ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ. 25ರ ಬಳಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಇಲ್ಲ

Last Updated 15 ಫೆಬ್ರುವರಿ 2021, 16:27 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಕಾರ್ಯಕರ್ತರು ಕೋವಿಡ್‌ ಲಸಿಕೆ ಪಡೆಯುವುದಕ್ಕೆ ಸರ್ಕಾರ ಇದೇ 25ರ ಗಡುವು ನಿಗದಿಪಡಿಸಿದೆ.

‘ಆರೋಗ್ಯ ಕಾರ್ಯಕರ್ತರು ಕೋವಿಡ್‌ ಲಸಿಕೆ ಪಡೆಯುವುದಕ್ಕೆ ರಾಜ್ಯ ಸರ್ಕಾರ ಅಂತಿಮ‌ ದಿನಾಂಕವನ್ನು ನಿಗದಿಪಡಿಸಿದೆ. ಅವರು ಇದೇ 25 ರೊಳಗೆ ಲಸಿಕೆ ಪಡೆಯಬೇಕು. ಆ ಬಳಿಕ ಅವರಿಗೆ ಲಸಿಕೆ ನೀಡುವುದಿಲ್ಲ. ಲಸಿಕೆಯ ಮೊದಲ ಡೋಸ್ ಪಡೆದವರಿಗೆ ಮಾತ್ರ ಎರಡನೇ ಡೋಸ್ ನೀಡಲಾಗುತ್ತದೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.

ಕೋವಿಡ್‌ ಲಸಿಕೆ ಪಡೆಯಲು 1.80 ಲಕ್ಷ ಆರೋಗ್ಯ ಕಾರ್ಯಕರ್ತರು ಹೆಸರು ನೋಂದಾಯಿಸಿದ್ದರು. ಆದರೆ ಅವರಲ್ಲಿ 90 ಸಾವಿರ ಮಂದಿಯಷ್ಟೇ ಇದುವರೆಗೆ ಲಸಿಕೆ ಪಡೆದಿದ್ದಾರೆ.

ಎರಡನೇ ಡೋಸ್ ನೀಡುವ ಪ್ರಕ್ರಿಯೆ ಪ್ರಾರಂಭ

ಕೋವಿಡ್ ಲಸಿಕೆಯ ಮೊದಲ ಡೋಸ್‌ ಪಡೆದ ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡುವ ಪ್ರಕ್ರಿಯೆ ಸೋಮವಾರ ಆರಂಭವಾಗಿದೆ. ಬಿಬಿಎಂಪಿ ಆರೋಗ್ಯ ಕಾರ್ಯಕರ್ತರು, ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಇತರ ಸಿಬ್ಬಂದಿಗೆ ಲಸಿಕೆಯ ಮೊದಲ ಡೋಸ್ ನೀಡುವ ಪ್ರಕ್ರಿಯೆಯೂ ಮುಂದುವರಿದಿದೆ.

‘ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್‌ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿದ್ದ ಇತರ ಸಿಬ್ಬಂದಿ ಸೇರಿದಂತೆ 2.42 ಲಕ್ಷ ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಇವರಲ್ಲಿ 93 ಸಾವಿರ ಮುಂಚೂಣಿ ಕಾರ್ಯಕರ್ತರು ಮಾರ್ಚ್ ಮೊದಲನೇ ವಾರದವರೆಗೆ ಲಸಿಕೆ ಪಡೆಯಬಹುದು. ಇವರಿಗೆ ಮಾರ್ಚ್ ತಿಂಗಳಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ’ ಎಂದು ಆಯುಕ್ತರು ಮಾಹಿತಿ ನೀಡಿದರು.

ಸಿದ್ಧವಾಗುತ್ತಿದೆ ಮೂರನೇ ಹಂತದ ಪಟ್ಟಿ: ಕೋವಿಡ್‌ಲಸಿಕೆ ನೀಡುವ ಮೊದಲ ಎರಡು ಹಂತಗಳ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮೂರನೇ ಹಂತದ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲು ಪಾಲಿಕೆ ಸಿದ್ಧತೆ ನಡೆಸಿದೆ. ಮತದಾರರ ಪಟ್ಟಿಯ ಆಧಾರದಲ್ಲಿ 50 ರಿಂದ 60 ವರ್ಷದೊಳಗಿನವರು, 60 ರಿಂದ 70 ವರ್ಷದೊಳಗಿನವರು, 70 ರಿಂದ 80 ವರ್ಷದೊಳಗಿನವರು, 80 ರಿಂದ 90 ವರ್ಷದೊಳಗಿನವರು ಹಾಗೂ 90 ವರ್ಷ ಮೇಲ್ಪಟ್ಟವರ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲಾಗುತ್ತಿದೆ. ವಾರ್ಡ್ ವಾರು ಪಟ್ಟಿ ತಯಾರಿಸಲು ಆಯುಕ್ತರು ಸೂಚನೆ ನೀಡಿದ್ದಾರೆ. ಇದರ ಜೊತೆಗೆ, ಅನ್ಯ ರೋಗಗಳಿಂದ ಬಳಲುತ್ತಿರುವ 50 ವರ್ಷದೊಳಗಿನವರ ಸಮೀಕ್ಷೆ ನಡೆಸಲೂ ಕ್ರಮವಹಿಸಲಾಗಿದೆ.

‘ಈ ಸಮೀಕ್ಷೆ ಮುಂದಿನ ವಾರದಿಂದ ಪ್ರಾರಂಭವಾಗಲಿದೆ. ಮಾರ್ಚ್‌ನಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ’ ಎಂದು ಆಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT