ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಯುಗದಲ್ಲೂ ಶಿಕ್ಷಕರ ಪಾತ್ರ ನಿರ್ಣಾಯಕ: ಗುರುರಾಜ ಕರಜಗಿ

ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅಭಿಮತ
Last Updated 4 ಸೆಪ್ಟೆಂಬರ್ 2020, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ತಂದ ಬದಲಾವಣೆಯಿಂದ ಆನ್‌ಲೈನ್ ಶಿಕ್ಷಣ ಪ್ರಾರಂಭವಾದರೂ ಶಿಕ್ಷಕರ ಮಹತ್ವ ಮಾತ್ರ ಕಡಿಮೆಯಾಗಲಿಲ್ಲ. ಈ ಅವಧಿಯಲ್ಲಿಯೂ ಹಲವಾರು ಶಿಕ್ಷಕರು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಡಕಾಗದಂತೆ ಶ್ರಮಿಸುತ್ತಿದ್ದಾರೆ’ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪ್ರಗತಿ ಶಾಲೆಯು ಡಿಎಕ್ಸ್‌ಸಿ ಟೆಕ್ನಾಲಜಿಸ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪ್ರೇರಣಾ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶಿಕ್ಷಕರು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಾರೆ. ಈ ಡಿಜಿಟಲ್ ಯುಗದಲ್ಲಿ ಶಿಕ್ಷಕರಿಂದ ಆನ್‌ಲೈನ್ ಹಾಗೂ ಆಫ್‌ಲೈನ್‌ ಮಾರ್ಗದರ್ಶನ ಅತ್ಯಗತ್ಯ. ಉತ್ತರ ಕರ್ನಾಟಕ ಭಾಗದಲ್ಲಿ ಹಲವಾರು ಶಿಕ್ಷಕರು ಈ ಸಂದರ್ಭದಲ್ಲಿಯೂ ಮನೆ ಮನೆಗೆ ತೆರಳಿ, ಪಾಠ ಮಾಡುತ್ತಿದ್ದಾರೆ’ ಎಂದು ತಿಳಿಸಿದರು. ‌

‘ಸರ್ಕಾರಿ ಶಾಲೆಯ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಕೂಡ ಇರುತ್ತದೆ. ಶೇ 80 ರಷ್ಟು ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ಓದುತ್ತಿದ್ದಾರೆ. ಮಹಾನ್ ನಾಯಕರು ಎನಿಸಿಕೊಂಡವರಲ್ಲಿ ಬಹುತೇಕರು ಸರ್ಕಾರಿ ಶಾಲೆಯಲ್ಲಿ ಅಭ್ಯಸಿಸಿದವರು. ಯಾವ ಶಿಕ್ಷಕರು ತಮ್ಮ ವೃತ್ತಿ ಹಾಗೂ ಮಕ್ಕಳನ್ನು ಪ್ರೀತಿಯಿಂದ ಕಾಣುತ್ತಾರೋ ಅವರು ಯಶಸ್ವಿ ಶಿಕ್ಷಕರಾಗಿ ಹೊರಹೊಮ್ಮುತ್ತಾರೆ’ ಎಂದರು.

ಮೂಡಿಗೆರೆಯಲೋಕವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಆರ್. ನವೀನ್ ಮಾತನಾಡಿ, ‘ಪ್ರಾಥಮಿಕ ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಗೂ ಭದ್ರ ಬುನಾದಿ. ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಅಕ್ಕಪಕ್ಕದ ಹಳ್ಳಿಗಳಿಗೆ ತೆರಳಿ, ಪಾಲಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ಮನವರಿಕೆ ಮಾಡಿಸುತ್ತಿದ್ದೇನೆ. ‘ವಿದ್ಯಾಗಮ’ ಯೋಜನೆಯಡಿ ಮಕ್ಕಳ ಮನೆಗಳಿಗೆ ತೆರಳಿ, ಶಿಕ್ಷಣ ನೀಡುತ್ತಿದ್ದೇನೆ. ಮೊಬೈಲ್‌ ಇರುವವರು ಹಾಗೂ ಇಲ್ಲದವರನ್ನು ವಿಂಗಡಿಸಿ, ಪ್ರತ್ಯೇಕವಾಗಿ ಶಿಕ್ಷಣ ಒದಗಿಸಲಾಗುತ್ತಿದೆ’ ಎಂದರು.

ದಾವಣಗೆರೆಯ ಸರ್ಕಾರಿ ಅಂಧರ ಶಾಲೆಯ ಶಿಕ್ಷಕಿ ಕಾತ್ಯಾಯಿನಿ ಅನಿಲ್ ಕುಮಾರ್, ‘22 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಅಂಧ ಮಕ್ಕಳಲ್ಲಿ ಯಾವುದೇ ರೀತಿಯ ಕೀಳರಿಮೆ ಬರಬಾರದು ಎಂಬುದು ನನ್ನ ಆಶಯ. ಆ ನಿಟ್ಟಿನಲ್ಲಿ ಪಠ್ಯದ ಶಿಕ್ಷಣದ ಜತೆಗೆ ಪಠ್ಯೇತರ ಶಿಕ್ಷಣದಲ್ಲೂ ನಮ್ಮ ಮಕ್ಕಳು ಮುಂದೆ ಬರುವಂತೆ ಪ್ರೇರೇಪಿಸುತ್ತಿದ್ದೇನೆ’ ಎಂದು ತಿಳಿಸಿದರು.

ಸಾಮಾಜಿಕ ಉದ್ಯಮಿ ವಿನಯ್ ಶಿಂಧೆ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT