ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸಹಾಯಕರ ವೇತನ ಹೆಚ್ಚಳಕ್ಕೆ ಒತ್ತಾಯ

Last Updated 22 ಏಪ್ರಿಲ್ 2022, 21:02 IST
ಅಕ್ಷರ ಗಾತ್ರ

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ಕನಿಷ್ಠ ವೇತನವನ್ನು ₹ 21 ಸಾವಿರಕ್ಕೆ ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಎಸ್. ಕೃಷ್ಣಮೂರ್ತಿ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ದಿನಬಳಕೆ ವಸ್ತುಗಳ ದರ ಏರಿಕೆಯಿಂದ ಗ್ರಾಮಸಹಾಯಕರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಮನೆಯಲ್ಲಿರುವ ಹಿರಿಯರ ಪಾಲನೆ ಹಾಗೂ ವೈದ್ಯಕೀಯ ಚಿಕಿತ್ಸೆ ವೆಚ್ಚ ಭರಿಸಲೂ ಕಷ್ಟಪಡಬೇಕಾದ ಸ್ಥಿತಿ ಎದುರಾಗಿದೆ’ ಎಂದು ಪರಿಸ್ಥಿತಿ ವಿವರಿಸಿದರು.

‘ರಾಜ್ಯದಲ್ಲಿ 10,450 ಗ್ರಾಮಸಹಾಯಕರಲ್ಲಿ 3 ಸಾವಿರದಷ್ಟು ಮಂದಿ ಮಹಿಳೆಯರಿದ್ದಾರೆ. ಅವರಿಗೆ ಹೆರಿಗೆ ರಜೆ ನೀಡಬೇಕು. ತಿಂಗಳಿಗೆ ಒಂದರಂತೆ ವರ್ಷದಲ್ಲಿ 12 ದಿನ ವೇತನಸಹಿತ ರಜೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ಗ್ರಾಮಸೇವಕರು ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದಾರೆ. ಕೋವಿಡ್‌ನಿಂದ ಮೃತಪಟ್ಟ ಗ್ರಾಮಸಹಾಯಕರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು. ಚುನಾವಣಾ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಸಹಾಯಕರಿಗೆ ಚುನಾವಣಾ ಭತ್ಯೆ ನೀಡಬೇಕು. ರಾತ್ರಿಪಾಳಿ ಕೆಲಸವನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

‘2022–23ನೇ ಸಾಲಿನ ಬಜೆಟ್‌ನಲ್ಲಿ ಗ್ರಾಮ ಸಹಾಯಕರ ವೇತನವನ್ನು ₹ 1000ದಷ್ಟು ಹೆಚ್ಚಳ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಈ ಕ್ರಮ ಅಭಿನಂದನೀಯ. ಆದರೆ ಈಗಿನ ಪರಿಸ್ಥಿತಿಗೆ ಇದು ಏನೇನೂ ಸಾಲದು. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು’ ಎಂದರು.

ಸಂಘದ ಅಧ್ಯಕ್ಷ ಎಚ್.ಎನ್. ದೇವರಾಜು, ಪ್ರಮುಖರಾದ ಕೆ.ವಿ. ಶ್ರೀನಿವಾಸಮೂರ್ತಿ, ಎಂ.ಟಿ. ಕೆಂಪೇಗೌಡ, ಬಿ.ಆರ್. ರಾಜಶೇಖರಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT