ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿಗೈಯಲ್ಲಿ ಚುನಾವಣೆ ಗೆದ್ದ ಕೂಲಿ ಕಾರ್ಮಿಕ

ಗೋವಿಂದಪುರ ಗ್ರಾಮದಲ್ಲಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ * ಗ್ರಾಮಸ್ಥರ ಮಾತುಗಳೇ ಚುನಾವಣೆಗೆ ನಿಲ್ಲಲು ಪ್ರೇರಣೆ * ಕರಪತ್ರ ಮಾಡಿಸಲೂ ಹಣ ಇರಲಿಲ್ಲ
Last Updated 31 ಡಿಸೆಂಬರ್ 2020, 22:14 IST
ಅಕ್ಷರ ಗಾತ್ರ

ಹೆಸರಘಟ್ಟ: ದಾಸನಪುರ ಹೋಬಳಿಯ ಗೋಪಾಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋವಿಂದಪುರ ಗ್ರಾಮದಲ್ಲಿ ಮೀಸಲು ಕ್ಷೇತ್ರದಿಂದ ಕೂಲಿ ಕಾರ್ಮಿಕ ಜೆ.ಸಿ. ರವಿಕುಮಾರ್ 32 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪ್ರತಿ ದಿನ ಐನೂರು ರೂಪಾಯಿಗಳಿಗೆ ಮರಗೆಲಸ ಮಾಡುತ್ತಿದ್ದ ಅವರು, ಚುನಾವಣೆ ನಿಂತಾಗ ಕೆಲವು ನಕ್ಕರು. ಮತ್ತೆ ಕೆಲವರು ನಾಮಪತ್ರ ವಾಪಸ್‌ ತೆಗೆದುಕೊಂಡು ಬಿಡು. ಚುನಾವಣೆಯಲ್ಲಿ ದುಡ್ಡಿನ ಪಾತ್ರವೇ ದೊಡ್ಡದು ಎಂದು ಕಿವಿ ಮಾತು ಹೇಳಿದ್ದರಂತೆ. ಕೈ ಸಾಲ ಮಾಡಿಕೊಂಡು ಬದುಕು ಹಾಳು ಮಾಡಿಕೊಳ್ಳಬೇಡ ಎಂಬ ಸಲಹೆಗಳನ್ನು ಹಲವು ಮುಖಂಡರು ಕೊಟ್ಟರಂತೆ. ಯಾವುದಕ್ಕೂ ಜಗ್ಗದ ಅವರು ಹಣ ಬಲವಿಲ್ಲದೇ ಚುನಾವಣೆ ಎದುರಿಸಿ ವಿಜಯಶಾಲಿಗಳಾಗಿದ್ದಾರೆ. 7ನೇ ತರಗತಿ ವರೆಗೆ ಅವರು ವ್ಯಾಸಂಗ ಮಾಡಿದ್ದಾರೆ.

’ನನ್ನ ತಂದೆ ತಾಯಿ ಪ್ರತಿ ದಿನ ಸೊಪ್ಪು ಮಾರಿ ನಮ್ಮನ್ನು ಸಾಕಿದರು. ವಾರದಲ್ಲಿ ಮೂರು ದಿನಗಳ ಕಾಲ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಾ ಇದ್ದರು. ಬದುಕು ಬವಣೆಗಳ ಗೂಡಾಗಿತ್ತು. ಇವತ್ತು ದುಡಿದರೆ ಎರಡು ಹೊತ್ತು ಒಡಲು ತುಂಬುತ್ತಿತ್ತು. ನಾವು ಅಪ್ಪನಿಗೆ ನಾಲ್ಕು ಜನ ಮಕ್ಕಳು. ದಿನಗೂಲಿ ಮಾಡಿಯೇ ನಮ್ಮನ್ನು ಸಾಕಿದರು‘ ಎಂದು ಅವರು ತಮ್ಮ ಪರಿಸ್ಥಿತಿಯನ್ನು ಮೆಲಕು ಹಾಕಿದರು.

’ಚುನಾವಣೆಗೆ ನಿಂತಾಗ ಬಹುತೇಕರು ಹೇಳಿದ್ದು ಒಂದೇ ಮಾತು, ಹಣವಿಲ್ಲದೇ ಗೆಲುವು ಸಾಧ್ಯವಿಲ್ಲ ಎಂದು. ಆದರೆ, ನಾನು ಎದೆಗುಂದಲಿಲ್ಲ. ಒಂದು ಕೈ ನೋಡಿ ಬಿಡೋಣ ಎಂದು ಸ್ಪರ್ಧಿಸಿದೆ. ಗ್ರಾಮದ ಯಾವುದೇ ಮನೆಯಲ್ಲಿ ಏನೇ ಸಂಕಷ್ಟವಾದರೂ ಹೆಗಲು ಕೊಡುತ್ತಿದ್ದೆ. ಆಗ ಗ್ರಾಮಸ್ಥರು ’ರವಿ ಚುನಾವಣೆಗೆ ನಿಂತರೆ ನಾವು ಮತ ಹಾಕುತ್ತೇವೆ‘ ಅಂತ ಹೇಳುತ್ತಿದ್ದರು. ಅವರ ಈ ಮಾತುಗಳೇ ನನಗೆ ಚುನಾವಣೆಗೆ ಸ್ಪಂದಿಸಲು ಪ್ರೇರಣೆಯಾಯಿತು‘ ಎಂದು ಅವರು ಹೇಳಿದರು.

’ಬರಿಗೈಯಲ್ಲಿ ಚುನಾವಣೆಗೆ ನಿಂತೆ. ಕರಪತ್ರ ಮಾಡಿಸಲು ನನ್ನ ಬಳಿ ಹಣವಿರಲಿಲ್ಲ. ಆದರೆ, ಜನರೇ ಮುಂದೆ ಬಂದರು. ನಮ್ಮ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರಾದ ರವಿಕುಮಾರ್ ಬೆನ್ನು ತಟ್ಟಿದರು. ಪ್ರೋತ್ಸಾಹ ನೀಡಿದರು. ನನ್ನ ಬಗ್ಗೆ ನಂಬಿಕೆ ಇದ್ದರೆ ಮತ ಹಾಕಿ ಎಂದೆ. ಜನರು ಸ್ಪಂದಿಸಿದರು. ಗೆಲ್ಲಿಸಿ ಕೊಟ್ಟರು‘ ಎಂದರು.

ಗ್ರಾ.ಪಂ.ಗೆ ಮಂಗಳಮುಖಿ ಸದಸ್ಯೆ
ಬೆಂಗಳೂರು:
ಆನೇಕಲ್‌ ತಾಲ್ಲೂಕಿನ ದೊಮ್ಮಸಂದ್ರ ಗ್ರಾಮ ಪಂಚಾಯಿತಿಯ 13ನೇ ವಾರ್ಡ್‌ನ ಸದಸ್ಯರಾಗಿ ಮಂಗಳಮುಖಿ ಆರತಿ ಜವರಗೌಡ ಆಯ್ಕೆಯಾಗಿದ್ದಾರೆ.

ಅರ್ಹ 778 ಮತಗಳ ಪೈಕಿ 527 ಮತಗಳನ್ನು ಪಡೆದಿರುವ ಅವರು, ಉಳಿದ ಅಭ್ಯರ್ಥಿಗಳಿಗಿಂತ ಶೇ 80ಕ್ಕೂ ಹೆಚ್ಚು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

‘ಬೇರೆ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದವು. ಆದರೆ, ಯಾವುದೇ ಬೆಂಬಲವಿಲ್ಲದೆ, ಜನ ಬಲದಿಂದಲೇ ಈ ಗೆಲುವು ಸಾಧಿಸಿದ್ದೇನೆ’ ಎಂದು ಆರತಿ ‘ಪ್ರಜಾವಾಣಿ’ಗೆ ಹೇಳಿದರು.

ಆರತಿ ಜವರಗೌಡ ಅವರನ್ನು ಅಭಿನಂದಿಸಿದ ಗ್ರಾಮಸ್ಥರು
ಆರತಿ ಜವರಗೌಡ ಅವರನ್ನು ಅಭಿನಂದಿಸಿದ ಗ್ರಾಮಸ್ಥರು

‘ಎಸ್ಸೆಸ್ಸೆಲ್ಸಿಯವರೆಗೆ ಓದಿದ್ದೇನೆ. ದೊಮ್ಮಸಂದ್ರದ ಬೇರೆ ವಾರ್ಡ್‌ಗಳಿಗೆ ಹೋಲಿಸಿದರೆ 13ನೇ ವಾರ್ಡ್‌ನಲ್ಲಿ ಬಹಳಷ್ಟು ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಇದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಅವರೆಲ್ಲ ಸಂಕಷ್ಟಕ್ಕೆ ಸಿಲುಕಿಸಿದ್ದರು. ಮಂಗಳಮುಖಿಯರೆಲ್ಲ ಸೇರಿಕೊಂಡು ಅವರಿಗೆ ದವಸ ಧಾನ್ಯ, ಆಹಾರದ ಕಿಟ್‌ ಪೂರೈಕೆ ಮಾಡಿದ್ದೆವು. ಚುನಾವಣೆ ಬಂದಾಗ ಸ್ಪರ್ಧಿಸುವಂತೆ ಜನರೇ ಹೇಳಿದ್ದರು. ನಾಮಪತ್ರ ಸಲ್ಲಿಸುವಂತೆ ಒತ್ತಾಯಿಸಿ ಅವರೇ ನನ್ನ ಪರ ಪ್ರಚಾರ ನಡೆಸಿದ್ದರು. ಈಗ ಅವರೇ ಗೆಲ್ಲಿಸಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಮಂಗಳಮುಖಿಯಾಗಿದ್ದರೂ ಇಷ್ಟೆಲ್ಲ ಜನಸೇವೆ ಮಾಡಿದ್ದೀರಿ. ನಿಮ್ಮಂಥವರು ಪಂಚಾಯಿತಿ ಸದಸ್ಯರಾದರೆ ನಮ್ಮ ವಾರ್ಡ್‌ ಕೂಡ ಅಭಿವೃದ್ಧಿ ಆಗುತ್ತದೆ ಎಂದು ಜನ ಹೇಳಿದ್ದರು. ಪ್ರಚಾರಕ್ಕೆ ಬರುವುದೇ ಬೇಡ. ನಾವೇ ಎಲ್ಲ ನೋಡಿಕೊಳ್ಳುತ್ತೇವೆ ಎಂದು ಜನ ಭರವಸೆ ನೀಡಿದ್ದರು’ ಎಂದರು.

‘ನಮಗೆ ನೂರಾರು ಜನ ಸಹಾಯ ಮಾಡುತ್ತಾರೆ. ನಾವು ಹತ್ತು ಜನಕ್ಕಾದರೂ ಸೇವೆ ಸಲ್ಲಿಸಬೇಕು ಉದ್ದೇಶವಿತ್ತು. ಅದರಂತೆ ಕೈಲಾದ ಸಹಾಯ ಮಾಡಿದ್ದೆ. ವಾರ್ಡ್‌ನ ಜನ ನನ್ನ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ವಾರ್ಡ್‌ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಅವರು ಹೇಳಿದರು.

ಯಶವಂತಪುರ ಕ್ಷೇತ್ರದಲ್ಲಿ ಕಮಲ ಪಾರಮ್ಯ: ಸೋಮಶೇಖರ್‌
ಕೆಂಗೇರಿ: ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

ಚೋಳನಾಯಕನಹಳ್ಳಿ, ಅಜ್ಜನಹಳ್ಳಿ, ತಾವರೆಕೆರೆ, ಚೆನ್ನೇನಹಳ್ಳಿ, ಚುಂಚನಕುಪ್ಪೆ, ಚಿಕ್ಕನಹಳ್ಳಿ, ಕೊಡಿಗೇಹಳ್ಳಿ, ಸೂಲಿಕೆರೆ, ರಾಮೋಹಳ್ಳಿ, ಕುಂಬಳಗೂಡು, ಹೆಚ್,ಗೊಲ್ಲಹಳ್ಳಿ, ಅಗರ, ತರಳು, ನೆಲಗುಳಿ, ಕೆ.ಗೊಲ್ಲಹಳ್ಳಿ, ಮತ್ತು ಸೋಮನಹಳ್ಳಿ ಗ್ರಾಮಪಂಚಾಯಿತಿ ಸೇರಿದಂತೆ ಒಟ್ಟು 16 ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆದಿತ್ತು. 382 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಒಳಗೊಂಡ 16 ಗ್ರಾಮಪಂಚಾಯಿತಿ ಅಖಾಡದಲ್ಲಿ 887 ಮಂದಿ ಅಕಾಂಕ್ಷಿಗಳು ಸ್ಪರ್ಧಿಸಿದ್ದರು.

ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಉಮೇಶ್ ಮತ್ತು ರೇಷ್ಮಾ ದಂಪತಿ
ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಉಮೇಶ್ ಮತ್ತು ರೇಷ್ಮಾ ದಂಪತಿ

310 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದರು ಎಂದು ಅವರು ಹೇಳಿದರು.

ರಾಮೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಳ್ಳಘಟ್ಟ ವಾರ್ಡ್ 2ರಲ್ಲಿ ಉಮೇಶ್ ಮತ್ತು ರೇಷ್ಮಾ ದಂಪತಿ ಆಯ್ಕೆಯಾಗಿದ್ದಾರೆ, ಬಿಸಿಎಂ(ಬಿ) ಇಂದ ಸ್ಫರ್ಧಿಸಿದ್ದ ಉಮೇಶ್ 683 ಮತಗಳನ್ನು ಗಳಿಸಿದರೆ ಪತ್ನಿ ರೇಷ್ಮಾ ಸಾಮಾನ್ಯ ಮಹಿಳಾ ವಿಭಾಗದಿಂದ ಸ್ಪರ್ಧೆಗಿಳಿದು 578 ಮತಗಳಿಸಿ ಜಯದ ನಗೆ ಬೀರಿದರು. ಅಗರ ಗ್ರಾಮಪಂಚಾಯಿತಿ ವ್ಯಾಪ್ತಿಯ ವಾರ್ಡ್ 3ನೇ ವಿಭಾಗಕ್ಕೆ ಸಾಮಾನ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಾಂತಪ್ಪ(551) ಎಂಬುವರು ತಮ್ಮ ಸಮೀಪ ಸ್ಫರ್ಧಿ ಗಿರೀಶ್ (550) ಎಂಬುವರ ವಿರುದ್ದ 1 ಮತಗಳ ಅಂತರದಿಂದ ಜಯಗಳಿಸಿದರು.

16 ಪಂಚಾಯಿತಿಗಳಲ್ಲಿ ಬಿಜೆಪಿ ಅಧಿಕಾರ: ವಿಶ್ವನಾಥ್‌
ಯಲಹಂಕ:
ವಿಧಾನಸಭಾ ಕ್ಷೇತ್ರವ್ಯಾಪ್ತಿಯ 19 ಪಂಚಾಯಿತಿಗಳ 362 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ 244 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.

16 ಪಂಚಾಯಿತಿಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ವಿಶ್ವಾಸವಿದೆ ಎಂದರು.

ಎಸ್.ಆರ್.ವಿಶ್ವನಾಥ್
ಎಸ್.ಆರ್.ವಿಶ್ವನಾಥ್

ಕ್ಷೇತ್ರವ್ಯಾಪ್ತಿಯ 6 ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಂ.ಎನ್.ಗೋಪಾಲಕೃಷ್ಣ ತಿಳಿಸಿದರು. ಶಿವಕೋಟೆ, ಹೆಸರಘಟ್ಟ, ದಾಸನಪುರ, ಸೊಂಡೇಕೊಪ್ಪ, ಗಂಟಿಗಾನಹಳ್ಳಿ ಹಾಗೂ ಗೋಪಾಲಪುರ ಪಂಚಾಯಿತಿಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಭದ್ರಕೋಟೆಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ ಎಂದರು.

ಬಿಜೆಪಿ ಬೆಂಬಲಿತ ಪ್ರಭಾವಿ ಅಭ್ಯರ್ಥಿಗಳಾದ ಅದ್ದೆ ವಿಶ್ವನಾಥಪುರ ಮಂಜುನಾಥ್, ಬ್ಯಾತದ ಸುರೇಶ್, ರಾಜಾನುಕುಂಟೆಯ ತಿಮ್ಮಾರೆಡ್ಡಿ, ಸೋಮಶೇಖರ್ ರೆಡ್ಡಿ, ನರೇಂದ್ರ ಸೇರಿದಂತೆ ಹಲವರು ಪರಾಭವಗೊಂಡಿದ್ದಾರೆ.

ಎಸ್ಟಿಡಿ ಮೂರ್ತಿ, ಆರ್.ಡಿ.ರಾಜಣ್ಣ, ಸುಜಾತಮ್ಮ, ಮಮತಾ ಬಿ.ಕೆ ಮತ್ತಿತರರು ಗೆಲುವು ಸಾಧಿಸಿದ್ದಾರೆ. ಉಳಿದಂತೆ ಚೊಕ್ಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ವೆಂಕಟೇಶ್ ಅವರ ಪತ್ನಿ ನಾಗರತ್ನ ಪರಾಭವಗೊಂಡಿದ್ದಾರೆ.

ಜಾಲಾ ಹೋಬಳಿ ವ್ಯಾಪ್ತಿಯ ದೊಡ್ಡಜಾಲ ಗ್ರಾಮಪಂಚಾಯಿತಿ ನಡೆದ ಚುನಾವಣೆಯಲ್ಲಿ ಬೈರೇಗೌಡ ಎಂಬುವರು ಪಂಚಾಯಿತಿಯ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸಯ್ಯ ಅವರನ್ನು 349 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಮಾಜಿ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್ ಬೇಗೂರು ಕ್ಷೇತ್ರದಿಂದ 318 ಮತಗಳ ಅಂತರದಿಂದ ಹಾಗೂ ನವರತ್ನ ಅಗ್ರಹಾರ ಕ್ಷೇತ್ರದಿಂದ ಎ.ಸಿ.ಗೌರಮ್ಮ 630 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಸತತವಾಗಿ 3 ಬಾರಿ ಸದಸ್ಯರಾಗಿದ್ದ ಆನಂದ್ ಎಂಬುವರಿಗೆ ಚೇತನ್ ಸೋಲುಣಿಸಿದ್ದಾರೆ. ಪ್ರಕಾಶ್ ಎಂಬುವರು 150 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಪ್ರತಿಸ್ಪರ್ಧಿ ಕೇವಲ 4 ಮತ ಪಡೆದಿದ್ದಾರೆ.

‘ರೈತ ಸಂಘ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ’
ಮೈಸೂರು:
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ಸ್ಪರ್ಧಿಸಿದ್ದ ರೈತ ಸಂಘ ಹಾಗೂ ಸ್ವರಾಜ್‌ ಇಂಡಿಯಾ ಬೆಂಬಲಿತ 1,800ಕ್ಕೂ ಅಧಿಕ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ

‘ಮೂರು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳುವಿವಿಧೆಡೆ ಸ್ಪರ್ಧಿಸಿದ್ದರು. ಎಲ್ಲರೂ ಜನಪರ ವಿಚಾರಗಳನ್ನು ಮತದಾರರ ಮುಂದಿಟ್ಟು ಚುನಾವಣೆ ಎದುರಿಸಿದ್ದಾರೆ. ಇದಕ್ಕೆ ಮತದಾರರು ಸ್ಪಂದಿಸಿದ್ದಾರೆ. ಹಣ ಕೂಡ ಹೆಚ್ಚು ಖರ್ಚು ಮಾಡಿಲ್ಲ. ಕೆಲವೆಡೆ ಕರಪತ್ರಕ್ಕೆ ಜನರೇ ಹಣ ನೀಡಿದ್ದಾರೆ’ ಎಂದರು.

‘ಮಂಡ್ಯ ಜಿಲ್ಲೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ರೈತ ಸಂಘ ಹಾಗೂ ಸ್ವರಾಜ್‌ ಇಂಡಿಯಾ ಬೆಂಬಲಿತರು ಅಧಿಕಾರ ಹಿಡಿಯಲಿದ್ದಾರೆ. ಈ ಕ್ಷೇತ್ರದಲ್ಲಿ 33 ಗ್ರಾಮ ಪಂಚಾಯಿತಿಗಳಿದ್ದು, ಕೆಲ ಪಂಚಾಯಿತಿಗಳಲ್ಲಿ ಆಯ್ಕೆಯಾದ ಎಲ್ಲರೂ ರೈತ ಸಂಘದ ಬೆಂಬಲಿತ ಅಭ್ಯರ್ಥಿಗಳೇ. ಮೈಸೂರು ಜಿಲ್ಲೆಯಲ್ಲಿ 100ಕ್ಕೂ ಅಧಿಕ ಸ್ಥಾನಗಳಲ್ಲಿ ಗೆದ್ದಿದ್ದಾರೆ’ ಎಂದು ತಿಳಿಸಿದರು.

ಪತ್ನಿಯ ಸೋಲಿನ ಆಘಾತದಿಂದ ಪತಿ ಸಾವು
ಚಿಂತಾಮಣಿ:
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪತ್ನಿಯ ಸೋಲಿನ ಆಘಾತದಿಂದ ಹೃದಯಾಘಾತಕ್ಕೆ ಒಳಗಾದ ತಾಲ್ಲೂಕಿನ ನಲ್ಲರಾಳ್ಳಪಲ್ಲಿ ಗ್ರಾಮದ ವ್ಯಕ್ತಿಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ.

ಮಿಂಡಿಗಲ್ ಗ್ರಾಮ ಪಂಚಾಯಿತಿಯ ನಲ್ಲರಾಳ್ಳಪಲ್ಲಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಚಿತ್ರಾ 12 ಮತಗಳಿಂದ ಪರಾಭವಗೊಂಡಿದ್ದರು. ಪತ್ನಿಯ ಸೋಲಿನಿಂದು ಅಘಾತಗೊಂಡಿದ್ದ ದೇವರಾಜ್ (35) ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಸ್ವಗ್ರಾಮದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಿತು.

ದೇವರಾಜ್ ಆರ್ಕೆಷ್ಟ್ರಾ ನಡೆಸುತ್ತಿದ್ದು ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಕೊರೊನಾ ಸಮಯದಲ್ಲಿ ಅವರ ಆರ್ಕೆಸ್ಟ್ರಾ ನಷ್ಟ ಅನುಭವಿಸಿತ್ತು. ಹಾಗಾಗಿ ಇತ್ತೀಚೆಗೆ ಮಾಸಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ನಗರದ ಖಾಸಗಿ ಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

ಸಿ.ಪಿ.ಯೋಗೇಶ್ವರ್
ಸಿ.ಪಿ.ಯೋಗೇಶ್ವರ್

ಯೋಗೇಶ್ವರ್ ಗ್ರಾಮದಲ್ಲಿ ಜೆಡಿಎಸ್ ಬೆಂಬಲಿಗರ ಪ್ರಾಬಲ್ಯ!
ಚನ್ನಪಟ್ಟಣ:
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಸ್ವಗ್ರಾಮ ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಗ್ರಾಮದಲ್ಲಿರುವ ಒಟ್ಟು 7ಕ್ಷೇತ್ರಗಳಲ್ಲಿ 5 ಮಂದಿ ಜೆಡಿಎಸ್ ಬೆಂಬಲಿತರು, 2 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಜಯ ಸಾಧಿಸಿರುವುದು ವಿಶೇಷವಾಗಿದೆ.

ಗ್ರಾ.ಪಂ.ನ ಒಟ್ಟು 14 ಸ್ಥಾನಗಳಲ್ಲಿ 12 ಮಂದಿ ಜೆಡಿಎಸ್ ಬೆಂಬಲಿತರು ಜಯಭೇರಿ ಬಾರಿಸಿದ್ದಾರೆ. ಕೇವಲ ಇಬ್ಬರು ಬಿಜೆಪಿ ಬೆಂಬಲಿತರು ಜಯ ಸಾಧಿಸಿದ್ದಾರೆ. ಆ ಮೂಲಕ ಯೋಗೇಶ್ವರ್ ಅವರ ಗ್ರಾಮ ವ್ಯಾಪ್ತಿಯ ಚಕ್ಕೆರೆ ಗ್ರಾ.ಪಂ.ನಲ್ಲಿ ಜೆಡಿಎಸ್ ಬೆಂಬಲಿಗರು ಅಧಿಕಾರ ಹಿಡಿದಂತಾಗಿದೆ.

ಪತಿ ಮತ್ತು ಪತ್ನಿಗೆ ಜಯ
ಮೀನುಕುಂಟೆ ಹೊಸೂರು ಪಂಚಾಯಿತಿಯ 21 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ 19 ಸ್ಥಾನಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬೈನಹಳ್ಳಿ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶುಭ ನರಸಿಂಮೂರ್ತಿ ಹಾಗೂ ತರಬನಹಳ್ಳಿ ಕ್ಷೇತ್ರದಿಂದ ಅವರ ಪತಿ ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT