ಮಂಗಳವಾರ, ಅಕ್ಟೋಬರ್ 20, 2020
22 °C
ನಾಟಕ, ಗಾಯನ, ಪ್ರಾತ್ಯಕ್ಷಿಕೆ ಮೂಲಕ ಹಸಿವು ಮರೆತರು; ಹೋರಾಟಗಾರರ ಜೀವನ ಚರಿತ್ರೆ ತಿಳಿದರು

‘ರಾಷ್ಟ್ರಾಭಿಮಾನ’ದ ಕಿಚ್ಚು ಹೊತ್ತಿಸಿದ ಸಾಮೂಹಿಕ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಅದು ಯುವ ಮನಸ್ಸುಗಳಿಗೆ ಮೀಸಲಿಟ್ಟಿದ್ದ ಸತ್ಯಾಗ್ರಹ. ಉಪವಾಸಕ್ಕಷ್ಟೇ ಸಿಮೀತವೂ ಆಗಿರಲಿಲ್ಲ. ಆಧುನಿಕ ಯುಗದಲ್ಲಿ ಕಳೆದುಹೋಗುತ್ತಿರುವ ಯುವಜನತೆಯಲ್ಲಿ ‘ರಾಷ್ಟ್ರಾಭಿಮಾನ’ ಹಾಗೂ ’ಧಾರ್ಮಿಕ ಸಹಿಷ್ಣುತೆ’ ಬೆಳೆಸುವ ವೇದಿಕೆಯೂ ಆಯಿತು. ನಾಟಕ, ಗಾಯನ, ಪ್ರಾತ್ಯಕ್ಷಿಕೆಗಳು ಯುವಜನತೆಯನ್ನು ಬಡಿದೆಬ್ಬಿಸಿದವು.

ಇದೆಲ್ಲವೂ ಸಾಧ್ಯವಾಗಿದ್ದು, ನಗರದ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಾಮೂಹಿಕ ಉಪವಾಸ ಸತ್ಯಾಗ್ರಹ’ದಲ್ಲಿ.

‘ಉಪವಾಸ ಸತ್ಯಾಗ್ರಹ ಮುದುಕರ ಹಕ್ಕಲ್ಲ. ಅದು ಖುಷಿಯ ಸಂಗತಿ. ಯುವಕರೂ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ’ ಎಂಬ ಆಹ್ವಾನದೊಂದಿಗೆ ಗ್ರಾಮಸೇವಾ ಸಂಘವು ಕರೆ ನೀಡಿದ್ದ ಈ ಸತ್ಯಾಗ್ರಹದಲ್ಲಿ, ನಗರದ ಶಾಲಾ–ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು. ಲಿಂಗಭೇದ, ಜಾತಿಭೇದ ಮರೆತು ‘ನಾವೆಲ್ಲರೂ ಭಾರತೀಯರು’ ಎಂದು ಸಾರಿ ಸಾರಿ ಹೇಳಿದರು. 

ಬೆಳಿಗ್ಗೆ 9 ಗಂಟೆಗೆ ಸ್ಥಳದಲ್ಲಿ ಹಾಜರಿದ್ದ ಯುವಜನತೆ, ‘ದೇಶಕ್ಕಾಗಿ ನಾವು ಇಂದು ಪೂರ್ತಿದಿನ ಉಪವಾಸವಿರುತ್ತೇವೆ’ ಎಂದು ಶಪಥ ಮಾಡಿದರು. ಸಂಜೆಯವರೆಗೂ ಸ್ಥಳದಲ್ಲೇ ಕುಳಿತು ನಾಟಕ, ಗಾಯನ, ಪ್ರಾತ್ಯಕ್ಷಿಕೆಗಳನ್ನು ನೋಡುತ್ತಲೇ ಹಸಿವು ಮರೆತರು. ಹೋರಾಟಗಾರರು ಹಾಗೂ ಚಿಂತಕರು, ದೇಶದ ಬಗೆಗಿನ ತಮ್ಮ ಅನುಭವವನ್ನು ಯುವಜನತೆ ಎದುರು ಬಿಚ್ಚಿಟ್ಟರು.

ಸತ್ಯಾಗ್ರಹದಲ್ಲೇ ಹಲವು ವಿದ್ಯಾರ್ಥಿಗಳು, ನೂಲು ನೇಯ್ದರು. ಸ್ನೇಹಿತರ ಜೊತೆಗೊಡಿ, ಸಾಮೂಹಿಕ ಹಾಡುಗಳಿಗೆ ಧ್ವನಿಯಾಗಿ ಸತ್ಯಾಗ್ರಹಕ್ಕೆ ಶಕ್ತಿ ತುಂಬಿದರು. ಖಾದಿ ಹಾಗೂ ಸಾವಯವ ಉತ್ಪನ್ನಗಳ ಪ್ರದರ್ಶನವನ್ನೂ ಏರ್ಪಡಿಸಿದ್ದರಿಂದ, ಅವುಗಳ ಬಳಕೆ ಬಗ್ಗೆ ಯುವಜನತೆಯಲ್ಲಿ ಅರಿವು ಮೂಡಿತು.

ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ, ಕಮಲಾದೇವಿ ಚಟ್ಟೋಪಾಧ್ಯಾಯ, ಬಿ.ಆರ್.ಅಂಬೇಡ್ಕರ್ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಗಳನ್ನು ವೇದಿಕೆಯಲ್ಲಿ ಹಾಕಲಾಗಿತ್ತು. ಅವರೆಲ್ಲರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಸಾಲು ಸಾಲು ಕಾರ್ಯಕ್ರಮ: ವಸ್ತ್ರ ವಿನ್ಯಾಸಕಾರ ಪ್ರಸಾದ್ ಬಿದ್ದಪ್ಪ ಅವರ ‘ಫ್ಯಾಶನ್ ಐಕಾನ್ ಗಾಂಧಿ’ ಪ್ರಾತ್ಯಕ್ಷಿಕೆ ಮೂಲಕ ಸತ್ಯಾಗ್ರಹಕ್ಕೆ ಚಾಲನೆ ದೊರೆಯಿತು. ಗಾಂಧೀಜಿಯವರ ಜೀವನದ ಅಲ್ಪ ಭಾಗವನ್ನು ಈ ಪ್ರಾತ್ಯಕ್ಷಿಕೆ ಪರಿಚಯಿಸಿತು.

ಮೈಸೂರು ರಂಗಾಯಣದ ನಿರ್ದೇಶಕಿ ಭಾಗೀರಥಿಬಾಯಿ ಕದಮ್ ಹಾಗೂ ತಂಡದವರು ಪ್ರದರ್ಶಿಸಿದ ‘ಸ್ವಾತಂತ್ರ್ಯ ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾಧ್ಯಾಯ‘ ನಾಟಕ, ಸ್ವಾತಂತ್ರ್ಯ ಹೋರಾಟದ ನೆನಪು ಮಾಡಿಕೊಟ್ಟಿತು.

ದು.ಸರಸ್ವತಿ ನಡೆಸಿಕೊಟ್ಟ, ‘ಎಲ್ಲಿ ಹೋದವೋ, ಎದೆಯ ಗೂಡಿನ ಹಕ್ಕಿಗಳು’ ಎಂಬ ಸ್ತ್ರೀಪರವಾದ ಏಕವ್ಯಕ್ತಿ ಪ್ರದರ್ಶನ ಯುವಜನತೆಯನ್ನು ಚಿಂತನೆಗೆ ಹಚ್ಚಿತು.

ಎಂ.ಡಿ.ಪಲ್ಲವಿ, ಬಿಂದು ಮಾಲಿನಿ, ಮಹೇಶ್ ರಘುನಂದನ್ ಹಾಗೂ ಕಾಯಶೆಟ್ಟಿ ರಾವ್ ಅವರ ಗಾಯನ ಅರ್ಥಪೂರ್ಣವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಸಾರುವ ಹಾಗೂ ರಾಷ್ಟ್ರಭಕ್ತಿಯ ಗೀತೆಗಳನ್ನು ಅವರು ಹಾಡಿದರು. 

ಗದಗ ಜಿಲ್ಲೆಯ ರೋಣದ ಶಂಕ್ರಪ್ಪ, ಲಾವಣಿ ಹಾಗೂ ಗೀಗಿ ಪದಗಳನ್ನು ಹಾಡಿ ಮನಗೆದ್ದರು. ಅದರ ಜೊತೆಯಲ್ಲೇ ವಿದ್ಯಾರ್ಥಿಗಳು ಸಹ ಗಾಯನ, ಸಂಭಾಷಣೆ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಪ್ರತಿ ಕಾರ್ಯಕ್ರಮದ ಅಂತ್ಯದಲ್ಲಿ ಸಂವಾದ ಏರ್ಪಡಿಸಲಾಯಿತು. ವಿದ್ಯಾರ್ಥಿಗಳು, ತಮಗಿದ್ದ ಸಂಶಯಗಳನ್ನು ಗಾಯಕರು ಹಾಗೂ ಕಲಾವಿದರ ಜೊತೆ ಹಂಚಿಕೊಂಡು ಪರಿಹರಿಸಿಕೊಂಡರು.

ಯುವಜನತೆಯ ಜಾಗೃತಿಗೆ ಸತ್ಯಾಗ್ರಹ

‘ಗಾಂಧೀಜಿಯವರು ಕಂಡ ಧಾರ್ಮಿಕ ಸಹಿಷ್ಣುತೆ ಸಹಕಾರ ಗುಣ ಹಾಗೂ ಗ್ರಾಮ ಸ್ವರಾಜ್ಯಗಳ ಪರಿಕಲ್ಪನೆ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸಲು ಈ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ’ ಎಂದು ರಂಗಕರ್ಮಿ ಪ್ರಸನ್ನ ತಿಳಿಸಿದರು.

‘ಧಾರ್ಮಿಕ, ಆರ್ಥಿಕ ಅಸಹಿಷ್ಣುತೆಯಿಂದಾಗಿ ಮನುಕುಲ ನಾಶವಾಗುತ್ತಿದೆ. ಅದರ ವಿರುದ್ಧ ಹೋರಾಟ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ಹೋರಾಟ ಗಟ್ಟಿಯಾಗಲು, ದೇಶದ ಭವಿಷ್ಯವಾದ ಯುವಜನತೆಯ ಕಡೆಗೆ ತೆಗೆದುಕೊಂಡು’ ಎಂದರು.

ದೇವರಾಗಲಿದ್ದಾನೆ ಗಾಂಧೀಜಿ !

‘ಮನುಷ್ಯರನ್ನು ನಾವೆಲ್ಲರೂ ಇಂದು ದೇವರು ಮಾಡುತ್ತಿದ್ದೇವೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಮೈಸೂರು ರಂಗಾಯಣದ ನಿರ್ದೇಶಕಿ ಭಾಗೀರಥಿಬಾಯಿ ಕದಮ್ ಬೇಸರ ವ್ಯಕ್ತಪಡಿಸಿದರು.

ಸಂವಾದದಲ್ಲಿ ಮಾತನಾಡಿದ ಅವರು, ‘ಬುದ್ಧ, ಈಗಾಗಲೇ ದೇವರಾಗಿದ್ದಾನೆ. ಬಸವಣ್ಣನೂ ದೇವರಾಗುತ್ತಿದ್ದಾನೆ. ಕೆಲವೇ ವರ್ಷಗಳಲ್ಲಿ ಗಾಂಧೀಜಿಯು ದೇವರಾದರೆ ಆಶ್ಚರ್ಯವಿಲ್ಲ. ಅವರೆಲ್ಲ ಸಾಧಕರು ಎಂಬುದನ್ನು ಮರೆಯುತ್ತಿರುವ ನಾವು, ದೇವರನ್ನಾಗಿ ಮಾಡುತ್ತಿದ್ದೇವೆ. ಆದರೆ, ಆ ಸಾಧಕರ ಆದರ್ಶಗಳು ಹಾಗೂ ತತ್ವಗಳನ್ನು ಪಾಲಿಸಲು ಮನಸ್ಸು ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

* ವೈಯಕ್ತಿಕ ಬದುಕು ಕಟ್ಟಿಕೊಳ್ಳುವುದರಲ್ಲೇ ಜೀವನ ಹಾಳು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶದ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಈ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಕ್ಕೆ ಖುಷಿಯಾಗಿದೆ.
 – ನಿಹಾರಿಕಾ, ಶೇಷಾದ್ರಿಪುರ

* ರಾಷ್ಟ್ರಾಭಿಮಾನ ಕೇವಲ ಪಠ್ಯಕ್ಕಷ್ಟೇ ಸೀಮಿತವಾಗಿದೆ. ನಾವೆಲ್ಲರೂ ದೇಶದ ಏಕತೆ ಬಗ್ಗೆ ಯೋಚಿಸಬೇಕು. ಇಂಥ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಹಿರಿಯರೊಂದಿಗೆ ಬೆರೆತು ಅವರ ಅನುಭವ ಕೇಳಬೇಕು.
– ಟಿ. ಮನೋಜ್‌ಕುಮಾರ್, ಜಯನಗರ

* ಹಿಂಸೆ, ಆತಂಕವಾದ ಹಾಗೂ ಧಾರ್ಮಿಕ ಅಸಹಿಷ್ಣುತೆಯ ದಳ್ಳುರಿಗೆ ಜನರೆಲ್ಲ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲಿ  ನಡೆಯುತ್ತಿರುವ ಅತಿದೊಡ್ಡ ಏಕತೆಯ ಸತ್ಯಾಗ್ರಹ ಇದು. 
– ಅಭಿಲಾಷ್, ಗ್ರಾಮ ಸೇವಾ ಸಂಘದ ಕಾರ್ಯದರ್ಶಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು