ಭಾನುವಾರ, ಅಕ್ಟೋಬರ್ 25, 2020
26 °C
ಹೇಳಿಕೆ ಸ್ವಾಗತಿಸಿದ ಕಾಂಗ್ರೆಸ್‌ ನಾಯಕರು | ಬಿಜೆಪಿ ನಾಯಕರ ಮೌನ

ಟಿಪ್ಪು ಮಣ್ಣಿನ ಮಗ: ವಿಶ್ವನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಟಿಪ್ಪು ಸುಲ್ತಾನ್‌ ಈ ನೆಲದ ಮಣ್ಣಿನ ಮಗ. ಆತ ಯಾವುದೇ ಪಕ್ಷ, ಜಾತಿ ಧರ್ಮಕ್ಕೆ ಸೇರಿದವನಲ್ಲ’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

‘ಟಿಪ್ಪುವನ್ನು ಯಾವುದೇ ಒಂದು ಪಕ್ಷ, ಜಾತಿ, ಧರ್ಮಕ್ಕೆ ಸೇರಿ ಚಿಕ್ಕವನನ್ನಾಗಿ ಮಾಡಬಾರದು. ಟಿಪ್ಪು ವಿಷಯವನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಐದನೇ ತರಗತಿ ಬದಲಿಗೆ ಏಳನೇ ತರಗತಿ ಪಠ್ಯದಲ್ಲಿ ಅಳವಡಿಸಲಾಗಿದೆ’ ಎಂದು ಅವರು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಸ್ಥಾಪನೆ ಕುರಿತು ಮಾತನಾಡುವಾಗ, ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕಮಾಂಡರ್‌. ಅದೇ ರೀತಿ ಟಿಪ್ಪು ಕೂಡ. ಗಾಂಧೀಜಿಯಿಂದ ಹಿಡಿದು ಟಿಪ್ಪುವಿನ ತನಕ ವಿದ್ಯಾರ್ಥಿಗಳು ಎಲ್ಲವನ್ನೂ ಓದಬೇಕು ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಹೊಸತರಲ್ಲೇ ಟಿಪ್ಪು ಜಯಂತಿ ರದ್ದು ಮಾಡಿತ್ತು.  ಟಿಪ್ಪು ವಿಷಯದಲ್ಲಿ ಬಿಜೆಪಿಯ ಕೆಲವು ನಾಯಕರು ಕೆಂಡ ಕಾರುತ್ತಿರುವ ಬೆನ್ನಲ್ಲೇ, ವಿಶ್ವನಾಥ್‌ ಅವರು ಟಿಪ್ಪುವಿನ ಕುರಿತು ಪ್ರಶಂಸೆ ಮಾಡಿದರುವುದು, ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ವಿಶ್ವನಾಥ್‌ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕರು ತಕ್ಷಣವೇ ಸ್ವಾಗತಿಸಿದ್ದು, ಬಿಜೆಪಿಯ ಯಾವುದೇ ಮುಖಂಡರು ಪ್ರತಿಕ್ರಿಯೆ ನೀಡಿಲ್ಲ.

ಈ ಕುರಿತು ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದು, ‘ಬಿಜೆಪಿ ಸರ್ಕಾರ ಟಿಪ್ಪುಸುಲ್ತಾನ್‌ ವಿಷಯವನ್ನು ಪಠ್ಯದಿಂದ ತೆಗೆಯುವ ಕೆಲಸ ಮಾಡಿದೆ. ಆದರೆ, ಬಿಜೆಪಿ ನಾಯಕ ಎಚ್‌.ವಿಶ್ವನಾಥ್‌ ಅವರು ಟಿಪ್ಪು ಈ ನೆಲದ ಮಣ್ಣಿನ ಮಗ ಎಂದಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಹೋರಾಟಗಾರ ಎಂದು ಪ್ರಮಾಣ ಪತ್ರ ಕೊಟ್ಟಿದ್ದಾರೆ. ಬಿಜೆಪಿ ನಾಯಕರೇ ಈಗಲಾದರೂ ಅರ್ಥವಾಗಿದೆಯೇ’ ಎಂದು ಲೇವಡಿ ಮಾಡಿದ್ದಾರೆ.

‘ಟಿಪ್ಪು ಕುರಿತು ವಿಶ್ವನಾಥ್‌ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿ ಸತ್ಯವನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ. ಟಿಪ್ಪು ಒಬ್ಬ ದೇಶ ಭಕ್ತ, ವೀರ ಸೇನಾನಿ. ಬಿಜೆಪಿ ಇತಿಹಾಸ ತಿರುಚುವ ಕೆಲಸ ಮಾಡುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು