲ್ಲಿ ಇದಕ್ಕೆ ಅವಕಾಶ ಕಲ್ಪಿಸಿಲ್ಲ.

ಬಿಬಿಎಂಪಿ ಸದಸ್ಯರು ಸಂಸತ್ತಿನ ಉಭಯ ಸದನಗಳಲ್ಲಿ ಒಂದರ, ವಿಧಾನಸಭೆಯ, ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರೆ ಅಥವಾ ಬಿಬಿಎಂಪಿ ಹೊರತಾಗಿ ಇತರ ಮಹಾನಗರ ಪಾಲಿಕೆ, ಪಟ್ಟಣ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರೆ, ಅವರು ಸದಸ್ಯತ್ವ ಸ್ವೀಕರಿಸಿ 15 ದಿನಗಳ ಒಳಗಾಗಿ ಬಿಬಿಎಂಪಿಯಲ್ಲಿ ಅವರ ಸದಸ್ಯತ್ವ ರದ್ದಾಗಲಿದೆ. ಬಿಬಿಎಂಪಿ ಮಸೂದೆಯ ಸೆಕ್ಷನ್‌ 48 (4)ರಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ.

ಈ ಹಿಂದಿನ ಅವಧಿಯಲ್ಲಿ ಪಾಲಿಕೆ ಸದಸ್ಯೆಯಾಗಿದ್ದ ಕೆ.ಪೂರ್ಣಿಮಾ ಅವರು ಹಿರಿಯೂರು ಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿದ್ದರು. ಕಾಡುಗೋಡಿ ವಾರ್ಡ್‌ನ ಪಾಲಿಕೆ ಸದಸ್ಯ ಎಸ್‌.ಮುನಿಸ್ವಾಮಿ ಅವರು ಕೋಲಾರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಅವರಿಬ್ಬರೂ ಆ ಬಳಿಕವೂ ಪಾಲಿಕೆ ಸದಸ್ಯರಾಗಿ ಮುಂದುವರಿದಿದ್ದರು. ಪಾಲಿಕೆ ಕಾರ್ಯ ಕಲಾಪಗಳಲ್ಲೂ ಭಾಗವಹಿಸಿದ್ದರು. ಮೇಯರ್‌ ಚುನಾವಣೆಯಲ್ಲೂ ಮತ ಚಲಾಯಿಸಿದ್ದರು.

ಬಹುಸದಸ್ಯತ್ವಕ್ಕೆ ಇಲ್ಲ ಅವಕಾಶ

ಒಬ್ಬ ವ್ಯಕ್ತಿ ಬಿಬಿಎಂಪಿ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ವಾರ್ಡ್‌ಗಳ ಸದಸ್ಯನಾಗಿ ಚುನಾಯಿತನಾದರೆ, ಅವರು ಯಾವ ವಾರ್ಡ್ ಸದಸ್ಯರಾಗಿ ಮುಂದುವರಿಯಲು ಬಯಸುತ್ತಾರೆ ಎಂಬ ಬಗ್ಗೆಈ ಚುನಾವಣೆ ಮುಗಿದ ಮೂರು ದಿನಗಳ ಒಳಗೆ ಆಯುಕ್ತರಿಗೆ ಲಿಖಿತವಾಗಿ ತಿಳಿಸಬೇಕು. ಒಂದು ವೇಳೆ ಪಾಲಿಕೆ ಸದಸ್ಯ ತನ್ನ ಆಯ್ಕೆಯನ್ನು ತಿಳಿಸದಿದ್ದರೆ ಅವರು ಯಾವ ವಾರ್ಡ್‌ನ ಸದಸ್ಯರಾಗಿ ಮುಂದುವರಿಯಲಿದ್ದಾರೆ ಎಂಬುದನ್ನುಆಯುಕ್ತರು ಚೀಟಿ ಎತ್ತುವ ಮೂಲಕ ನಿರ್ಧರಿಸಲಿದ್ದಾರೆ. ತೆರವಾಗುವ ಸದಸ್ಯ ಸ್ಥಾನವನ್ನು ಭರ್ತಿ ಮಾಡಲು ಹೊಸತಾಗಿ ಚುನಾವಣೆ ನಡೆಸಲಾಗುತ್ತಿದೆ. ಬಿಬಿಎಂಪಿ ಮಸೂದೆಯ ಸೆಕ್ಷನ್‌ 48 (10, (2). (3) ರಲ್ಲಿ ಈ ಬಗ್ಗೆ ವಿವರಿಸಲಾಗಿದೆ.

ಆಯ್ಕೆಯಾದ ತಿಂಗಳ ಒಳಗೆ ಆಸ್ತಿ ಘೋಷಣೆ ಕಡ್ಡಾಯ

ಪಾಲಿಕೆ ಸದಸ್ಯರು ಆಯ್ಕೆಯಾದ ಒಂದು ತಿಂಗಳ ಒಳಗಾಗಿ ತಮ್ಮ ಹಾಗೂ ಕುಟುಂಬದ ಸದಸ್ಯರ ಆಸ್ತಿ ವಿವರಗಳನ್ನು ಮೇಯರ್‌ ಅವರಿಗೆ ಸಲ್ಲಿಸಬೇಕು. ಈ ವಿವರಗಳು ಬಿಬಿಎಂಪಿ ದಾಖಲೆಗಳಲ್ಲಿ ಸೇರ್ಪಡೆಯಾಗಲಿವೆ. ನಂತರ ಪ್ರತಿ ವರ್ಷವೂ ಅದೇ ತಿಂಗಳಲ್ಲಿ ಆಸ್ತಿ ವಿವರಗಳನ್ನು ಸಲ್ಲಿಸಬೇಕು ಎಂದು ಬಿಬಿಎಂಪಿ ಮಸೂದೆಯ ಸೆಕ್ಷನ್‌ 10ರಲ್ಲಿ ಸ್ಪಷ್ಟಪಡಿಸಲಾಗಿದೆ. ಪಾಲಿಕೆ ಸದಸ್ಯರು ಆಸ್ತಿ ವಿವರ ಸಲ್ಲಿಸದಿದ್ದರೆ ಏನು ಕ್ರಮ ಎಂಬ ಬಗ್ಗೆ ಮಸೂದೆಯಲ್ಲಿ ಎಲ್ಲೂ ಉಲ್ಲೇಖವಿಲ್ಲ.

ವಲಯಗಳ ಸಂಖ್ಯೆ 15 ದಾಟುವಂತಿಲ್ಲ

ಸರ್ಕಾರವು ಬಿಬಿಎಂಪಿ ಜೊತೆ ಸಮಾಲೋಚಿಸಿ ಅಧಿಸೂಚನೆ ಹೊರಡಿಸುವ ಮೂಲಕ ವಲಯಗಳನ್ನು ರಚಿಸಬಹುದು. ಆದರೆ, ವಲಯಗಳ ಗರಿಷ್ಠ ಸಂಖ್ಯೆ 15 ದಾಟುವಂತಿಲ್ಲ ಎಂದು ಮಸೂದೆಯ ಸೆಕ್ಷನ್‌ 12 (1), (20 ಹಾಗೂ (3) ಹೇಳುತ್ತದೆ.

ಹೊಸ ವಲಯ ರಚಿಸುವುದಾದರೆ ಅದನ್ನು ನಿಖರವಾಗಿ ಗುರುತು ಮಾಡಿ ಶಿಫಾರಸು ಮಾಡಲು ಪಾಲಿಕೆ, ಸರ್ಕಾರ ಸಹಾಗೂ ಸಾರ್ವಜನಿಕ ವಲಯದ ಪ್ರಮುಖ ಸದಸ್ಯರನ್ನು ಒಳಗೊಂಡ ಆಯೋಗವನ್ನು ರಚಿಸಬೇಕು. ಈ ಕುರಿತು ಅಧಿಕೃತವಾಗಿ ರಾಜ್ಯಪತ್ರದಲ್ಲಿ ಪ್ರಕಟಿಸುವ ಮುನ್ನ ಅದರ ಕರಡನ್ನು ಪ್ರಕಟಿಸಿ ಪ್ರತಿಕ್ರಿಯೆ ಅಥವಾ ಆಕ್ಷೇಪಣೆ ಸಲ್ಲಿಸಲು ಕನಿಷ್ಠ 30 ದಿನ ಕಾಲಾವಕಾಶ ನೀಡಬೇಕು ಎಂದು ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಬಿಬಿಎಂಪಿಯಲ್ಲಿ ಪ್ರಸ್ತುತ ಎಂಟು ವಲಯಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT