ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ: ನ.3ರಿಂದ ನಾಲ್ಕು ದಿನ ‘ಕೃಷಿ ಮೇಳ’

Last Updated 7 ಅಕ್ಟೋಬರ್ 2022, 21:21 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನ.3ರಿಂದ 6ರ ತನಕ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ‘ಕೃಷಿಯಲ್ಲಿ ನವೋದ್ಯಮ’ ಘೋಷವಾಕ್ಯದಡಿ ಕೃಷಿ ಮೇಳ ಆಯೋಜಿಸಲಾಗಿದೆ’ ಎಂದು ವಿವಿಯ ಕುಲಪತಿ ಡಾ.ಕೆ.ಸಿ. ನಾರಾಯಣಸ್ವಾಮಿ ತಿಳಿಸಿದರು.

‘ಈ ಬಾರಿಯ ಮೇಳದಲ್ಲಿ ವಿವಿಯ ಸಂಶೋಧಕರು ಅಭಿವೃದ್ಧಿಪಡಿಸಿರುವ, 9 ಹೊಸ ತಳಿ ಹಾಗೂ 38 ತಂತ್ರಜ್ಞಾನ ಬಿಡುಗಡೆ ಮಾಡಲಾಗುವುದು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೊಸ ತಳಿ ಬಿಡುಗಡೆ ಮಾಡಲಿದ್ದಾರೆ. ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಕೃಷಿ ಮೇಳದಲ್ಲಿ ಹೆಚ್ಚಿನ ಜನರು ಸೇರಲು ಸಾಧ್ಯವಾಗಿರಲಿಲ್ಲ. ಈ ವರ್ಷ ನಾಲ್ಕು ದಿನ ನಡೆಯುವ ಮೇಳವನ್ನು ಅಂದಾಜು 15 ಲಕ್ಷ ಜನರು ವೀಕ್ಷಿಸುವ ಅಂದಾಜಿದೆ. ಅದಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಅವರು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭತ್ತದಲ್ಲಿ ಕೆಎಂಪಿ 225 ಹಾಗೂ ಆರ್‌ಎನ್‌ಆರ್‌ 15048 ಹೊಸ ತಳಿ ಅಭಿವೃದ್ಧಿಪಡಿಸಲಾಗಿದೆ. ಕೆಎಂಪಿ 225 ತಳಿಯು 120ರಿಂದ 125 ದಿನಗಳಲ್ಲಿ ಕಟಾವಿಗೆ ಬರಲಿದೆ. ಎಲೆ ಹಾಗೂ ಕುತ್ತಿಗೆ ಬೆಂಕಿರೋಗದ ಸಾಧಾರಣ ನಿರೋಧಕತೆ ಹೊಂದಿದೆ. ಆರ್‌ಎನ್‌ಆರ್‌ ತಳಿಯು ಉತ್ಕೃಷ್ಟ ದರ್ಜೆಯದ್ದಾಗಿದೆ. ಮುಸುಕಿನ ಜೋಳ ಎಂಎಎಚ್‌ 14–138, ಕೊರ್ಲೆ ಜಿಪಿಯುಬಿಟಿ 2, ಅವರೆ ಎಚ್ಎ 5, ಎಳ್ಳು ಜಿಕೆವಿಕೆಎಸ್‌ 1, ಹುಚ್ಚೆಳ್ಳು ಕೆಬಿಎನ್‌ 2, ಹರಳು ಸಂಕರ ತಳಿ ಐಸಿಎಚ್‌ 66, ಮೇವಿನ ಜೋಳ ಸಿಎನ್‌ಎಫ್‌ಎಸ್‌ 1 ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು, ಸಮಗ್ರ ಬೇಸಾಯ ಪದ್ಧತಿ, ಸಿರಿಧಾನ್ಯಗಳು ಹಾಗೂ ಮಹತ್ವ, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿ, ಸಮಗ್ರ ಪೋಷಕಾಂಶಗಳು, ರೋಗ ಹಾಗೂ ಕೀಟ ನಿರ್ವಹಣೆ, ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು, ಮಳೆ ಹಾಗೂ ಚಾವಣಿ ನೀರು ಸಂಗ್ರಹ, ಸುಧಾರಿತ ಕೃಷಿ ಯಂತ್ರೋಪಕರಣ ಪ್ರದರ್ಶನ, ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ಹವಾಮಾನ ಚತುರ ಕೃಷಿ ಹಾಗೂ ಮಣ್ಣುರಹಿತ ಕೃಷಿ ಪ್ರಾತ್ಯಕ್ಷಿಕೆಗಳು ಮೇಳದಲ್ಲಿ ಇರಲಿವೆ’ ಎಂದು ಹೇಳಿದರು.

‘ಒಟ್ಟು 800 ಮಳಿಗೆಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ’ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿಸ್ತರಣಾ ನಿರ್ದೇಶಕ ಡಾ.ಕೆ.ನಾರಾಯಣಗೌಡ, ಸಂಶೋಧನಾ ನಿರ್ದೇ ಶಕ ಕೆ.ಬಿ.ಉಮೇಶ್‌, ಹಿರಿಯ ವಾರ್ತಾ ತಜ್ಞ ಡಾ.ಕೆ.ಶಿವರಾಮ್‌ ಹಾಜರಿದ್ದರು.

ಕೃಷಿ ಸಾಧಕರಿಗೆ ಪುರಸ್ಕಾರ

ಎಚ್‌.ಡಿ.ದೇವೇಗೌಡ ಅತ್ಯುತ್ತಮ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ, ಡಾ.ಎಚ್‌.ಎಚ್‌.ಮರೀಗೌಡ ಅತ್ಯುತ್ತಮ ತೋಟಗಾರಿಕೆ ರೈತ/ ರೈತ ಮಹಿಳೆ ಪ್ರಶಸ್ತಿ, ಕ್ಯಾನ್‌ ಬ್ಯಾಂಕ್‌ ಅತ್ಯುತ್ತಮ ರೈತ–ರೈತ ಮಹಿಳೆ ಪ್ರಶಸ್ತಿ, ಡಾ.ಆರ್‌. ದ್ವಾರಕೀನಾಥ್‌ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಹಾಗೂ ರೈತ/ ರೈತ ಮಹಿಳಾ ಪ್ರಶಸ್ತಿಯನ್ನು ನ.3ರಂದು ಪ್ರದಾನ ಮಾಡಲಾಗುವುದು. ಜಿಲ್ಲಾಮಟ್ಟದ 10 ಹಾಗೂ 61 ತಾಲ್ಲೂಕುಮಟ್ಟದ ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಗುವುದು. ತಾಲ್ಲೂಕು ಮಟ್ಟದ ಪ್ರಶಸ್ತಿ ಯುವ ಕೃಷಿಕರಿಗೆ ನೀಡಲಾಗುತ್ತಿದೆ. ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT