ಶನಿವಾರ, ಮೇ 8, 2021
20 °C
ಕೋವಿಡ್‌ನಂತಹ ತುರ್ತು ಸಂದರ್ಭದಲ್ಲಿ ಚುನಾವಣೆ ಬೇಕೆ – ಸದಸ್ಯರ ಪ್ರಶ್ನೆ

‘ಹಜ್‌ ಸಮಿತಿ ಚುನಾವಣೆಗೆ ಆತುರವೇಕೆ ? ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಮತ್ತು ರಾಜಧಾನಿಯಲ್ಲಿ ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸಾವಿನ ಸಂಖ್ಯೆಯೂ ಏರುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಹಜ್ ಸಮಿತಿ ಅಧ್ಯಕ್ಷರ ಚುನಾವಣೆ ನಡೆಸಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ.

ನಗರದ ತಿರುಮೇನಹಳ್ಳಿ ಹೆಗ್ಗಡೆ ನಗರದಲ್ಲಿರುವ ಹಜ್‌ ಭವನದಲ್ಲಿ ಇದೇ 5ರಂದು ಚುನಾವಣೆ ನಡೆಸಲಾಗುವುದು ಎಂದು ರಾಜ್ಯಸರ್ಕಾರ ಪ್ರಕಟಿಸಿದೆ. ಹಜ್‌ ಸಮಿತಿಗೆ 14 ಸದಸ್ಯರಿದ್ದು, ಇವರು ಅಂದು ಅಧ್ಯಕ್ಷರನ್ನು ಚುನಾಯಿಸಲಿದ್ದಾರೆ.

‘ಸಾಲು ಸಾಲು ಸಾವುಗಳು ಸಂಭವಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರವು ಚುನಾವಣೆ ನಡೆಸಲು ಮುಂದಾಗಿರುವುದು ಅಚ್ಚರಿ ತಂದಿದೆ. ಯಾವುದೇ ಚುನಾವಣೆ ನಡೆಸುವಂತಿಲ್ಲ ಎಂದು ಮುಖ್ಯಮಂತ್ರಿಯವರೇ ಹೇಳಿದ್ದರು. ಅಲ್ಲದೆ, ಕರ್ನಾಟಕ ಸಾಹಿತ್ಯ ಪರಿಷತ್‌ನಂತಹ ಚುನಾವಣೆಯನ್ನೂ ಮುಂದೂಡಲಾಗಿದೆ. ಈಗ ಸರ್ಕಾರದ ಸಂಸ್ಥೆಯಾಗಿರುವ ಹಜ್ ಸಮಿತಿಯ ಚುನಾವಣೆಯನ್ನು ನಡೆಸಲು ಸರ್ಕಾರವೇ ಮುಂದಾಗಿದೆ’ ಎಂದು ಸಮಿತಿಯ ಸದಸ್ಯ ಮತ್ತು ವಿಧಾನ ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ ಹೇಳಿದರು.

‘ಚುನಾವಣೆ ನಡೆಸಬೇಕು ಎಂದು ಸಂಘದ ಸದಸ್ಯರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಚುನಾವಣೆ ನಡೆಸಬೇಕು ಎಂದು ಕೋರ್ಟ್‌ ಕೂಡ ಹೇಳಿದೆ. ಆದರೆ, ಇದಕ್ಕೆ ಯಾವುದೇ ಗಡುವು ನೀಡಿಲ್ಲ. ಅಲ್ಲದೆ, ಇದು ಹಜ್‌ ಯಾತ್ರೆ ಹೋಗುವ ಸಮಯವೂ ಅಲ್ಲ. ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವ ಕಾರಣದಿಂದ ಚುನಾವಣೆ ಮುಂದೂಡಿದರೂ ಅದು ನ್ಯಾಯಾಲಯದ ಆದೇಶಕ್ಕೆ ವಿರುದ್ಧ ಎನಿಸುವುದಿಲ್ಲ’ ಎಂದರು.

‘ಹಜ್ ಭವನದಲ್ಲಿಯೇ ಕೋವಿಡ್ ಆರೈಕೆ ಕೇಂದ್ರವನ್ನೂ ತೆರೆಯಲಾಗಿದೆ. ಚುನಾವಣೆ ಹೆಸರಿನಲ್ಲಿ ಮತ್ತೆ ಅಲ್ಲಿ ಜನ ಸೇರುವುದು ಒಳ್ಳೆಯದಲ್ಲ’ ಎಂದೂ ಹೇಳಿದರು.

‘ಸಾಮಾನ್ಯ ದಿನಗಳಲ್ಲಿ ಚುನಾವಣೆ ನಡೆಸಿ ಎಂದು ನ್ಯಾಯಾಲಯ ಹೇಳಿದೆಯೇ ವಿನಾ ತಕ್ಷಣಕ್ಕೆ ಎಲೆಕ್ಷನ್ ಮಾಡಿ ಎಂದು ಆದೇಶಿಸಿಲ್ಲ. 14 ಜನ ಸದಸ್ಯರು ರಾಜ್ಯದ ಬೇರೆ ಬೇರೆ ಕಡೆ ಇದ್ದಾರೆ. ಈ ಸಂದರ್ಭದಲ್ಲಿ ಅವರೆಲ್ಲರೂ ಬೆಂಗಳೂರಿಗೆ ಬರಲು ಸಾಧ್ಯವೇ, ಬಂದರೂ ಅದರಿಂದ ಎಲ್ಲರಿಗೂ ತೊಂದರೆ ಆಗುತ್ತದೆ. ಚುನಾವಣೆಯನ್ನು ಮುಂದೂಡಬೇಕು’ ಎಂದು ಸಮಿತಿಯ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯ ಸೈಯದ್‌ ನಾಸೀರ್‌ ಹುಸೇನ್‌ ಒತ್ತಾಯಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.