ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ರಗಳೆ: ಕಳೆಗುಂದಿದ ಕೃಷಿ ಮೇಳ

Last Updated 11 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕಳೆಗಟ್ಟಿದ್ದ ಕೃಷಿ ಮೇಳಕ್ಕೆ ಮಳೆ ಕೊಂಚ ಅಡ್ಡಿಯುಂಟು ಮಾಡಿತ್ತು. ಸುರಿವ ಮಳೆಯ ನಡುವೆಯೂ ರೈತರು ಮಳಿಗೆಗಳಿಗೆ ಮತ್ತು ಕೃಷಿ ತಾಕುಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಕೃಷಿ ಮೇಳ ಆರಂಭವಾದ ಗುರುವಾರವೇ ಜಿಟಿಜಿಟಿ ಮಳೆ ನಗರದಲ್ಲಿ ಆರಂಭವಾಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಮೇಳ ಉದ್ಘಾಟನೆ ಆದ ಬಳಿಕ ಧಾರಾಕಾರವಾಗಿ ಸುರಿಯಲು ಆರಂಭವಾದ ಮಳೆ ಸಂಜೆ ತನಕವೂ ಬಿಡಲಿಲ್ಲ.

‌ಕೃಷಿ ಯಂತ್ರೋಪಕರಣ, ಕೃಷಿ ನೀರಾವರಿ ಸಲಕರಣೆ, ‌ಕುರಿ, ಕೋಳಿ, ಮೀನು ಸಾಕಣೆ... ಹೀಗೆ ಹಲವು ವಿಭಾಗಗಳನ್ನು ಮಾಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಎರಡು ಬದಿಯಲ್ಲಿ ಮಳಿಗೆ ಇದ್ದರೆ ಮಧ್ಯದಲ್ಲಿ ಜನರ ಓಡಾಟಕ್ಕೆ ವಿಶಾಲವಾದ ಜಾಗ ಬಿಡಲಾಗಿದೆ. ಮಳಿಗೆ ನಿರ್ಮಿಸಲು ಮಣ್ಣು ಅಗೆದು ಸಿದ್ಧಪಡಿಸಲಾಗಿದ್ದು, ಅದರ ಮೇಲೆ ಸುರಿದ ಮಳೆಯಿಂದಾಗಿ ಇಡೀ ಆವರಣ ಸಂಪೂರ್ಣ ಕೆಸರುಗದ್ದೆಯಾಗಿ ಮಾರ್ಪಟ್ಟಿತ್ತು.

ಒಂದೆಡೆಯಿಂದ ಮತ್ತೊಂದೆಡೆಗೆ ಮಳೆಯ ನಡುವೆ ಸಾಗುವುದೇ ಪ್ರಯಾಸವಾಗಿತ್ತು. ದೂರದ ಊರುಗಳಿಂದ ಬಂದಿದ್ದ ರೈತರು ಎಲ್ಲ ಮಳಿಗೆಗಳಿಗೆ ಭೇಟಿ ನೀಡಲು ಸಾಧ್ಯವಾಗದೆ ನಿಂತಲ್ಲೇ ನಿಲ್ಲಬೇಕಾಯಿತು.

ಊಟದ ಹಾಲ್‌ಗೆ ಹೋಗಲು ದಾರಿಯೇ ಇಲ್ಲದೆ ಜನ ಬಿದ್ದು ಎದ್ದು ಕೆಸರಿನಲ್ಲೇ ಊಟದ ಅಂಕಣಕ್ಕೆ ಸಾಗುವುದು ಅನಿವಾರ್ಯವಾಗಿತ್ತು. ಅದರ ಪಕ್ಕದಲ್ಲಿ ಅಳವಡಿಸಿರುವ ಆಹಾರ ಮಳಿಗೆಗಳಲ್ಲಿ ಬಗೆ ಬಗೆಯ ಸಸ್ಯಾಹಾರ ಮತ್ತು ಮಾಂಸಾಹಾರದ ಮಳಿಗೆಗಳಿದ್ದವು. ಆದರೆ, ಮಳೆ ನಡುವೆ ಕುಳಿತು ಊಟ ಮಾಡಲು ಸಾಧ್ಯವಾಗದ ಕಾರಣ ಆ ಮಳಿಗೆಗಳಲ್ಲಿ ಜನರಿಲ್ಲದೆ ಖಾಲಿ ಇದ್ದವು.

‘ಮೇಳದಲ್ಲಿ ರೈತರು ತಿಳಿದುಕೊಳ್ಳಬೇಕಾದ ಹಲವು ತಳಿ ಮತ್ತು ತಂತ್ರಜ್ಞಾನದ ಮಾಹಿತಿ ಇದೆ. ಆದರೆ, ಮಳೆ ಕಾರಣ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗುವುದೇ ಕಷ್ಟವಾಗಿದೆ’ ಎಂದು ಎಚ್‌.ಡಿ. ಕೋಟೆಯಿಂದ ಬಂದಿದ್ದ ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT