ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹35 ಲಕ್ಷ ಮೌಲ್ಯದ ಚಿನ್ನದ ಆಭರಣ ಜಪ್ತಿ

Last Updated 27 ಡಿಸೆಂಬರ್ 2021, 18:07 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧೆಡೆ ಕಳವು ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಒಟ್ಟು 650 ಗ್ರಾಂ ಚಿನ್ನದ ಆಭರಣ ಜಪ್ತಿ ಮಾಡಲಾಗಿದೆ. ಇದರ ಮೌಲ್ಯ ₹35 ಲಕ್ಷ ಎಂದು ಅಂದಾಜಿಸಲಾಗಿದೆ.

‘ಶೇಖ್‌ ಇಲ್ಯಾಸ್‌ ಯಾನೆ ಇಲ್ಲು (34) ಹಾಗೂ ಎರಕಲ ಕಾವಡಿ ನಾಗೇಂದ್ರ ಯಾನೆ ನಾಗ (35) ಬಂಧಿತರು. ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದ ಇವರು ನಗರದಲ್ಲಿ ನಡೆದಿದ್ದ 6 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಐಷಾರಾಮಿ ಬದುಕು ನಡೆಸುವ ಆಸೆಯಿಂದ ತಮ್ಮ ಸಹಚರರ ಜೊತೆ ಸೇರಿ ಕಳವು ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

‘2008ರಲ್ಲಿ ಕಳವು ಮಾಡುವುದನ್ನು ಆರಂಭಿಸಿದ್ದ ಆರೋಪಿ ಇಲ್ಯಾಸ್‌, ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ, ಕರ್ನಾಟಕದ ಗೌರಿಬಿದನೂರು, ಬೆಂಗಳೂರಿನ ತಾವರೆಕೆರೆ ಹಾಗೂ ಇತರೆಡೆ ತನ್ನ ಸಹಚರರ ಜೊತೆ ಸೇರಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಹಲವು ಬಾರಿ ಜೈಲಿಗೆ ಹೋಗಿ ಬಂದರೂ ಕಳ್ಳತನ ನಿಲ್ಲಿಸಿರಲಿಲ್ಲ. ನಾಗೇಂದ್ರ ಕೂಡ ಅನಂತಪುರ, ಹಿಂದೂಪುರ, ಗೌರಿಬಿದನೂರು, ತುಮಕೂರಿನ ಮಧುಗಿರಿ, ಕೊರಟಗೆರೆ ಹಾಗೂ ಬೆಂಗಳೂರಿನ ವಿವಿಧೆಡೆ ನಡೆದಿದ್ದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದ್ದ’ ಎಂದು ಮಾಹಿತಿ ನೀಡಿದ್ದಾರೆ.

‘ಆರೋಪಿಗಳ ಬಂಧನದಿಂದ ಹೆಣ್ಣೂರು, ಜೆ.ಪಿ.ನಗರ, ಹೆಬ್ಬಾಳ, ಡಿ.ಜೆ.ಹಳ್ಳಿ, ಕೆ.ಆರ್‌.ಪುರ ಹಾಗೂ ಆಡುಗೋಡಿ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದಿದ್ದ ತಲಾ ಒಂದು ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT