ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಟಿ.ಮಾಲ್‌ ತೆರಿಗೆ: 10 ದಿನಗಳಲ್ಲಿ ಉತ್ತರಿಸಲು ನಿರ್ದೇಶನ

Last Updated 25 ಜನವರಿ 2023, 20:24 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾಗಡಿ ರಸ್ತೆಯಲ್ಲಿನ ಜಿ.ಟಿ.ವರ್ಲ್ಡ್ ಶಾ‍‍‍‍‍ಪಿಂಗ್‌ ಮಾಲ್‌ಗೆ ವಿಧಿಸಲಾಗಿದ್ದ ಆಸ್ತಿ ತೆರಿಗೆ ಪ್ರಶ್ನಿಸಿ ಸಲ್ಲಿಸಲಾದ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಹತ್ತು ದಿನಗಳ ಒಳಗೆ ಉತ್ತರಿಸಿ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಈ ಕುರಿತಂತೆ ಜಿ.ಟಿ.ಸಿನೆಮಾಸ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಅಧ್ಯಕ್ಷ ಎಸ್‌.ಟಿ.ಆನಂದ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕೆ.ವಿ.ಧನಂಜಯ, ‘ಕೋವಿಡ್‌–19ರ ಕಾರಣಕ್ಕಾಗಿ ಕೇಂದ್ರ ಸರ್ಕಾರದ ನಿಯಮಾವಳಿ ಅನುಸಾರ ಜಿ.ಟಿ ಶಾಪಿಂಗ್‌ ಮಾಲ್‌ ಅನ್ನು 2019–20, 2020–2021 ಹಾಗೂ 2021–2022ರ ಮೂರು
ವರ್ಷಗಳಲ್ಲಿ ಕ್ರಮವಾಗಿ 18, 253 ಮತ್ತು 102 ದಿವಸ ಬಂದ್ ಮಾಡಲಾಗಿದೆ. ಆದರೆ, ಬಿಬಿಎಂಪಿ ಕಾಯ್ದೆ–2020ರ ಕಲಂ 142 ಮತ್ತು 144ರ ಅನ್ವಯ ಆಸ್ತಿ ತೆರಿಗೆ ವಿಧಿಸಿರುವುದು ಕಾನೂನುಬಾಹಿರ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ಹೊರಡಿಸಿದ ನಿಯಮಾವಳಿ ಅನುಸಾರವೇ ಅರ್ಜಿದಾರರು ಶಾಪಿಂಗ್ ಮಾಲ್‌ ಬಂದ್‌ ಮಾಡಿದ್ದು, ಈ ಅವಧಿಯಲ್ಲಿನ ತೆರಿಗೆ ಪಾವತಿಸುವಂತೆ ಕೇಳುವ ಅಧಿಕಾರ ಬಿಬಿಎಂಪಿಗೆ ಇಲ್ಲ. ಆಸ್ತಿ
ಬಳಕೆ ಮಾಡಿದರಷ್ಟೇ ತೆರಿಗೆ ವಿಧಿಸಲು ರಾಜ್ಯ ಸರ್ಕಾರಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ, ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ಆದೇಶದ ಅನುಸಾರ ಯಾವುದೇ ವಹಿವಾಟು ನಡೆಸದೆ ಬಂದ್ ಮಾಡಲಾಗಿತ್ತು ಎಂಬುದನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ. ಇತ್ತೀಚೆಗೆ ಬಿಬಿಎಂಪಿ ಅಧಿಕಾರಿಗಳು ಮಾಲ್‌ ಬಂದ್‌ ಮಾಡುವ ಬಲವಂತದ ಕ್ರಮಕ್ಕೆ ಮುಂದಾಗಿದ್ದಾರೆ’ ಎಂದು ಆಕ್ಷೇಪಿಸಿದರು.

ಇದಕ್ಕೆ ಬಿಬಿಎಂಪಿ ವಕೀಲರು ಸೂಕ್ತ ವಿವರಣೆ ಪಡೆದು ನ್ಯಾಯಾಲಯಕ್ಕೆ ನೀಡುವುದಾಗಿ ತಿಳಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಹತ್ತು ದಿನಗಳ ಕಾಲ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT