ಬೆಂಗಳೂರು: ವ್ಯಾಯಾಮದ ನಂತರ ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೊ ಚಿತ್ರೀಕರಿಸಿದ್ದ ಆರೋಪದಡಿ ಜಿಮ್ ತರಬೇತುದಾರರೊಬ್ಬರನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಯುವತಿ ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ಕೈಗೊಂಡು ತರಬೇತುದಾರನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಠಾಣೆ ವ್ಯಾಪ್ತಿಯ ಜಿಮ್ ಕೇಂದ್ರವೊಂದರಲ್ಲಿ ಯುವತಿ ನಿತ್ಯವೂ ವ್ಯಾಯಾಮ ಮಾಡುತ್ತಿದ್ದರು. ವ್ಯಾಯಾಮ ಮಾಡಿದವರಿಗೆ ಅನುಕೂಲವಾಗಲೆಂದು ಸ್ನಾನದ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಯುವತಿ ಸಹ ವ್ಯಾಯಾಮದ ನಂತರ ಸ್ನಾನ ಮಾಡಿ ಮನೆಗೆ ಹೋಗುತ್ತಿದ್ದರು.’
‘ಇತ್ತೀಚೆಗೆ ಯುವತಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ, ಆರೋಪಿ ಕಿಟಕಿ ಬಳಿ ನಿಂತಿದ್ದ. ತನ್ನ ಮೊಬೈಲ್‌ನಲ್ಲಿ ಯುವತಿಯ ವಿಡಿಯೊವನ್ನು ಚಿತ್ರೀಕರಿಸುತ್ತಿದ್ದ. ಅನುಮಾನಗೊಂಡ ಯುವತಿ ಕಿಟಕಿ ಬಳಿ ಹೋಗಿ ನೋಡುವಷ್ಟರಲ್ಲಿ ಆರೋಪಿ, ಪರಾರಿಯಾಗಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಜಿಮ್ ಕೇಂದ್ರದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಯುವತಿ ವೀಕ್ಷಿಸಿದ್ದರು. ತರಬೇತುದಾರ ಕಿಟಕಿ ಬಳಿ ಅಡಗಿ ಕುಳಿತು ಚಿತ್ರೀಕರಣ ಮಾಡುತ್ತಿದ್ದ ದೃಶ್ಯ, ಕ್ಯಾಮೆರಾದಲ್ಲಿತ್ತು. ಅದೇ ದೃಶ್ಯ ಆಧರಿಸಿ ಯುವತಿ ದೂರು ನೀಡಿದ್ದರು’ ಎಂದು ಮೂಲಗಳು ಹೇಳಿವೆ.