ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರದಿಂದ ದಿನದಲ್ಲಿ 7 ತಾಸು ಮೆಟ್ರೊ ರೈಲು ಸಂಚಾರಕ್ಕೆ ಅವಕಾಶ

ವಾರಾಂತ್ಯದಲ್ಲಿ ಇಲ್ಲ ಸೇವೆ
Last Updated 19 ಜೂನ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸೋಮವಾರದಿಂದ (ಜೂನ್ 21) ಮೆಟ್ರೊ ರೈಲು ಸಂಚಾರ ಪುನರಾರಂಭಗೊಳ್ಳಲಿದ್ದು, ದಿನಕ್ಕೆ 7 ತಾಸು ಮಾತ್ರ ಸೇವೆ ಲಭ್ಯವಾಗಲಿದೆ. ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಶನಿವಾರ–ಭಾನುವಾರ ಮೆಟ್ರೊ ರೈಲು ಸೇವೆ ಇರುವುದಿಲ್ಲ.

‘ನಮ್ಮ ಮೆಟ್ರೊ’ದ ಹಸಿರು ಮತ್ತು ನೇರಳೆ ಮಾರ್ಗ ಎರಡರಲ್ಲಿಯೂ ಬೆಳಿಗ್ಗೆ 7ರಿಂದ 11ರವರೆಗೆ ಮತ್ತು ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಐದು ನಿಮಿಷಗಳ ಅಂತರದಲ್ಲಿ ಮೆಟ್ರೊ ರೈಲುಗಳು ಸಂಚರಿಸಲಿವೆ. ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದರೆ, ರೈಲುಗಳ ನಡುವಣ ಕಾರ್ಯಾಚರಣೆ ಅವಧಿಯ ಅಂತರವನ್ನು ತಗ್ಗಿಸಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹೇಳಿದೆ. ಸಂಜೆ 6ಗಂಟೆಗೆ ನಾಲ್ಕೂ ಟರ್ಮಿನಲ್‌ಗಳ ಕಡೆಗೆ ಏಕಕಾಲದಲ್ಲಿ ಕೊನೆಯ ಮೆಟ್ರೊ ರೈಲುಗಳು ಹೊರಡಲಿವೆ.

ಸ್ಮಾರ್ಟ್‌ ಕಾರ್ಡ್‌ ಇರಬೇಕು:

ಜನ ಪರಸ್ಪರ ಸಂಪರ್ಕಕ್ಕೆ ಬರುವುದನ್ನು ಆದಷ್ಟು ಕಡಿಮೆ ಮಾಡುವ ಉದ್ದೇಶದಿಂದ ನಿಗಮವು ಟೋಕನ್‌ ವಿತರಿಸುತ್ತಿಲ್ಲ. ಸ್ಮಾರ್ಟ್‌ ಕಾರ್ಡ್‌ ಹೊಂದಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶವಿದೆ.

ಮೊಬೈಲ್‌ ಅಪ್ಲಿಕೇಷನ್‌ ಹಾಗೂ ಬಿಎಂಆರ್‌ಸಿಎಲ್‌ ವೆಬ್‌ಸೈಟ್‌ ಮೂಲಕವೂ ಸ್ಮಾರ್ಟ್‌ ಕಾರ್ಡ್‌ ಖರೀದಿ ಮತ್ತು ರಿಚಾರ್ಜ್‌ ಮಾಡಿಕೊಳ್ಳಬಹುದು ಎಂದೂ ಬಿಎಂಆರ್‌ಸಿಎಲ್‌ ಹೇಳಿದೆ. ನಿಲ್ದಾಣಗಳ ಕೌಂಟರ್‌ಗಳಲ್ಲಿ ನಗದು ನೀಡಿಯೂ ಹೊಸ ಸ್ಮಾರ್ಟ್‌ ಕಾರ್ಡ್‌ಗಳನ್ನು ಖರೀದಿಸಬಹುದಾಗಿದೆ.

ಶೇ 50ರಷ್ಟು ಅವಕಾಶ:

ರೈಲುಗಳು ಶೇ 50ರಷ್ಟು ಆಸನಗಳು ಭರ್ತಿಯೊಂದಿಗೆ ಸಂಚರಿಸಲಿವೆ. ರೈಲಿನೊಳಗೆ ಮಾತ್ರವಲ್ಲದೆ, ಎಸ್ಕಲೇಟರ್‌ಗಳಲ್ಲಿ ಹೋಗುವಾಗಲೂ ಅಂತರ ಕಾಯ್ದುಕೊಳ್ಳಬೇಕು. ಲಿಫ್ಟ್‌ಗಳಲ್ಲಿ ಒಮ್ಮೆಗೆ ಗರಿಷ್ಠ ನಾಲ್ಕು ಜನ ಮಾತ್ರ ಹೋಗಬಹುದು ಎಂದು ನಿಗಮ ಹೇಳಿದೆ.

ನಿಲ್ದಾಣಗಳ ಪ್ರವೇಶ ದ್ವಾರಗಳಲ್ಲೇ ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷೆ ಮಾಡಲಾಗುವುದು. ಸ್ಯಾನಿಟೈಸರ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಆದರೂ, ಪ್ರಯಾಣಿಕರು ಸ್ವಂತ ಸ್ಯಾನಿಟೈಸರ್ ಹೊಂದುವುದು ಉತ್ತಮ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT