ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ ಸಿನಿಮಾ ನೋಡಿ ಕನ್ನಡ ಕಲಿತೆ: ಸಯ್ಯದ್‌ ಇಸಾಕ್‌

ಸಯ್ಯದ್‌ ಇಸಾಕ್‌ ಅವರಿಗೆ ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿ ಪ್ರದಾನ
Last Updated 30 ಆಗಸ್ಟ್ 2021, 16:14 IST
ಅಕ್ಷರ ಗಾತ್ರ

ಬೆಂಗಳೂರು: ‘ನಟ ಡಾ.ರಾಜ್‌ಕುಮಾರ್‌ ಸಿನಿಮಾಗಳು ಮುಂದಿನ ಪೀಳಿಗೆಗೆ ಉತ್ತಮ ಸಂದೇಶಗಳನ್ನು ನೀಡುತ್ತಿದ್ದವು. ಶುದ್ಧ ಕನ್ನಡ ಹೇಗೆ ಮಾತನಾಡಬೇಕು ಎಂಬುದನ್ನು ಅವರು ತೋರಿಸಿಕೊಟ್ಟಿದ್ದರು. ನನಗೆ ಕನ್ನಡದ ಮೇಲೆ ಅಭಿಮಾನ ಹೆಚ್ಚಲು ಅವರ ಸಿನಿಮಾಗಳೇ ಕಾರಣ’ ಎಂದುಮೈಸೂರು ಕನ್ನಡ ಗ್ರಂಥಾಲಯದ ಸ್ಥಾಪಕ ಸಯ್ಯದ್ ಇಸಾಕ್ ಹೇಳಿದರು.

ಕನ್ನಡ ಪ್ರಕಾಶಕರ ಸಂಘವು ವಿಜಯನಗರದ ಜ್ಞಾನಯೋಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಕನ್ನಡಕ್ಕೆ ಏನಾದರೂ ಮಾಡಬೇಕು ಎಂಬ ತುಡಿತದೊಂದಿಗೆ 2010ರಲ್ಲಿ ಪುಟ್ಟ ಗುಡಿಸಿಲಿನಲ್ಲಿ ಎರಡು ಕನ್ನಡ ಪತ್ರಿಕೆಗಳನ್ನು ತಂದಿಟ್ಟೆ. ಇದು ಗ್ರಂಥಾಲಯದ ರೂಪ ಪಡೆದ ನಂತರಮಾಧ್ಯಮಗಳು ಪ್ರಚಾರ ನೀಡಿದವು. ಇದರಿಂದ ಕೆಲವರು ಉಚಿತವಾಗಿ ಪುಸ್ತಕಗಳನ್ನು ನೀಡಲು ಪ್ರಾರಂಭಿಸಿದರು. ಪುಸ್ತಕಗಳ ಸಂಖ್ಯೆ 7 ಸಾವಿರ ಮೀರಿತು. ಓದುಗರ ಸಂಖ್ಯೆಯೂ ಹೆಚ್ಚಾಯಿತು’ ಎಂದರು.

‘ಗ್ರಂಥಾಲಯವಿದ್ದ ಪ್ರದೇಶದಲ್ಲಿ ಉರ್ದು ಮಾತನಾಡುವವರೇ ಹೆಚ್ಚಾಗಿದ್ದರಿಂದ ಭಾರಿ ವಿರೋಧ ವ್ಯಕ್ತವಾಯಿತು. ಅಲ್ಲಿ ಅವಿದ್ಯಾವಂತರೇ ಹೆಚ್ಚಿದ್ದರು. ಗ್ರಂಥಾಲಯದ ಫಲಕಕ್ಕೆ ಮಸಿ ಬಳಿಯುತ್ತಿದ್ದರು. ಆದರೂ ನನ್ನ ಶ್ರಮಕ್ಕೆ ಕೊನೆಗೆ ಫಲ ಸಿಕ್ಕಿತು’ ಎಂದರು.

‘ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಪತ್ರಕರ್ತೆ ಆರ್. ಪೂರ್ಣಿಮಾ, ‘ಬಾಲ್ಯವಿವಾಹಕ್ಕೆ ಒಳಗಾಗಿ ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯಾದ ನಂಜನಗೂಡು ತಿರುಮಲಾಂಬ ಅವರು ನಂತರದಲ್ಲಿ ಶಿಕ್ಷಣ ಪಡೆದು, ಪತ್ರಿಕೆ ಹಾಗೂ ಪ್ರಕಾಶನ ರಂಗದಲ್ಲಿ ಅನನ್ಯ ಕೊಡುಗೆ ನೀಡಿದರು. ಅಂತಹವರ ಹೆಸರಿನಲ್ಲಿ ಪ್ರಶಸ್ತಿ ಪಡೆದುಕೊಂಡಿರುವುದು ಸಂತಸ ತಂದಿದೆ’ ಎಂದರು.

ಶಾಸಕ ಎಸ್. ಸುರೇಶ್‌ಕುಮಾರ್, ‘ನಮ್ಮಲ್ಲಿ ಬಹಳಷ್ಟು ‘ಮಾಡೆಲ್‌’ಗಳಿದ್ದಾರೆ. ಆದರೆ ‘ರೋಲ್ ಮಾಡೆಲ್‌’ಗಳು ತೀರಾ ಕಡಿಮೆ. ಸಯ್ಯದ್ ಇಸಾಕ್ ಅಂತಹವರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಿದೆ’ ಎಂದರು.

‘ಈ ಪ್ರಶಸ್ತಿಗಳ ಮೊತ್ತ ಹೆಚ್ಚಿಸಲು ತಲಾ ₹5 ಸಾವಿರ ನೀಡುತ್ತೇನೆ’ ಎಂದು ಘೋಷಿಸಿದರು.

ಸಾಹಿತಿ ಡಾ.ವಸುಂಧರಾ ಭೂಪತಿ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ, ಪ್ರಧಾನ ಕಾರ್ಯದರ್ಶಿ ನ. ರವಿಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT