ಬೆಂಗಳೂರು: ‘ವಿಶೇಷ ಶಾಲೆಗಳಿಗೆ ಶಿಕ್ಷಕ ಕೇಂದ್ರಿತವಾಗಿ ನೀಡುತ್ತಿರುವ ಸಹಾಯಧನ ಸ್ಥಗಿತಗೊಳಿಸಿ, ಮಕ್ಕಳು ಕೇಂದ್ರಿತ ಸಹಾಯಧನ ನೀಡಬೇಕು. ಈ ಮೂಲಕ ಹಣದ ದುರುಪಯೋಗ ತಡೆಯಬೇಕು’ ಎಂದು ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ. ‘ಸರ್ಕಾರವು ಅಸ್ತಿತ್ವದಲ್ಲಿ ಇಲ್ಲದ ಯೋಜನೆಗಳಿಗೆ ಅನುದಾನ ನೀಡುತ್ತಿದೆ. ರಾಜ್ಯ ಅನುದಾನ ಸಂಹಿತೆ–1982ರಡಿ ವಿಶೇಷ ಶಾಲೆಗಳಿಗೆ ನೀಡುತ್ತಿರುವ ಸಹಾಯಧನವು ಶಿಕ್ಷಕ ಕೇಂದ್ರೀಕೃತವಾಗಿತ್ತು. ಇದನ್ನು 2010ರಲ್ಲಿ ಪರಿಷ್ಕರಿಸುವ ಮೂಲಕ ಅಂಗವಿಕಲ ಮಕ್ಕಳಿಗೆ ಕೇಂದ್ರೀಕೃತಗೊಳಿಸಿ, ರಾಜ್ಯ ಸಹಾಯಧನ ಯೋಜನೆ ಜಾರಿಗೆ ಆದೇಶ ಹೊರಡಿಸಲಾಗಿದೆ. ಆ ವೇಳೆ 27 ಶಾಲೆಗಳಿದ್ದವು. 2011ರಲ್ಲಿ ಏಳು ಶಾಲೆಗಳಿಗೆ ಮಂಜೂರಾತಿ ನೀಡಲಾಗಿದೆ. ಸರ್ಕಾರ ತಾನೇ
ರೂಪಿಸಿದ ಕಾನೂನು ಉಲ್ಲಂಘಿಸಿ, ಶಿಕ್ಷಕ ಕೇಂದ್ರೀಕೃತ ಸಹಾಯಧನಕ್ಕೆ ಆರ್ಥಿಕ ಇಲಾಖೆಯಿಂದ ಮಂಜೂರಾತಿ ನೀಡುತ್ತದೆ. ಸದ್ಯ 34 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಸಂಘದ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ತಿಳಿಸಿದ್ದಾರೆ.
‘ಅಸ್ತಿತ್ವದಲ್ಲಿ ಇರದ 1982ರ ರಾಜ್ಯ ಅನುದಾನ ಸಂಹಿತೆಯಡಿ ಶಾಲೆಗಳ ಸಿಬ್ಬಂದಿಗೆ ವಾರ್ಷಿಕ ಸುಮಾರು ₹ 20 ಕೋಟಿ ವೇತನ ನೀಡಲಾಗುತ್ತಿದೆ. ಈ ಶಾಲೆಗಳಲ್ಲಿ 871 ಮಕ್ಕಳಿದ್ದಾರೆ. ಪರಿಷ್ಕರಿಸಿದ ಯೋಜನೆಯಡಿ ವಾರ್ಷಿಕ ₹ 70 ಕೋಟಿ ವೆಚ್ಚದಲ್ಲಿ ಸುಮಾರು 10 ಸಾವಿರ ಮಕ್ಕಳಿಗೆ ಶೈಕ್ಷಣಿಕ ಪುನರ್ವಸತಿ ಒದಗಿಸಲಾಗುತ್ತಿದೆ. ಈ ಶಾಲೆಗಳಲ್ಲಿ ಸುಮಾರು 5 ಸಾವಿರ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಂಗವಿಕಲರ ಹಣ ಅವರ ಸಬಲೀಕರಣಕ್ಕೆ ಸದ್ಭಳಕೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.