ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶಕರಿಂದ ಉತ್ತಮ ಕೃತಿ ಬರಲಿಲ್ಲ: ಎಸ್‌.ಎಲ್‌. ಭೈರಪ್ಪ

Last Updated 31 ಜುಲೈ 2022, 19:09 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಲ ವಿಮರ್ಶಕರು ಉತ್ತಮವಾದ ಕೃತಿಗಳನ್ನು ರಚಿಸುವಲ್ಲಿ ವಿಫಲರಾಗಿದ್ದಾರೆ. ನಾನಂತೂ ಯಾವುದೇ ಪುಸ್ತಕದ ವಿಮರ್ಶೆ ಮಾಡಲೇ ಇಲ್ಲ’ ಎಂದು ಸಾಹಿತಿ ಎಸ್‌.ಎಲ್‌. ಭೈರಪ್ಪ ಹೇಳಿದರು.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಮತ್ತು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಜಂಟಿಯಾಗಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿಶತವಾಧಾನಿ ಆರ್‌. ಗಣೇಶ್‌ ಅವರ ‘ಮಣ್ಣಿನ ಕನಸು’ ಕಾದಂಬರಿಯ ಮೂರನೇ ಆವೃತ್ತಿ ಬಿಡುಗಡೆ ಹಾಗೂ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿ ವಿಮರ್ಶೆಗಳು ಇರಲಿಲ್ಲ. ನವ್ಯ ಕಾಲಘಟ್ಟದಲ್ಲಿ ಲೇಖಕರೇ ಪುಸ್ತಕ ಪ್ರಕಟವಾಗುವುದಕ್ಕಿಂತ ಮುಂದೆ ವಿಮರ್ಶೆ ಬರೆದು ಪ್ರಕಟಿಸುತ್ತಿದ್ದರು ಅಥವಾ ಸ್ನೇಹಿತರಿಂದ ಬರೆಸುತ್ತಿದ್ದರು’ ಎಂದರು.

‘ಮಣ್ಣಿನ ಕನಸು’ ಕಾದಂಬರಿ ಸಂಸ್ಕೃತಕ್ಕೆ ಅನುವಾದವಾಗಬೇಕು. ನಂತರ ಎಲ್ಲ ಭಾಷೆಗಳಿಗೂ ಅನುವಾದರೆ ಅದರ ಮೂಲ ಆಶಯ ಎಲ್ಲೆಡೆ ತಲುಪುತ್ತದೆ. ಈ ಕಾದಂಬರಿ ಕನ್ನಡಕ್ಕೆ ಒಂದು ಹೊಸ ರೀತಿಯದ್ದು. ಗಣೇಶ್‌ ಅವರು ಹೊಸ ಪ್ರಯತ್ನ ಮಾಡಿದ್ದಾರೆ. ಸಂಸ್ಕೃತದ ಮೂಲದಿಂದ ಹೊರ ಬಂದಿರುವ ಈಕಾದಂಬರಿಯನ್ನು ಮೊದಲನೇ ಓದಿನಲ್ಲಿ ಅರ್ಥೈಸಿಕೊಳ್ಳುವುದು ಕಷ್ಟ. ಒಂದೆರಡು ಬಾರಿ ಓದಬೇಕು’ ಎಂದರು.

‘ಜನರು ಈ ಕಾದಂಬರಿಯನ್ನು ಸ್ವೀಕರಿಸಿರುವುದು ಅತ್ಯಂತ ಸಂತಸದ ವಿಚಾರ. ಅದಕ್ಕೇ ಇದು ಮೂರನೇ ಆವೃತ್ತಿಯಲ್ಲಿ ಬಿಡುಗಡೆ ಆಗುತ್ತಿದೆ. ಇದು ಓದುಗರಲ್ಲಿರುವ ಒಳ್ಳೆಯ ಅಭಿರುಚಿಯನ್ನು ಸೂಚಿಸುತ್ತದೆ’ ಎಂದರು.

‘ಈ ಕಾದಂಬರಿ ಇಂಗ್ಲಿಷ್‌ ಸೇರಿದಂತೆ ಎಲ್ಲ ಭಾಷೆಗಳಿಗೆ ಅನುವಾದವಾಗಬೇಕು. ಇದು ಬುದ್ಧನ ಕಾಲದ್ದಾಗಿರುವುದರಿಂದ, ನಾಟಕಗಳ ಕಥೆಗಳನ್ನು ಇದು ಒಳಗೊಂಡಿದೆ. ಅನುವಾದಗಳಾದರೆ ಸ್ವಾಗತ’ ಎಂದರು.

ಉತ್ಥಾನ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯ ಸಂಪಾದಕ ಎಸ್‌.ಆರ್‌. ರಾಮಮೂರ್ತಿ ಅವರು ‘ಮಣ್ಣಿನ ಕನಸು’ ಕಾದಂಬರಿಯ ಮೂರನೇ ಆವೃತ್ತಿ ಬಿಡುಗಡೆ ಮಾಡಿದರು. ಕಾದಂಬರಿ ಬಗ್ಗೆ ಮಹೇಶ ಅಡಕೋಳಿ, ಕೆ. ದಿವಾಕರ ಹೆಗಡೆ, ಶ್ರೀಲಲಿತಾ ರೂಪನಗುಡಿ ಮಾತನಾಡಿದರು. ಲೇಖಕ ಆರ್‌. ಗಣೇಶ್‌, ಇನ್ಫೊಸಿಸ್ ಪ್ರತಿಷ್ಠಾನದ ಸುಧಾಮೂರ್ತಿ, ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT