ಬೆಂಗಳೂರು: ‘ರಾಜ್ಯಪಾಲರು ಪ್ರಜಾ ಪ್ರಭುತ್ವದ ಆಶಯವನ್ನು ಭಗ್ನಗೊಳಿಸಿ ಸಂವಿಧಾನ ವಿರೋಧಿಗಳಂತೆ ನಡೆದು ಕೊಂಡಿರುವುದು ಖಂಡನೀಯ’ ಎಂದು ಎದ್ದೇಳು ಕರ್ನಾಟಕ ಸಂಘಟನೆ ಹೇಳಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಬಿ.ಟಿ. ಲಲಿತಾ ನಾಯಕ್, ಶ್ರೀಪಾದ್ ಭಟ್, ಎನ್. ವೆಂಕಟೇಶ್, ‘ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜ್ಯ ವಿರೋಧಿ ಹಾಗೂ ಜನ ವಿರೋಧಿ ನಡೆಯನ್ನು ಖಂಡಿಸಬೇಕು. ದೇಶ ಒಡೆಯುವ ಶಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಜನಪರ ಆಡಳಿತ ನೀಡುವ ಮೂಲಕ ವಿರೋಧ ಪಕ್ಷಗಳ ಸಂಚುಗಳನ್ನು ವಿಫಲಗೊಳಿಸಬೇಕು’ ಎಂದು ಆಗ್ರಹಿಸಿದರು.
‘ನ್ಯಾಯಾಲಯವು ರಾಜ್ಯಪಾಲರ ಕೀಳುಮಟ್ಟದ ರಾಜಕೀಯ ನಡೆಯನ್ನು ತಿರಸ್ಕರಿಸುವ ಮೂಲಕ ದೇಶದ ಸಂವಿಧಾನಿಕ ಮೌಲ್ಯಗಳ ಘನತೆಯನ್ನು ಎತ್ತಿ ಹಿಡಿಯಬೇಕು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಳೆದ 15 ತಿಂಗಳಲ್ಲಿ ಜನರಿಗೆ ಸಂಬಂಧಿಸಿದ ಒಂದೇ ಒಂದು ಸಮಸ್ಯೆಯನ್ನು ಕೈಗೆತ್ತಿಕೊಂಡು ವಿಧಾನ ಸಭೆಯಲ್ಲಿ ಮಾತನಾಡಲಿಲ್ಲ. ಆದರೆ, ಸಾಂವಿಧಾನಿಕವಾಗಿ ಜನರು ಆಯ್ಕೆ ಮಾಡಿರುವ ಸರ್ಕಾರವನ್ನು ಬುಡಮೇಲು ಮಾಡಲು ಯತ್ನಿಸುತ್ತಿವೆ’ ಎಂದು ಆರೋಪಿಸಿದರು.
ಜಮಾತೆ ಇಸ್ಲಾಮಿ ಹಿಂದ್‌ನ ಯೂಸೂಫ್ ಕನ್ನಿ, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್ ಭಾಗವಹಿಸಿದ್ದರು.