ಬೆಂಗಳೂರು: ಪೀಣ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸ್ಕೂಟರ್ ಉರುಳಿಬಿದ್ದು ಅಪಘಾತ ಸಂಭವಿಸಿದ್ದು, ಬಾಲಕಿ ನಕ್ಷತ್ರ (8) ಮೃತಪಟ್ಟಿದ್ದಾರೆ. ಆಕೆಯ ತಂದೆ ರಮೇಶ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಗಂಗೊಂಡನಹಳ್ಳಿ ನಿವಾಸಿ ರಮೇಶ್ ಹಾಗೂ ಮಗಳು ನಕ್ಷತ್ರ, ನೆಲಗೆದರನಹಳ್ಳಿ ಮುಖ್ಯರಸ್ತೆಯಲ್ಲಿ ಭಾನುವಾರ ರಾತ್ರಿ ಸ್ಕೂಟರ್‌ನಲ್ಲಿ ಹೊರಟಿದ್ದಾಗ ಅವಘಡ ಸಂಭವಿಸಿದೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೀಣ್ಯ ಸಂಚಾರ ಠಾಣೆ ಪೊಲೀಸರು ಹೇಳಿದರು.
‘ರಮೇಶ್ ಅವರು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಕ್ಷತ್ರ, ಎರಡನೇ ತರಗತಿಯಲ್ಲಿ ಓದುತ್ತಿದ್ದಳು’ ಎಂದರು.
ಬ್ಯಾಗ್ ಮರೆತು ಬಂದಿದ್ದ ತಂದೆ: ‘ಭಾನುವಾರ ಕೆಲಸಕ್ಕೆ ಹೋಗಿದ್ದ ರಮೇಶ್, ಎಂದಿನಂತೆ ಸಂಜೆ ಮನೆಗೆ ವಾಪಸ್ಸಾಗಿದ್ದರು. ಆದರೆ, ಊಟದ ಬ್ಯಾಗ್ ಕಾರ್ಖಾನೆಯಲ್ಲಿ ಮರೆತು ಬಂದಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಬ್ಯಾಗ್ ತರುವುದಕ್ಕಾಗಿ ಪುನಃ ಕಾರ್ಖಾನೆಯತ್ತ ಹೋಗಲು ಸಜ್ಜಾಗಿದ್ದರು. ಮಗಳು ನಕ್ಷತ್ರ ಸಹ ತಂದೆ ಜೊತೆ ಹೋಗುವುದಾಗಿ ಹಠ ಮಾಡಿದ್ದಳು. ಹೀಗಾಗಿ, ಮಗಳನ್ನು ಸ್ಕೂಟರ್‌ನಲ್ಲಿ ಹತ್ತಿಸಿಕೊಂಡು ರಮೇಶ್ ಕಾರ್ಖಾನೆಯತ್ತ ತೆರಳುತ್ತಿದ್ದರು’ ಎಂದರು.
‘ಮಾರ್ಗಮಧ್ಯೆಯೇ ಸ್ಕೂಟರ್ ಉರುಳಿಬಿದ್ದಿತ್ತು. ತಂದೆ–ಮಗಳು ಇಬ್ಬರೂ ವಾಹನ ಸಮೇತ ರಸ್ತೆಗೆ ಬಿದ್ದಿದ್ದರು. ತೀವ್ರ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಕೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.