ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಕುಮಾರ್ ಸಹೋದರನಿಗೆ ಟಿಕೆಟ್‌?

Last Updated 20 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರ ಕ್ಷೇತ್ರವನ್ನು ಉಳಿಸಿಕೊಳ್ಳಲು ಹಾಗೂ ರಾಜರಾಜೇಶ್ವರಿ ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ಪಡೆಯಲು ಬಿಜೆಪಿ ಶತಪ್ರಯತ್ನ ನಡೆಸಿದೆ. ಜಯನಗರದಲ್ಲಿ ಅನುಕಂಪದ ಮತ ಗಿಟ್ಟಿಸಿಕೊಳ್ಳಲು ದಿವಂಗತ ಬಿ.ಎನ್‌. ವಿಜಯಕುಮಾರ್‌ ಸಹೋದರ ಪ್ರಹ್ಲಾದ್‌ ಬಾಬು ಅವರನ್ನು ಕಣಕ್ಕೆ ಇಳಿಸಲು ಕಮಲ ಪಾಳಯ ಮುಂದಾಗಿದೆ.

ವಿಜಯಕುಮಾರ್‌ ನಿಧನದ ಕಾರಣದಿಂದ ಜಯನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ಅವರು ಎರಡು ಅವಧಿಗೆ ಶಾಸಕರಾಗಿದ್ದರು. ಈ ಕ್ಷೇತ್ರದ ಚುನಾವಣೆ ಜೂನ್‌ 11ರಂದು ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಲು ಅವಕಾಶ ಇದೆ.

ಕಾಂಗ್ರೆಸ್‌ನಿಂದ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಹುರಿಯಾಳು. ಜೆಡಿಎಸ್‌ನಿಂದ ಕಾಳೇಗೌಡ, ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾ ರೆಡ್ಡಿ ಕಣದಲ್ಲಿದ್ದಾರೆ. ಬಿಜೆಪಿಯಿಂದ ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್‌.ಸದಾಶಿವ, ಪಾಲಿಕೆಯ ಮಾಜಿ ಸದಸ್ಯ ಸಿ.ಕೆ. ರಾಮಮೂರ್ತಿ, ನಟಿ ತಾರಾ, ವಿಧಾನ ಪರಿಷತ್‌ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ಆಕಾಂಕ್ಷಿಗಳಾಗಿದ್ದಾರೆ.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕರೆಸಿ ಮಾತನಾಡಿದ್ದಾರೆ. ಟಿಕೆಟ್‌ ನೀಡಲು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೂಚಿಸಿದ್ದು, ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದ್ದರು. ಟಿಕೆಟ್‌ ಬೇಡವೆಂದು ಹೇಳಿದ್ದೇನೆ. ವಿಜಯಕುಮಾರ್‌ ಅಣ್ಣನ ಮಗ ರಾಮ್‌ ಅವರಿಗೆ ಟಿಕೆಟ್‌ ನೀಡುವಂತೆ ವಿನಂತಿಸಿದ್ದೇನೆ’ ಎಂದು ಬಿಜೆಪಿ ನಗರ ಜಿಲ್ಲಾ ಘಟಕದ ವಕ್ತಾರ ಎನ್‌.ಆರ್‌. ರಮೇಶ್‌ ಹೇಳಿಕೊಂಡಿದ್ದಾರೆ.

ವಿಶ್ವಾಸಮತದ ವೇಳೆ ಉಂಟಾದ ಹಿನ್ನಡೆ, ಜಯನಗರ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರಗಳಲ್ಲಿನ ಚುನಾವಣಾ ತಂತ್ರದ ಕುರಿತು ಯಡಿಯೂರಪ್ಪ ನೇತೃತ್ವದ ಪರಾಮರ್ಶನಾ ಸಭೆಯಲ್ಲಿ ಭಾನುವಾರ ಚರ್ಚಿಸಲಾಯಿತು. ‘ಅನುಕಂಪದ ಮತ ಗಿಟ್ಟಿಸಿಕೊಳ್ಳಲು ವಿಜಯಕುಮಾರ್‌ ಸಹೋದರ ಪ್ರಹ್ಲಾದಬಾಬು ಅವರಿಗೆ ಟಿಕೆಟ್ ನೀಡುವುದು ಸೂಕ್ತ. ಅವರನ್ನು ಒಪ್ಪಿಸಿ ಪಕ್ಷದ ಚುನಾವಣಾ ಸಮಿತಿಗೆ ಶಿಫಾರಸು ಮಾಡಲಾಗುತ್ತದೆ’ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದರು.

‘ಎರಡೂ ಕ್ಷೇತ್ರಗಳನ್ನು ಗೆಲ್ಲಲು ಸಂಕಲ್ಪ ಮಾಡಲಾಗಿದೆ. ಜಯನಗರ ಕ್ಷೇತ್ರದ ಹೊಣೆಯನ್ನು ಕೇಂದ್ರ ಸಚಿವ ಅನಂತಕುಮಾರ್‌ ಹಾಗೂ ರಾಜ
ರಾಜೇಶ್ವರಿನಗರ ಕ್ಷೇತ್ರದ ಜವಾಬ್ದಾರಿಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ನೀಡಲಾಗಿದೆ’ ಎಂದು ಅವರು ಹೇಳಿದರು. ಸಭೆಯಲ್ಲಿ ಜಗದೀಶ ಶೆಟ್ಟರ್‌, ಗೋವಿಂದ ಕಾರಜೋಳ, ಸಿ.ವಿ. ರವಿ ಇದ್ದರು.

ಮೈತ್ರಿ ಇಲ್ಲ: ‘ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಇಲ್ಲಿ ಮೈತ್ರಿ ಪ್ರಶ್ನೆ ಬರುವುದಿಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷಎಚ್‌.ಡಿ. ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT