ಬೆಂಗಳೂರು: ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆಯಂದು ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಏಳು ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಮೈದಾನದಲ್ಲಿ ಮಂಗಳವಾರ ಪೂರ್ವ ಸಿದ್ಧತೆಯನ್ನು ವೀಕ್ಷಿಸಿ ಜಂಟಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಮುಖ್ಯಮಂತ್ರಿಯವರು ಗುರುವಾರ ಬೆಳಿಗ್ಗೆ 9ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದು, ನಂತರ ತೆರೆದ ಜೀಪಿನಲ್ಲಿ ಪರೇಡ್ ವೀಕ್ಷಿಸಲಿದ್ದಾರೆ. ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಬಿಎಸ್‌ಎಫ್, ಸಿಎಆರ್, ಗೋವಾ ಪೊಲೀಸ್, ಕೆಎಸ್‌ಐಎಸ್‌ಎಫ್, ಸಂಚಾರ ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾರ್ಡ್ಸ್, ಸಂಚಾರ ವಾರ್ಡನ್, ಅಗ್ನಿಶಾಮಕ ದಳ ಸಿಬ್ಬಂದಿ, ಶ್ವಾನದಳ ಮತ್ತು ಬ್ಯಾಂಡ್ ಒಟ್ಟು 35 ತುಕಡಿಗಳಲ್ಲಿ 1,150 ಮಂದಿ ಗೌರವ ರಕ್ಷೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತುಷಾರ್ ಗಿರಿನಾಥ್ ಹೇಳಿದರು.
ಮಂಜುನಾಥ್, ಬಿ. ಸಿದ್ದರಾಜಯ್ಯ, ಐಶ್ವರ್ಯ ಮಹೇಶ್, ಮತ್ತಿಗುಂಟೆ ಕೃಷ್ಣಮೂರ್ತಿ ಅವರ ತಂಡ ನಾಡಗೀತೆ ಮತ್ತು ರೈತ ಗೀತೆಯನ್ನು ಹಾಡಲಿದೆ. ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 650 ಮಕ್ಕಳು ‘ಜಯಭಾರತಿ’ ನೃತ್ಯ ಪ್ರದರ್ಶನ ನೀಡಲಿದ್ದಾರೆ. ರಾಷ್ಟ್ರೀಯ ಯೋಜನೆ, ರಾಜ್ಯ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಯುವ ‘ಸರ್ಕಾರದ ಐದು ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ’ಗಳ ಪ್ರದರ್ಶನದಲ್ಲಿ 400 ಮಕ್ಕಳು ಮಾಹಿತಿ ನೀಡಲಿದ್ದಾರೆ ಎಂದರು.
ಪಿಳ್ಳಣ್ಣ ಗಾರ್ಡನ್‌ನಲ್ಲಿರುವ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನ 700 ಮಕ್ಕಳು ‘ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ದೇವಿ’ ಪ್ರದರ್ಶನ ನೀಡಲಿದ್ದಾರೆ. ವಿವೇಕ್ ಪವಾರ್ ನೇತೃತ್ವದಲ್ಲಿ ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ಸೆಂಟರ್‌ನ ತಂಡ ‘ಮಲ್ಲಕಂಬ’ ಪ್ರದರ್ಶನ ನೀಡಲಿದೆ. ಪ್ಯಾರಚ್ಯೂಟ್ ರೆಜಿಮೆಂಟ್ ಟ್ರೈನಿಂಗ್ ಸೆಂಟರ್‌ನ ಸೋಂಬೀರ್ ಮತ್ತು ಅವರ ತಂಡ ‘ಪ್ಯಾರಾ ಮೋಟಾರ್’ ಪ್ರದರ್ಶನ ನೀಡಲಿದೆ. ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್ ಆ್ಯಂಡ್ ಸ್ಕೂಲ್‌ನ ಎಂ.ಕೆ. ಸಿಂಗ್ ಅವರ ತಂಡ ‘ಮೋಟಾರ್ ಸೈಕಲ್’ ಪ್ರದರ್ಶನ ನಡೆಸಿಕೊಡಲಿದೆ ಎಂದು ಮಾಹಿತಿ ನೀಡಿದರು.
ಅಂಗಾಂಗ ದಾನ ಮಾಡಿರುವ 64 ಜನರ ಕುಟುಂಬದ ಸದಸ್ಯರಿಗೆ ಮುಖ್ಯಮಂತ್ರಿ ಪ್ರಶಂಸಾಪತ್ರ’ ನೀಡಲಿದ್ದಾರೆ ಎಂದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್, ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್, ಬಿಬಿಎಂಪಿ ಪೂರ್ವ ವಲಯ ಆಯುಕ್ತೆ ಸ್ನೇಹಲ್ ಉಪಸ್ಥಿತರಿದ್ದರು.
ಕಮಿಷನರ್ ‘ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಬರುವ ನಾಗರಿಕರು ಆಹ್ವಾನ ಪತ್ರದಲ್ಲಿರುವ ಗೇಟ್‌ನಲ್ಲೇ ಪ್ರವೇಶ ಪಡೆಯಬೇಕು. ವಾಹನ ನಿಲುಗಡೆ ಪ್ರದೇಶ ಕಡಿಮೆ ಇರುವುದರಿಂದ ನಮ್ಮ ಮೆಟ್ರೊ ಬಿಎಂಟಿಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ಬಳಸಬೇಕು’ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಮನವಿ ಮಾಡಿದರು. ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಭದ್ರತೆ ಹಾಗೂ ಸುರಕ್ಷತೆಗೆ 100 ಸಿಸಿ ಟಿ.ವಿ ಕ್ಯಾಮೆರಾ ಎರಡು ಬ್ಯಾಗೇಜ್ ಸ್ಕ್ಯಾನರ್ ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಲಾಗಿದೆ. ಅಗ್ನಿಶಾಮಕ ದಳ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ ಎಂದರು. 10 ಡಿಸಿಪಿ 17 ಎಸಿಪಿ 42 ಇನ್‌ಸ್ಪೆಕ್ಟರ್ 112 ಪಿಎಸ್‌ಐ 62 ಎಎಸ್‌ಐ 511 ಕಾನ್‌ಸ್ಟೇಬಲ್ 72 ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ.10 ಡಿಸಿಪಿ 17 ಎಸಿಪಿ 42 ಇನ್‌ಸ್ಪೆಕ್ಟರ್ 112 ಪಿಎಸ್‌ಐ 62 ಎಎಸ್‌ಐ 511 ಕಾನ್‌ಸ್ಟೇಬಲ್ 72 ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇದಲ್ಲದೆ ನಗರದ ಎಲ್ಲ ಕಡೆಗಳಲ್ಲೂ ರಕ್ಷಣೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.