ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆಯಲ್ಲ, ಕೊಲೆ ?

2019ರ ಮೇ ನಲ್ಲಿ ಮೃತಪಟ್ಟಿದ್ದ ಉದ್ಯಮಿ ರಘುನಾಥ್
Last Updated 7 ಮಾರ್ಚ್ 2020, 22:12 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ 2019ರ ಮೇ ತಿಂಗಳಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕೆ.ರಘುನಾಥ್ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ‘ಇದು ಆತ್ಮಹತ್ಯೆಯಲ್ಲ, ಕೊಲೆ’ ಎಂಬ ಆರೋಪದಡಿ ಉದ್ಯಮಿ, ದಿವಂಗತ ಡಿ.ಕೆ.ಆದಿಕೇಶವಲು ಪುತ್ರ ಶ್ರೀನಿವಾಸ್ ಸೇರಿ ನಾಲ್ವರವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘2019ರ ಮೇ 2ರಿಂದ 4ರವರೆಗೆ ಅಕ್ರಮ ಬಂಧನದಲ್ಲಿದ್ದರು ಎನ್ನಲಾದ ರಘುನಾಥ್ ಮೃತದೇಹ ಶ್ರೀನಿವಾಸ್‌ ಅವರ ಅತಿಥಿ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆಯಡಿ ಪ್ರಕರಣವೂ ದಾಖಲಾಗಿತ್ತು. ಇದೊಂದು ಕೊಲೆ ಎಂಬುದಾಗಿ ದೂರಿದ್ದ ಪತ್ನಿ ಎಂ. ಮಂಜುಳಾ, ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ನ್ಯಾಯಾಲಯದ ಆದೇಶದಂತೆ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಘುನಾಥ್ ಮೃತಪಟ್ಟ 10 ತಿಂಗಳ ಬಳಿಕ ಪ್ರಕರಣವು ಬೇರೆ ಆಯಾಮ ಪಡೆದುಕೊಂಡಿದೆ. ಪತ್ನಿ ಮಂಜುಳಾ ಅವರಿಂದ ದೂರು ಪಡೆದುಕೊಂಡು ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ತಿಳಿಸಿದರು.

ಗೃಹ ಬಂಧನದಲ್ಲಿಟ್ಟು ಕೊಲೆ: ‘ಆಸ್ತಿ ವಿಚಾರವಾಗಿ ಮಾತನಾಡಬೇಕೆಂದು ಹೇಳಿ ಪತಿ ರಘುನಾಥ್ ಅವರನ್ನು ತಮ್ಮ ಬಳಿ ಕರೆಸಿಕೊಂಡಿದ್ದ ಆರೋಪಿಗಳು, ಗೃಹಬಂಧನದಲ್ಲಿಟ್ಟು ಕೊಲೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಮಂಜುಳಾ ಅವರು ಆರೋಪಿಸಿದ್ದಾರೆ.

‘ಆದಿಕೇಶವಲು ಬಳಿ40 ವರ್ಷಗಳಿಂದ ಪತಿ ವ್ಯವಹಾರ ನಡೆಸುತ್ತಿದ್ದರು. ಇದನ್ನು ಸಹಿಸದ ಶ್ರೀನಿವಾಸ್ ಮತ್ತು ಎ.ದಾಮೋದರ ಪತಿಗೆ ವಿಪರೀತ ಕಿರುಕುಳ ನೀಡಲಾರಂಭಿಸಿದ್ದರು. ಶ್ರೀನಿವಾಸ್ ಹಾಗೂ ಕಲ್ಪಜಾ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ₹ 60 ಕೋಟಿ ಹಾಗೂ ₹ 250 ಕೋಟಿ ಮೌಲ್ಯದ ಆಸ್ತಿಗಳು ಪತ್ತೆ ಆಗಿದ್ದವು. ಈ ದಾಳಿಯನ್ನು ಪತಿಯೇ ಮಾಡಿಸಿದ್ದಾರೆಂದು ತಿಳಿದ ಶ್ರೀನಿವಾಸ್ ಕೋಪಗೊಂಡಿದ್ದರು’ ಎಂದು ತಿಳಿಸಿದ್ದಾರೆ.

‘ಆಸ್ತಿ ಸಂಬಂಧ ಮಾತನಾಡಬೇಕೆಂದು ಹೇಳಿ ಆರೋಪಿಗಳು ಪತಿಯನ್ನು ಕರೆಸಿಕೊಂಡಿದ್ದರು. ಎರಡು ದಿನಗಳಾದರೂ ಪತಿ ವಾಪಸು ಬಂದಿರಲಿಲ್ಲ. ಗಾಬರಿಗೊಂಡು ಮಗನನ್ನು ನೋಡಿಕೊಂಡು ಬರಲು ಕಳುಹಿಸಿದ್ದೆ. ಆತ, ಶ್ರೀನಿವಾಸ್ ಅವರ ಅತಿಥಿಗೃಹಕ್ಕೆ ಹೋದಾಗ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತಿ ಮೃತದೇಹ ಕಂಡಿತ್ತು’ ಎಂದು ದೂರಿನಲ್ಲಿ ಮಂಜುಳಾ ಹೇಳಿದ್ದಾರೆ.

‘ರಘುನಾಥ್ ತೀರಿಕೊಂಡ 7 ತಿಂಗಳ ನಂತರ ಆರೋಪಿಗಳೇ ಫೋರ್ಜರಿ ವಿಲ್ ಮಾಡಿಸಿ ಆಸ್ತಿಯನ್ನೂ ಕಬಳಿಸಲು ಮುಂದಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT