ಸೋಮವಾರ, ಸೆಪ್ಟೆಂಬರ್ 20, 2021
21 °C
ಗುರು ರಾಘವೇಂದ್ರ, ಗುರು ಸಾರ್ವಭೌಮ ಸಹಕಾರ ಬ್ಯಾಂಕ್‌ ಹಗರಣ

₹ 45.32 ಕೋಟಿ ಮೌಲ್ಯದ ಆಸ್ತಿ ಇ.ಡಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಂಚನೆ ಆರೋಪ ಎದುರಿಸುತ್ತಿರುವ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಕೋ–ಆಪರೇಟಿವ್‌ ಲಿಮಿಟೆಡ್‌ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ₹ 45.32 ಕೋಟಿ ಮೌಲ್ಯದ ಆಸ್ತಿಗಳನ್ನು ಶುಕ್ರವಾರ ವಶಕ್ಕೆ ಪಡೆದಿದೆ.

ಎರಡೂ ಬ್ಯಾಂಕ್‌ಗಳ ಅಧ್ಯಕ್ಷ ಕೆ. ರಾಮಕೃಷ್ಣ, ಉಪಾಧ್ಯಕ್ಷರಾಗಿದ್ದ ದಿವಂಗತ ಟಿ.ಎಸ್‌. ಸತ್ಯನಾರಾಯಣ, ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ವಿ. ಮಯ್ಯ, ಹಾಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್‌ ಕುಮಾರ್‌ ಎ. ಹಾಗೂ ‌ಇತರ ಸಿಬ್ಬಂದಿಯ ಬ್ಯಾಂಕ್‌ ಖಾತೆಗಳಲ್ಲಿದ್ದ ₹ 7.16 ಕೋಟಿ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕೃಷಿ ಜಮೀನು, ಅಪಾರ್ಟ್‌ಮೆಂಟ್‌ಗಳು, ಮನೆಗಳು ಸೇರಿದಂತೆ 29 ಸ್ಥಿರಾಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಸಹಕಾರ ಸಂಸ್ಥೆಗಳಲ್ಲಿ ಮೂಲದಲ್ಲೇ ತೆರಿಗೆ ಕಡಿತಗೊಳಿಸಿ, ಸರ್ಕಾರಕ್ಕೆ ಪಾವತಿಸುವುದನ್ನು ತಪ್ಪಿಸಿ, ವಂಚಿಸುವ ಉದ್ದೇಶದಿಂದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯ ಕೆಲವರು ಹಾಗೂ ಅಧಿಕಾರಿಗಳು ಶಾಮೀಲಾಗಿ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಕೋ– ಆಪರೇಟಿವ್‌ ಲಿಮಿಟೆಡ್‌ ಸ್ಥಾಪಿಸಿದ್ದರು. ಸೊಸೈಟಿಯಿಂದ ಕೋಟ್ಯಂತರ ರೂಪಾಯಿಗಳನ್ನು ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಸುಸ್ತಿ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ರಾಮಕೃಷ್ಣ ಮತ್ತು ಮಯ್ಯ ಸೇರಿಕೊಂಡು ಈ ಕೃತ್ಯ ಎಸಗಿದ್ದರು ಎಂದು ಇ.ಡಿ ಹೇಳಿದೆ.

ಶೇ 12ರಿಂದ 16ರಷ್ಟು ಬಡ್ಡಿ ನೀಡುವ ಆಮಿಷವೊಡ್ಡಿ ಗ್ರಾಹಕರಿಂದ ₹ 1,500 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಿ ವಂಚಿಸಿರುವ ಆರೋಪದ ಮೇಲೆ ಎಂ.ವಿ. ಮಯ್ಯ ಮತ್ತು ಇತರರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಫೆಬ್ರುವರಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆಯಡಿ ತನಿಖೆ ನಡೆಸುತ್ತಿದೆ. ಬ್ಯಾಂಕ್‌ನ ಆಡಳಿತ ಮಂಡಳಿಯ ಪ್ರಮುಖರು, ಅಧಿಕಾರಿಗಳು ಮತ್ತು ಸಿಬ್ಬಂದಿ ಬೇನಾಮಿ ಖಾತೆಗಳನ್ನು ತೆರೆದು ದೊಡ್ಡ ಮೊತ್ತದ ಸಾಲ ಪಡೆದಿದ್ದಾರೆ. ಸಾಲ ಮರುಪಾವತಿ ಮಾಡದೇ ವಂಚಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಇ.ಡಿ ಪ್ರಕಟಣೆ ತಿಳಿಸಿದೆ.

ರಾಮಕೃಷ್ಣ, ಅವರ ಪತ್ನಿ ಮತ್ತು ಮಗ ಶಾಮೀಲಾಗಿ ಮುಖ್ಯಪ್ರಾಣ ಅಗ್ರೋ ಫಾರ್ಮಿಂಗ್‌ ಅಂಡ್‌ ರೀಸರ್ಚ್‌ ಇನ್ಫೋ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಬ್ಯಾಂಕ್‌ನಿಂದ ಹಣ ಪಡೆದು ವಂಚಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.  ಬ್ಯಾಂಕ್‌ನ ಹಣ ಬಳಸಿಕೊಂಡ ಮಯ್ಯ ಸ್ಥಿರಾಸ್ತಿ ಗಳನ್ನು ಖರೀದಿಸಿರುವುದನ್ನು ಪತ್ತೆ ಮಾಡಲಾಗಿದೆ. ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಇದೇ ಮಾದರಿಯಲ್ಲಿ ಅಕ್ರಮ ಎಸಗಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಆರಂಭಿಕ ಹಂತದಲ್ಲಿ ಲಭ್ಯವಿರುವ ಸಾಕ್ಷ್ಯಗಳ ಆಧಾರದಲ್ಲಿ ₹ 45.32 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು