ಮಂಗಳವಾರ, ನವೆಂಬರ್ 19, 2019
23 °C
ಪರಾರಿಯಾಗಿದ್ದ ಆರೋಪಿ ಸೆರೆ * ₹ 38.20 ಲಕ್ಷ ಮೌಲ್ಯದ ಚಿನ್ನಾಭರಣ ವಶ

ದೀಪಾವಳಿಯಂದೇ ಚಿನ್ನ ಕಳೆದುಕೊಂಡರು

Published:
Updated:

ಬೆಂಗಳೂರು: ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ದೋಚಿ, ರಾಜಸ್ಥಾನಕ್ಕೆ ಮರಳಿದ್ದ ಆರೋಪಿಯನ್ನು ಬಸವನ ಗುಡಿ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಅಜ್ಮೀರ್‌ ಜಿಲ್ಲೆಯ ಕುಶಾಲ್ ಸಿಂಗ್ ರಜಪೂತ್ (21) ಬಂಧಿತ ಆರೋಪಿ. ಬಂಧಿತನಿಂದ ₹ 38.20 ಲಕ್ಷ ಮೌಲ್ಯದ 955 ಗ್ರಾಂ ತೂಕದ ಚಿನ್ನಾಭರಣ ಮತ್ತು ₹ 12 ಸಾವಿರ ಮೌಲ್ಯದ 281 ಗ್ರಾಂ ತೂಕದ ಬೆಳ್ಳಿಯ ಸಾಮಗ್ರಿಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಮೆಹಕ್ ತಿರಗಲ್ ಎಂಬುವವರ ಮನೆಯಲ್ಲಿ ಕಳವು ಮಾಡಿ ಕುಶಾಲ್ ಸಿಂಗ್ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

ಮೆಹಕ್ ತಿರಗಲ್ ಅವರು ಚಿಕ್ಕಪೇಟೆಯಲ್ಲಿ ಅಂಗಡಿ ಹೊಂದಿದ್ದು, ಬಸವನಗುಡಿಯಲ್ಲಿ ನೆಲೆಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಪರಿಚಯಸ್ಥರ ಮೂಲಕ ಕುಶಾಲ್ ಸಿಂಗ್‌ನನ್ನು ಕೆಲಸಕ್ಕೆಂದು ರಾಜಸ್ಥಾನದಿಂದ ಕರೆಸಿಕೊಂಡಿದ್ದರು.

ದೀಪಾವಳಿ ದಿನ ಮನೆಯನ್ನು ಸ್ವಚ್ಛ ಮಾಡಲು ಕುಶಾಲ್ ಸಿಂಗ್‌ಗೆ ಸೂಚಿಸಿದ್ದ ಮೆಹಕ್, ಪತ್ನಿ ಜೊತೆ ಚಿಕ್ಕಪೇಟೆಯಲ್ಲಿರುವ ಅಂಗಡಿ ಪೂಜೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯ ಲಾಕರ್‌ನಲ್ಲಿದ್ದ ಚಿನ್ನದ ಒಡವೆಗಳನ್ನು ಚೀಲದಲ್ಲಿ ತುಂಬಿಕೊಂಡ ಆರೋಪಿ, ಜೋಧಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಸಂಜೆ ಐದು ಗಂಟೆ ಸುಮಾರಿಗೆ ಮನೆಗೆ ಬಂದ ಮೆಹಕ್ ದಂಪತಿಗೆ ಮನೆಯಲ್ಲಿ ಕಳವು ನಡೆದಿರುವುದು ಗೊತ್ತಾಗಿದೆ.

ಈ ಬಗ್ಗೆ ಬಸವನಗುಡಿ ಪೊಲೀಸ್‌ ಠಾಣೆಗೆ ಮೆಹಕ್ ತಿರಗಲ್ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು, ಶಂಕಿತ ಆರೋಪಿ ಕುಶಾಲ್ ಸಿಂಗ್‌ನ ಮೊಬೈಲ್ ನೆಟ್‌ವರ್ಕ್ ಪರಿಶೀಲಿಸಿದಾಗ ರೈಲು ಮಾರ್ಗದ ಮೂಲಕ ಆತ ರಾಜಸ್ಥಾನಕ್ಕೆ ಹೋಗಿರುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ರಾಜಸ್ಥಾನಕ್ಕೆ ತೆರಳಿದ ಪೊಲೀಸ್ ತಂಡ, ಸ್ಥಳೀಯ ಪೊಲೀಸರ ನೆರವು ಪಡೆದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಜೂಜಾಟ–ಬಂಧನ: ಮತ್ತೊಂದು ಪ್ರಕರಣದಲ್ಲಿ ಗಾಂಧಿ ಬಜಾರ್ ಮುಖ್ಯರಸ್ತೆಯ ಟಾಗೋರ್‌ ವೃತ್ತದ ಬಳಿ ಹೋಟೆಲ್‌ ಒಂದರ ಕಟ್ಟಡದ ಮೇಲೆ ಜೂಜಾಟದಲ್ಲಿ ತೊಡಗಿದ್ದ 20 ಮಂದಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ‌

ಬಂಧಿತರಿಂದ ₹ 6.47 ಲಕ್ಷ ನಗದು, 22 ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)