ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೆ ದಂತ ಚಿಕಿತ್ಸಾ ವಾಹನ ಬಂತು

ಮಾನ್ಯತೆಗಾಗಿ ಕಾಯುತ್ತಿದೆ ಸರ್ಕಾರಿ ದಂತ ಕಾಲೇಜು
Last Updated 25 ಮೇ 2018, 6:18 IST
ಅಕ್ಷರ ಗಾತ್ರ

ಬಳ್ಳಾರಿ: ಹಲ್ಲುಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರಲು ಆಗದ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರಿಗಾಗಿ ಈಗ ದಂತ ಚಿಕಿತ್ಸಾ ವಾಹನ ಸೌಕರ್ಯ ದೊರಕಲಿದೆ.

ಹೈದರಾಬಾದ್‌ ಕರ್ನಾಟಕದ ಏಕೈಕ ಹಾಗೂ ರಾಜ್ಯದ ಎರಡನೇ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಎಂಬ ಹೆಗ್ಗಳಿಕೆಯುಳ್ಳ ನಗರದ ಕಾಲೇಜಿಗೆ ಈ ವಾಹನ ಮಂಜೂರಾಗಿದೆ. ಮಂಗಳವಾರ ಈ ವಾಹನ ಕಾರ್ಯಾರಂಭ ಮಾಡಿದೆ. ಬೆಂಗಳೂರಿನಲ್ಲಿರುವ ರಾಜ್ಯದ ಮೊದಲ ಸರ್ಕಾರಿ ದಂತ ಕಾಲೇಜಿನಲ್ಲಿ ಮಾತ್ರ ಇದುವರೆಗೆ ಈ ಸೌಕರ್ಯವಿತ್ತು.

ನಗರದ ವಿಮ್ಸ್‌ ಆಸ್ಪತ್ರೆಯ ಆವರಣದಲ್ಲಿರುವ ಕಾಲೇಜಿನ ವೈದ್ಯ ಬೋಧಕರು ಮತ್ತು ವಿದ್ಯಾರ್ಥಿಗಳು ಜಿಲ್ಲೆಯ ಹಳ್ಳಿಗಳಲ್ಲಿ ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಳ್ಳುವುದು ಸುಲಭವಾಗಲಿದೆ.

ಇದುವರೆಗೂ ಕಾಲೇಜಿನ ವತಿಯಿಂದ ಗ್ರಾಮಗಳಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದರೂ, ಸ್ಥಳದಲ್ಲೇ ಚಿಕಿತ್ಸೆ ನೀಡುವುದು ಸಾಧ್ಯವಿರಲಿಲ್ಲ. ಹಲ್ಲು ತೆಗೆಸುವುದು, ಹುಳುಕು ಹಲ್ಲನ್ನು ಸ್ವಚ್ಛಗೊಳಿಸಿ ಭರ್ತಿ ಮಾಡುವುದು ಸೇರಿದಂತೆ ಅಲ್ಪಪ್ರಮಾಣದ ಚಿಕಿತ್ಸೆಗಳನ್ನು ವಾಹನದಲ್ಲೇ ನೀಡಬಹುದು.

ವಾಹನದಲ್ಲಿ ದಂತ ಚಿಕಿತ್ಸೆಗೆ ಬೇಕಾಗುವ ಎರಡು ಕುರ್ಚಿಗಳನ್ನು ಅಳವಡಿಸಲಾಗಿದೆ. ವೈದ್ಯರು ಏಕಕಾಲಕ್ಕೆ ಇಬ್ಬರಿಗೆ ಚಿಕಿತ್ಸೆ ನೀಡಬಹುದು. ಮೂವರು ವೈದ್ಯರು, ನಾಲ್ವರು ಶಸ್ತ್ರಚಿಕಿತ್ಸಕರು ಮತ್ತು ಬಿಡಿಎಸ್‌ ಅಂತಿಮ ವರ್ಷದ ಕನಿಷ್ಠ 15 ವಿದ್ಯಾರ್ಥಿಗಳು ಈ ವಾಹನದಲ್ಲಿ ಸಂಚರಿಸಲಿದ್ದಾರೆ. ಅವರೊಂದಿಗೆ ಸಹಾಯಕ ಸಿಬ್ಬಂದಿಯೂ ಇರಲಿದ್ದಾರೆ.

’ವಾಹನದಲ್ಲಿ ಸಂಚರಿಸಿ ಪ್ರತಿ ತಿಂಗಳೂ 10ರಿಂದ15 ಸಮುದಾಯ ಶಿಬಿರಗಳನ್ನು ಆಯೋಜಿಸುವ ಗುರಿ ಇದೆ. ಗ್ರಾಮೀಣ ಪ್ರದೇಶದವರಿಗೆ ಈ ಸೌಕರ್ಯ ವರದಾನವಾಗಲಿದೆ’ ಎಂದು ಪ್ರಾಚಾರ್ಯರಾದ ಡಾ.ಎಚ್‌.ಎಸ್‌.ಭಾರತಿ ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.

ಮಾನ್ಯತೆಗಾಗಿ ಕಾಯುತ್ತಿದೆ ಕಾಲೇಜು

ಬಳ್ಳಾರಿ: ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅಧೀನದಲ್ಲಿರುವ ಕಾಲೇಜು 2007ರಲ್ಲಿ ಆರಂಭವಾದರೂ, 2008ರಿಂದ ಬೋಧನೆಆರಂಭವಾಗಿತ್ತು. ಆದರೆ ಈವರೆಗೂ ಕಾಲೇಜಿಗೆ ಭಾರತೀಯ ದಂತ ವೈದ್ಯ ಪರಿಷತ್ತಿನ ಅನುಮೋದನೆ ದೊರೆತಿಲ್ಲ. ಕಾಲೇಜಿನಲ್ಲಿ ಸೌಕರ್ಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳನ್ನು ದಾಖಲಿಸಿ ಕೊಳ್ಳಬಾರದು ಎಂದು 2015ರ ಜೂನ್‌ ತಿಂಗಳಲ್ಲಿ ಪರಿಷತ್ತು ಸೂಚಿಸಿತ್ತು. ಅದೇ ತಿಂಗಳಲ್ಲಿ ಸಿಇಟಿ ಪ್ರಕಟಿಸಿದ್ದ ಅಣುಕು ಸೀಟು ಹಂಚಿಕೆ ಪಟ್ಟಿಯಿಂದ ಕಾಲೇಜಿನ ಹೆಸರನ್ನು ತೆಗೆಯಲಾಗಿತ್ತು. ‘ಪರಿಷತ್ತಿನ ಪ್ರಮುಖರು ಇತ್ತೀಚೆಗೆ ಕಾಲೇಜಿಗೆ ಭೇಟಿ ನೀಡಿದ್ದು, ಮೂರ್ನಾಲ್ಕು ಕೊರತೆ ಉಲ್ಲೇಖಿಸಿದ್ದಾರೆ. ಅವುಗಳನ್ನು ನೀಗಿಸಿ, ವರದಿ ಸಲ್ಲಿಸಲಾಗುವುದು’ ಎಂದು ವಿಮ್ಸ್‌ ನಿರ್ದೇಶಕ ಡಾ.ಪ್ರಭಂಜನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT