ಶನಿವಾರ, ಡಿಸೆಂಬರ್ 3, 2022
26 °C
ತಾಂತ್ರಿಕತೆ ಅನಾವರಣ, ನವೋದ್ಯಮ ಆಕರ್ಷಣೆ  

‘ಕೃಷಿ ಮೇಳ’ದಲ್ಲಿ ರೈತ ಜಾತ್ರೆ, ಮಳೆಯ ನಡುವೆಯೂ‌ ಮೊದಲ ದಿನ ಉತ್ತಮ ಪ್ರತಿಕ್ರಿಯೆ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿರಿಧಾನ್ಯಗಳ ವೈಭವ, ಔಷಧೀಯ ಹಾಗೂ ಸುಗಂಧ ದ್ರವ್ಯ ಸಸ್ಯಗಳ ಸೊಬಗು, ಕುರಿ–ಕೋಳಿ ಹೊಸ ತಳಿಗಳ ಆಕರ್ಷಣೆ, ಅನ್ನದಾತರಿಗೆ ನೆರವಾಗುವ ನವೋದ್ಯಮಗಳು, ಔಷಧ ಸಿಂಪಡಣೆಗೆ ಬಗೆಬಗೆಯ ಯಂತ್ರಗಳು, ಆಲಂಕಾರಿಕ ಮೀನುಗಳು, ಕಳೆ ತೆಗೆಯಲು ತರಹೇವಾರಿ ಯಂತ್ರಗಳು, ವಿವಿಧ ತಳಿಯ ಹಣ್ಣುಗಳು...

– ಇವು ಕಂಡುಬಂದಿದ್ದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದ ಕೃಷಿ ಮೇಳದಲ್ಲಿ.

ಮಳೆಯ ನಡುವೆಯೂ ಆರಂಭವಾದ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಮೊದಲ ದಿನವಾದ ಗುರುವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೇಳವು ರೈತರ ಜಾತ್ರೆಯಂತೆ ಕಂಡುಬಂತು. ಕೃಷಿಕರ ಹುಮ್ಮಸ್ಸು ಹೆಚ್ಚಿಸಿತ್ತು.

ಮೇಳದಲ್ಲಿ ಸಾಧಕ ರೈತರ ಪರಿಶ್ರಮ, ಕೃಷಿಯಲ್ಲಿ ಲಾಭ ಕಂಡುಕೊಂಡ ಬಗೆ ಅನಾವರಣಗೊಂಡಿತ್ತು. ಖುಷ್ಕಿ ಬೇಸಾಯದ ಬೆಳೆ, ತೋಟಗಾರಿಕೆ ಮಳಿಗೆ, ಸಮಗ್ರ ಬೇಸಾಯ ಪದ್ಧತಿ ವಿಧಾನ, ಜಲಾನಯನ ನಿರ್ವಹಣೆ, ಹನಿ ನೀರಾವರಿ ಪದ್ಧತಿ, ಚಾವಣಿ ಹಾಗೂ ಮಳೆ ನೀರು ಸಂಗ್ರಹ ವಿಧಾನ, ಮಣ್ಣು ರಹಿತ ಕೃಷಿಯ ಆವಿಷ್ಕಾರ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳು ಮೇಳದಲ್ಲಿ ಗಮನ ಸೆಳೆಯುತ್ತಿವೆ.

ಮೇಳದಲ್ಲಿ ನಿರ್ಮಿಸಿದ್ದ 697 ಮಳಿಗೆ ಪೈಕಿ ಮೊದಲ ದಿವಸ 500ರಷ್ಟು ಮಳಿಗೆಗಳಲ್ಲಿ ಭರ್ತಿಯಾಗಿದ್ದವು. ಪ್ರತಿ ಮಳಿಗೆಯೂ ವಿಭಿನ್ನ ರೀತಿ ಅನುಭವ ಕಟ್ಟಿಕೊಟ್ಟವು.

ದೂರದ ಊರುಗಳಿಂದ ಆಗಮಿಸಿದ್ದ ರೈತರು ಪ್ರತಿ ಮಳಿಗೆಯತ್ತಲೂ ಕಣ್ಣು ಹಾಯಿಸಿ ಮಾಹಿತಿ ಪಡೆದುಕೊಂಡರು. ಯಂತ್ರೋಪಕರಣ ಮಳಿಗೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ರೈತರ ನೆರವಿಗೆ ವಿವಿಧ ಕಂಪನಿಗಳು ನಿರ್ಮಿಸಿರುವ ಉಪಕರಣಗಳು ಮೇಳದಲ್ಲಿ ಗಮನ ಸೆಳೆಯುತ್ತಿವೆ. ಸ್ಥಳದಲ್ಲಿಯೇ ಮಡಿಕೆ ತಯಾರಿಕೆ ಪ್ರಾತ್ಯಕ್ಷಿಕೆ ಹಾಗೂ ಜಾನಪದ ಕಲಾವಿದರ ಹಾಡುಗಳು ಮನ ಸೆಳೆಯಿತು.

ಉದ್ಘಾಟನಾ ಸಮಾರಂಭಕ್ಕೂ ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ನೆರೆದಿದ್ದರು. ವಿದೇಶಿ ಕುರಿ, ಕೋಳಿ ತಳಿಗಳು ಅವರ ಆಕರ್ಷಣೆ ಹೆಚ್ಚಿಸುವಂತೆ ಮಾಡಿತು.

ಹೊಸ ತಳಿಯತ್ತ ಚಿತ್ತ:

ವಿವಿ ತಜ್ಞರು ಅಭಿವೃದ್ಧಿ ಪಡಿಸಿರುವ ಒಟ್ಟು 9 ತಳಿಗಳನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಬಿಡುಗಡೆ ಮಾಡಿದರು. ಅವುಗಳ ಪ್ರಾತ್ಯಕ್ಷಿಕೆಯನ್ನು ರೈತರು ಮುಗಿಬಿದ್ದು ವೀಕ್ಷಿಸಿದರು.

ಕೃಷಿ ಇಲಾಖೆ, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆಯ ಮಳಿಗೆಗಳು, ಸರ್ಕಾರದಿಂದ ದೊರೆಯುವ ಯೋಜನೆಗಳ ಮಾಹಿತಿ ನೀಡಲಾಯಿತು. ನರ್ಸರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮಳಿಗೆ ಸ್ಥಾಪಿಸಲಾಗಿತ್ತು.

ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

– ಚಿಕ್ಕಬಳ್ಳಾಪುರದ ಎಚ್‌ಜಿ.ಗೋಪಾಲಗೌಡರಿಗೆ ‘ಎಚ್‌.ಡಿ.ದೇವೇಗೌಡ ರಾಜ್ಯಮಟ್ಟದ ಪ್ರಶಸ್ತಿ’

– ದೊಡ್ಡಬಳ್ಳಾಪುರದ ಸಿ.ನವಿಕ್ರಮ್‌ಗೆ ‘ಡಾ.ಎಂ.ಎಚ್‌.ಮರಿಗೌಡ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ’

– ಮದ್ದೂರಿನ ಸಿ.ಪಿ.ಕೃಷ್ಣಗೆ ‘ಕ್ಯಾನ್‌ ಬ್ಯಾಂಕ್‌ ರೈತ ಪ್ರಶಸ್ತಿ’

– ಹೊಳೆನರಸೀಪುರದ ಎಂ.ಕವಿತಾಗೆ ‘ಕ್ಯಾನ್‌ ಬ್ಯಾಂಕ್‌ ರೈತ ಮಹಿಳಾ ಪ್ರಶಸ್ತಿ’

– ಚಿಕ್ಕಬಳ್ಳಾಪುರದ ಎಂ.ಟಿ.ಮುನೇಗೌಡರಿಗೆ ‘ಡಾ.ಆರ್‌.ದ್ವಾರಕೀನಾಥ್‌ಗೆ ಅತ್ಯುತ್ತಮ ರೈತ ಪ್ರಶ್ತಸಿ’

– ಹಾಸನದ ಕೃಷಿ ವಿಜ್ಞಾನಿ ಡಾ.ರಾಜೇಗೌಡಗೆ ‘ಡಾ.ಆರ್‌.ದ್ವಾರಕೀನಾಥ್‌ ಪ್ರಶಸ್ತಿ’

ಕೃಷಿಗೆ ‘ಕೋಲಾರ ಮಾದರಿ’: ‌ಪಾಟೀಲ

‘ಕೋಲಾರದ ರೈತರು ಬರ ಸ್ಥಿತಿಯ ನಡುವೆಯೂ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ. ಇತರೆ ಭಾಗದ ರೈತರೂ ಈ ಮಾದರಿ ಅಳವಡಿಸಿಕೊಳ್ಳಬೇಕು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸಲಹೆ ನೀಡಿದರು.‌

ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ‘ಇಸ್ರೇಲ್‌ ಮಾದರಿ ಬೇಕಿಲ್ಲ. ಕೋಲಾರ ಮಾದರಿಯೇ ಸೂಕ್ತ’ ಎಂದರು.

‘ಜಲಾನಯನ ನಿರ್ವಹಣೆಗೆ ರಾಜ್ಯದಲ್ಲಿ ‘ಉತ್ಕೃಷ್ಟತಾ ಕೇಂದ್ರ’ ಸ್ಥಾಪಿಸಲಾಗುವುದು. ಬೆಂಗಳೂರು ಕೃಷಿ ವಿವಿಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗುವುದು. ಅದು ಯಶಸ್ವಿಯಾದರೆ ಚಾಮರಾಜನಗರ, ಬಾಗಲಕೋಟೆ, ಶಿವಮೊಗ್ಗ, ಧಾರವಾಡ, ಗಂಗಾವತಿ ಸೇರಿದಂತೆ ರಾಜ್ಯದ ಏಳು ಕಡೆ ಈ ಕೇಂದ್ರ ಸ್ಥಾಪಿಸಲಾಗುವುದು’ ಎಂದರು.

‘9.33 ಲಕ್ಷ ವಿದ್ಯಾರ್ಥಿಗಳಿಗೆ ₹ 421 ಕೋಟಿ ವಿದ್ಯಾನಿಧಿ ವಿತರಿಸಲಾಗಿದೆ. ರೈತರಿಗೆ ಡೀಸೆಲ್‌ಗೆ ಸಬ್ಸಿಡಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಕಳೆದ ಸಾಲಿಗಿಂತ ಈ ವರ್ಷ ಶೇ 10ರಷ್ಟು ಹೆಚ್ಚಿನ ಆಹಾರ ಉತ್ಪಾದನೆಯ ನಿರೀಕ್ಷೆಯಿದೆ’ ಎಂದು ತಿಳಿಸಿದರು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ‘ಇಸ್ರೇಲ್‌ ಕೃಷಿಗೆ ಸೂಕ್ತವಾದ ಹವಾಮಾನ ಹೊಂದಿಲ್ಲ. ಆದರೂ ಅಲ್ಲಿನ ರೈತರು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ಯಶಸ್ಸು ಸಾಧಿಸಿದ್ದಾರೆ. ಭಾರತವು ಕೃಷಿ ಪ್ರಧಾನ ದೇಶ. ನಮ್ಮ ರೈತರು ಯಶಸ್ಸು ಸಾಧಿಸಬೇಕು. ಸರ್ಕಾರದ ಸೌಲಭ್ಯದ ಸದ್ಬಳಕೆಯ ಜೊತೆಗೆ ಆಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಬೇಕು’ ಎಂದರು.

ಕುಲಪತಿ ಡಾ.ಎಸ್‌.ವಿ.ಸುರೇಶ, ವಿವಿ ವಿಸ್ತರಣಾ ನಿರ್ದೇಶಕ ಡಾ.ಕೆ.ನಾರಾಯಣಗೌಡ, ಡಾ.ಉಮೇಶ್‌ ಹಾಜರಿದ್ದರು.

ಕೆಸರುಮಯ ಮೈದಾನ

ಮಳೆಯ ಕಾರಣಕ್ಕೆ ಜಿಕೆವಿಕೆ ವಾತಾವರಣ ಕೆಸರುಮಯ ಆಗಿದ್ದು, ತೊಂದರೆ ಎದುರಾಯಿತು. ಇಡೀ ಆವರಣದಲ್ಲಿ ಓಡಾಟ ನಡೆಸಿ ಮೇಳ ವೀಕ್ಷಣೆ ಮಾಡುವವರು ಪರದಾಡಿದರು.

ಬಂದವರಿಗೆ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ₹ 50 ನೀಡಿದರೆ ಅನ್ನ, ಸಾಂಬಾರು, ಪಲ್ಯ, ಸಿಹಿ ತಿಂಡಿ, ಬೇಯಿಸಿದ ಮೊಟ್ಟೆ, ಮುದ್ದೆ ನೀಡಲಾಯಿತು.

ಅಂಕಿಅಂಶಗಳು

* 1.60 ಲಕ್ಷ ರೈತರಿಂದ ಮೊದಲ ದಿನ ಮೇಳ ವೀಕ್ಷಣೆ

* 7,650 ರಿಯಾಯಿತಿ ದರದಲ್ಲಿ ಊಟ ಸವಿದವರು

* ₹ 1.20 ಕೋಟಿ ವಹಿವಾಟು

ಕೃಷಿಗೆ ಅನುಕೂಲವಾಗುವ ಹೊಸ ಸಂಶೋಧನೆಗಳು, ನಮಗೆ ಬೇಕಾಗುವ ವಸ್ತುಗಳನ್ನು ಖರೀದಿಸಲು ಈ ಮೇಳ ಸಹಕಾರಿಯಾಗಿದೆ. ಹೊಸ ತಳಿಗಳ ಬೆಳೆ, ಹಣ್ಣು–ಹೂವು ಮತ್ತು ಕೋಳಿ, ಪ್ರಾಣಿಗಳ ತಳಿಗಳನ್ನು ನೋಡಲು ಸಿಗುತ್ತದೆ. ಪ್ರತಿವರ್ಷ ಇಲ್ಲಿಗೆ ಬರುತ್ತೇವೆ. ಮೇಳ ಖುಷಿಕೊಟ್ಟಿದೆ.

ರೇವಣ್ಣ ಸಿದ್ಧಯ್ಯ, ರೈತ ಚೋಳನಾಯಕನಹಳ್ಳಿ, ಮಾಗಡಿ

ನಾವು ಈಗಾಗಲೇ ಮಾಡುತ್ತಿರುವ ಕೃಷಿ ಪದ್ಧತಿಯನ್ನು ಸುಧಾರಿಸಬೇಕು. ಇಲ್ಲಿ ಹೊಸ ವಿಷಯಗಳನ್ನು ಕಂಡಿದ್ದೇವೆ. ಕೃಷಿ ಇಲಾಖೆ ನೆರವಿನಿಂದ ನಮ್ಮ ಬೇಸಾಯ ಪದ್ಧತಿಯಲ್ಲಿ ಅಳವಡಿಸಿಕೊಳ್ಳುತ್ತೇವೆ. ಕೃಷಿ ಮೇಳಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದು ಖುಷಿ ನೀಡಿದೆ.

ರಮೇಶ್, ರೈತ ಬರಾಳು ಗ್ರಾಮ, ಚನ್ನರಾಯಪಟ್ಟಣ, ಹಾಸನ ಜಿಲ್ಲೆ

ನಾವು ಬಂದದ್ದು ವ್ಯರ್ಥ ಆಗಬಾರದು. ಇಲ್ಲಿ ಕಂಡ ಹೊಸ ಮಾಹಿತಿಯನ್ನು ನಮ್ಮ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳುತ್ತೇವೆ. ಹಲವು ಹೊಸ ವಿಷಯಗಳನ್ನು ಇಲ್ಲಿ ಕಂಡಿದ್ದೇವೆ. ಬಿತ್ತನೆ ಬೀಜಗಳ ಮಾಹಿತಿ, ನರ್ಸರಿಗಳಲ್ಲಿ ಸಸಿ ಬೆಳೆಸುವ ಬಗೆಗಿನ ತಿಳಿವಳಿಕೆಯಿಂದಾಗಿ ಮೇಳ ಖುಷಿ ನೀಡಿದೆ.

ಲಕ್ಷ್ಮಮ್ಮ, ರೈತ ಮಹಿಳೆ, ಸೊಮಪುರ ಹೋಬಳಿ ದಾಬಸಪೇಟೆ

ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿದ ಹೊಸ ತಳಿಗಳು, ಎಂಜಿನಿಯರಿಂಗ್ ವಿಭಾಗ ಸೇರಿರುವುದರಿಂದ ಕೃಷಿಯಲ್ಲಿ ಹೊಸ ಆವಿಷ್ಕಾರಗಳಾಗುತ್ತಿರುವುದು ಬಹಳ ಖುಷಿ ನೀಡಿದೆ.

ಸುಮಾ, ವಿದ್ಯಾರ್ಥಿನಿ ಕೃಷಿ ಕಾಲೇಜು ಹಾಸನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು