ಭಾನುವಾರ, ನವೆಂಬರ್ 17, 2019
21 °C
₹ 7 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಶೌಚಾಲಯದಲ್ಲಿ ಫಿನಾಯಿಲ್ ಕುಡಿದ ರೌಡಿ

Published:
Updated:

ಬೆಂಗಳೂರು: ಗಾಂಜಾ ಸಾಗಣೆ ಪ್ರಕರಣದಲ್ಲಿ ಪೊಲೀಸರು ಮಹಜರು ನಡೆಸುವ ವೇಳೆಯಲ್ಲೇ ರೌಡಿ ಸದ್ದಾಂ ಹುಸೇನ್ (25) ಎಂಬಾತ ತನ್ನ ಮನೆಯ ಶೌಚಾಲಯದಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಅಸ್ವಸ್ಥಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

‘ಇಸ್ಲಾಂಪುರದ ನಿವಾಸಿ ಸದ್ದಾಂ ಹುಸೇನ್ ಹಾಗೂ ಆತನ ಸಹಚರರು ಶನಿವಾರ ಗಾಂಜಾ ಸಾಗಣೆ ಮಾಡುತ್ತಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿತ್ತು’ ಎಂದು ಎಚ್‌ಎಎಲ್‌ ಪೊಲೀಸರು ಹೇಳಿದರು.

‘ಆರೋಪಿಗಳಿಂದ ₹ 7 ಲಕ್ಷ ಮೌಲ್ಯದ 14 ಕೆ.ಜಿ 800 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಹೊಸಕೋಟೆಯಿಂದ ಗಾಂಜಾವನ್ನು ನಗರಕ್ಕೆ ಆರೋಪಿಗಳು ಸಾಗಿಸುತ್ತಿದ್ದರು. ಅವರಿಂದ ಗಾಂಜಾ ಖರೀದಿಸುತ್ತಿದ್ದ ಏಜೆಂಟರು ನಗರದೆಲ್ಲೆಡೆ ಮಾರಾಟ ಮಾಡುತ್ತಿದ್ದರೆಂಬ ಮಾಹಿತಿ ಸಿಕ್ಕಿದೆ’ ಎಂದು ತಿಳಿಸಿದರು.

ಸಿಬ್ಬಂದಿ ಮೇಲೆ ಹಲ್ಲೆ: ‘ಗಾಂಜಾ ಸಾಗಣೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿತ್ತು. ಮಹಜರು ನಡೆಸುವುದಕ್ಕಾಗಿ ಸದ್ದಾಂ ಹುಸೇನ್‌ನನ್ನು ಆತನ ಮನೆಗೆ ಕರೆದೊಯ್ಯಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಮನೆಯಲ್ಲಿದ್ದ ವೇಳೆಯಲ್ಲೇ ಸಿಬ್ಬಂದಿಗಳಾದ ಸತೀಶ್‌ಕುಮಾರ್ ಹಾಗೂ ಭೀಮಣ್ಣ ಅವರನ್ನು ತಳ್ಳಿ ತಪ್ಪಿಸಿಕೊಂಡು ಓಡಲಾರಂಭಿಸಿದ್ದ ಆರೋಪಿ ಶೌಚಾಲಯ ಸೇರಿದ್ದ. ಅಲ್ಲಿಯೇ ಇದ್ದ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ಬಾಗಿಲು ಮುರಿದು ಆತನನ್ನು ಆಸ್ಪತ್ರೆ ಕರೆದೊಯ್ಯಲಾಯಿತು’ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)