ಸಂಭ್ರಮದ ಸಂತ ಮೇರಿ ಉತ್ಸವ

7

ಸಂಭ್ರಮದ ಸಂತ ಮೇರಿ ಉತ್ಸವ

Published:
Updated:
Deccan Herald

ಬೆಂಗಳೂರು: ಸಂತ ಮೇರಿ ಜನ್ಮದಿನದ ಪ್ರಯುಕ್ತ ನಗರದ ಪ್ರಮುಖ ಚರ್ಚ್‌ಗಳಲ್ಲಿ ‘ಮೇರಿ ಉತ್ಸವ’ವನ್ನು ಭಕ್ತಿಪೂರ್ವಕವಾಗಿ ಶನಿವಾರ ಆಚರಿಸಲಾಯಿತು. 

ಶಿವಾಜಿನಗರ, ಹೆಣ್ಣೂರು, ಬೇಗೂರು, ಹಲಸೂರು, ಹೊಸಕೋಟೆಯಲ್ಲಿನ ಸಂತ ಮೇರಿ ದೇವಾಲಯಗಳಿಗೆ ಬೆಳಿಗ್ಗಿನಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸತತ ಒಂಬತ್ತು ದಿನ ಚರ್ಚ್‌ಗೆ ಭೇಟಿ ನೀಡುವ ‘ನವೇನ’ ವ್ರತ ಕೈಗೊಂಡಿದ್ದ ಭಕ್ತರು, ಹತ್ತನೇ ದಿನವಾದ ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಪ್ರಾರ್ಥನೆಯ ತರುವಾಯ ಮನೆಯಲ್ಲಿ ತಯಾರಿಸಿದ ಸಿಹಿ ಮತ್ತು ಮಾಂಸಹಾರದ ಖಾದ್ಯಗಳನ್ನು ಬಂಧು–ಬಾಂಧವರು ಮತ್ತು ಸ್ನೇಹಿತರೊಂದಿಗೆ ಸವಿದರು. ಚರ್ಚ್‌ಗಳಿಗೆ ದೀಪಾಲಂಕಾರ ಮಾಡಲಾಗಿತ್ತು.

ಶಿವಾಜಿನಗರದ ಬೆಸಿಲಿಕಾ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು. ಅಲಂಕೃತ ರಥದಲ್ಲಿ ಮೇರಿ ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ಶಿವಾಜಿನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಲ್ಲಿಗೆ ಮತ್ತು ಸಂಪಿಗೆ ಹೂಗಳನ್ನು ಮೇರಿ ಮಾತೆಯ ಮೇಲೆ ಚೆಲ್ಲುತ್ತ, ತಮ್ಮ ಇಷ್ಟಾರ್ಥ ಈಡೇರಲೆಂದು ಸಾವಿರಾರು ಭಕ್ತಾದಿಗಳು ಹಾರೈಸಿದರು.

ಆರ್ಚ್‌ ಬಿಷಪ್‌ ಪೀಟರ್‌ ಮಚಾಡೋ ಪ್ರಾರ್ಥನಾ ಸಭೆ ಉದ್ದೇಶಿಸಿ, ‘ಮೇರಿ ಅವರು ಕ್ರೈಸ್ತರಿಗೆ ಮಾತ್ರ ಮಾತೆಯಲ್ಲ. ಎಲ್ಲರ ತಾಯಿಯೂ ಆಗಿದ್ದಾರೆ. ನಮ್ಮ ಈ ಸಂತಸದ ದಿನದಂದು ಪ್ರವಾಹ ಬಾಧಿತ ಕೇರಳ, ಕೊಡಗಿನ ಜನರ ಕಷ್ಟವನ್ನು ನೆನಪಿಸಿಕೊಳ್ಳೋಣ. ಸಾಧ್ಯವಾದರೆ, ಅವರಿಗೆ ನೆರವಾಗೋಣ’ ಎಂದು ಸಂದೇಶ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !