ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಸಿಬ್ಬಂದಿ ಕೊಲೆ: ಮೂರು ಎಫ್‌ಐಆರ್

ಅಪ್ರಾಪ್ತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪ
Last Updated 11 ಡಿಸೆಂಬರ್ 2021, 4:43 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಭದ್ರತಾ ಸಿಬ್ಬಂದಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಯಲಹಂಕ ಉಪನಗರ ಪೊಲೀಸರು, ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

‘ನ. 22ರಂದು ಭದ್ರತಾ ಸಿಬ್ಬಂದಿ ಕೊಲೆ ಆಗಿತ್ತು. ಅವರ ಮಗಳ ಸ್ನೇಹಿತನೇ ಕೃತ್ಯ ಎಸಗಿದ್ದು ತನಿಖೆಯಿಂದ ಗೊತ್ತಾಗಿತ್ತು. ಕೊಲೆ ಆರೋಪದಡಿ ಸ್ನೇಹಿತ ಹಾಗೂ ಇತರರ ವಿರುದ್ಧ ಮೊದಲ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತಮ್ಮ ಅಪ್ರಾಪ್ತ ಮಗಳ ಮೇಲೆಯೇ ಭದ್ರತಾ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಅದರಿಂದ ಬೇಸತ್ತ ಮಗಳು, ಸ್ನೇಹಿತರಿಗೆ ವಿಷಯ ತಿಳಿಸಿದ್ದರು. ಅದೇ ಕಾರಣಕ್ಕೆ ಸಿಟ್ಟಾದ ಸ್ನೇಹಿತರು, ಮನೆಗೆ ನುಗ್ಗಿ ಭದ್ರತಾ ಸಿಬ್ಬಂದಿಯನ್ನು ಕೊಲೆ ಮಾಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಭದ್ರತಾ ಸಿಬ್ಬಂದಿ ವಿರುದ್ಧವೂ ಇದೀಗ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಗರ್ಭಿಣಿಯಾದ ಅಪ್ರಾಪ್ತೆ: ‘ಕೊಲೆಯಾದ ಭದ್ರತಾ ಸಿಬ್ಬಂದಿಯ ಮಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಲಾಯಿತು. ಆಕೆ, ಗರ್ಭಿಣಿ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ಬಾಲಕಿ ಮೇಲೆ ಆಕೆಯ ಸ್ನೇಹಿತ ಸಹ ಲೈಂಗಿಕ ದೌರ್ಜನ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ, ಆತನ ವಿರುದ್ಧವೂ ಪೋಕ್ಸೊ ಕಾಯ್ದೆಯಡಿ ಇನ್ನೊಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನನ್ನು ಈಗಾಗಲೇ ಬಂಧಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT