ಹಜ್ ಹೆಸರಲ್ಲಿ ವಂಚಿಸಿ 113 ಜನರಿಂದ ತಲಾ ₹ 3.20 ಲಕ್ಷ ಪಡೆದಿದ್ದ ಆರು ಮಂದಿ ಸೆರೆ

7

ಹಜ್ ಹೆಸರಲ್ಲಿ ವಂಚಿಸಿ 113 ಜನರಿಂದ ತಲಾ ₹ 3.20 ಲಕ್ಷ ಪಡೆದಿದ್ದ ಆರು ಮಂದಿ ಸೆರೆ

Published:
Updated:

ಬೆಂಗಳೂರು: ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ 113 ಮಂದಿಯಿಂದ ಹಣ ಸಂಗ್ರಹಿಸಿ ವಂಚಿಸಿದ ಆರೋಪದಡಿ ಜಯನಗರದ ‘ಹರೀಂ ಟೂರ್ಸ್‌’ ಏಜೆನ್ಸಿ ಮಾಲೀಕ ಸಿಗ್ಬತ್‌ವುಲ್ಲಾ ಷರೀಫ್ ಸೇರಿದಂತೆ ಆರು ಮಂದಿಯನ್ನು ತಿಲಕ್‌ನಗರ ಪೊಲೀಸರು ಬಂಧಿಸಿದ್ದಾರೆ.

ಸಿಗ್ಬತ್‌ವುಲ್ಲಾ, ಅವರ ಮಕ್ಕಳಾದ ರೆಹಮಾನ್, ರಿಜ್ವಾನ್, ಏಜೆಂಟರ್‌ಗಳಾದ ತೌಸಿಫ್, ಮಹಮದ್ ಮಾಮ್ಜ್‌ ಹಾಗೂ ಉಮೇರ್ ಅವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಮೈಸೂರಿನ ಎನ್‌.ಆರ್.ಮೊಹಲ್ಲಾ ನಿವಾಸಿ ಮೊಹಮದ್ ಅರಾಫತ್ ಶಫಿ ಎಂಬುವರು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಅವರಿಗೆ ದೂರು ಕೊಟ್ಟಿದ್ದರು. ವಂಚಕರ ವಿರುದ್ಧ ಕ್ರಮ ಜರುಗಿಸುವಂತೆ ಕಮಿಷನರ್ ತಿಲಕ್‌ನಗರ ಪೊಲೀಸರಿಗೆ ಸೂಚಿಸಿದ್ದರು.

15 ವರ್ಷಗಳಿಂದ ಏಜೆನ್ಸಿ ನಡೆಸುತ್ತಿರುವ ಸಿಗ್ಬತ್‌ವುಲ್ಲಾ ಹಾಗೂ ಮಕ್ಕಳು, ರಿಯಾಯ್ತಿ ದರದಲ್ಲಿ ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಜಯನಗರ ಸುತ್ತಮುತ್ತ ಪ್ರಚಾರ ಮಾಡಿದ್ದರು. ಅದನ್ನು ನಂಬಿದ ಕೆಲ ಸ್ಥಳೀಯರು, ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ತಮ್ಮ ಸಂಬಂಧಿಕರಿಗೂ ವಿಷಯ ತಿಳಿಸಿದ್ದರು. ಈ ಸೌಲಭ್ಯ ಪಡೆಯಲು 113 ಮಂದಿ ತಲಾ ₹ 3.20 ಲಕ್ಷ ಹಾಗೂ ತಮ್ಮ ಪಾಸ್‌ಪೋರ್ಟ್‌ಗಳನ್ನು ಏಜೆನ್ಸಿಗೆ ಕೊಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜೀವ ಬೆದರಿಕೆ ಹಾಕಿದರು: ‘ನಾನು ಹಾಗೂ ತಾಯಿ ಯಾತ್ರೆಗೆ ಹೊರಡಲು ನಿರ್ಧರಿಸಿದ್ದೆವು. ಇದೇ ಮಾರ್ಚ್ 10ರಂದು ಹರೀಂ ಟೂರ್ಸ್‌ಗೆ ತೆರಳಿ ಹಣ ಕೊಟ್ಟು ಬಂದಿದ್ದೆವು. ಕೆಲ ದಿನಗಳ ಬಳಿಕ ಸಿಗ್ಬತ್‌ವುಲ್ಲಾ ಅವರಿಗೆ ಕರೆ ಮಾಡಿದಾಗ, ‘ಜುಲೈ 30ರಂದು ನಿಮ್ಮ ವೀಸಾ ಬರುತ್ತದೆ. ಆ.5ರಂದು ಯಾತ್ರೆ ಸಂಬಂಧ ಒಂದು ಸಭೆ ನಡೆಸಿ, ಆ.13ಕ್ಕೆ ಎಲ್ಲರಿಗೂ ಟಿಕೆಟ್ ಬುಕ್ ಮಾಡುತ್ತೇನೆ’ ಎಂದಿದ್ದರು. ವೀಸಾ ಕೇಳಲು ಜುಲೈ 30ರಂದು ಕಚೇರಿಗೆ ಹೋದಾಗ, ‘ನೀವು ನಮಗೆ ಯಾವ ಹಣವನ್ನೂ ಕೊಟ್ಟಿಲ್ಲ. ಇನ್ನೊಮ್ಮೆ ಕಚೇರಿ ಬಳಿ ಬಂದರೆ ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಸಿದರು. ಹಣ ಕೊಟ್ಟಿರುವುದಕ್ಕೆ ನಮ್ಮ ಬಳಿ ದಾಖಲೆಗಳಿವೆ’ ಎಂದು ಅರಾಫತ್ ದೂರಿನಲ್ಲಿ ವಿವರಿಸಿದ್ದಾರೆ.

113 ಮಂದಿಯ ಪಾಸ್‌ಪೋರ್ಟ್‌ಗಳು ತೌಸಿಫ್‌ನ ಮನೆಯಲ್ಲಿ ಸಿಕ್ಕಿವೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ವಂಚನೆಗೆ ಒಳಗಾದವರು ತಾವು ಹಣ ಕಟ್ಟಿದಾಗ ಏಜೆನ್ಸಿಯಿಂದ ಪಡೆದಿದ್ದ ರಸೀದಿಯೊಂದಿಗೆ ಠಾಣೆಗೆ ಬಂದು ಹೇಳಿಕೆ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !