ಆಶ್ರಮದಲ್ಲಿ ಕೂಡಿಟ್ಟು, ವೇಶ್ಯಾವಾಟಿಕೆಗೆ ದೂಡಲು ಯತ್ನ

7
ಮಹಿಳೆಯನ್ನು ರಕ್ಷಿಸಿದ ಪತಿ, ಸಂಬಂಧಿಕರು

ಆಶ್ರಮದಲ್ಲಿ ಕೂಡಿಟ್ಟು, ವೇಶ್ಯಾವಾಟಿಕೆಗೆ ದೂಡಲು ಯತ್ನ

Published:
Updated:

ಬೆಂಗಳೂರು: ವಿವಾಹಿತ ಮಹಿಳೆಯೊಬ್ಬರನ್ನು ವಿಲ್ಸನ್‌ ಗಾರ್ಡನ್‌ನಲ್ಲಿರುವ ಆಶ್ರಮವೊಂದರಲ್ಲಿ ಅಕ್ರಮವಾಗಿ ಕೂಡಿಟ್ಟು ವೇಶ್ಯಾವಾಟಿಕೆಗೆ ದೂಡಲು ಯತ್ನಿಸಲಾಗಿದ್ದು, ಆ ಸಂಬಂಧ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಲೇಶ್ವರದ ಪಶ್ಚಿಮ ಉದ್ಯಾನ ಬಳಿಯ ನಿವಾಸಿಯಾದ 27 ವರ್ಷದ ಮಹಿಳೆಯನ್ನು ಮೂರು ತಿಂಗಳಿನಿಂದ ಆಶ್ರಮದಲ್ಲೇ ಕೂಡಿಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಪತಿ ಹಾಗೂ ಸಂಬಂಧಿಕರು, ಆಶ್ರಮಕ್ಕೆ ಹೋಗಿ ಮಹಿಳೆಯನ್ನು ರಕ್ಷಿಸಿದ್ದಾರೆ. 

‘ಸಂತ್ರಸ್ತೆ ನೀಡಿರುವ ದೂರು ಆಧರಿಸಿ, ಮಲ್ಲೇಶ್ವರದ ನಿವಾಸಿ ಶೀಲಾ ಹಾಗೂ ಆಕೆಯ ಮೂವರು ಸ್ನೇಹಿತೆಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ‍. ಅವರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

’ಸಂತ್ರಸ್ತೆಯು ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಪತಿ ಜೊತೆ ವಾಸವಿದ್ದಾರೆ. ಅವರ ಪಕ್ಕದ ಫ್ಲ್ಯಾಟ್‌ನಲ್ಲೇ ಆರೋಪಿ ಶೀಲಾ ನೆಲೆಸಿದ್ದಾರೆ. ಅವರಿಬ್ಬರು ನೆರೆಹೊರೆಯವರಾಗಿದ್ದರಿಂದ, ಪರಸ್ಪರ ಪರಿಚಯವಾಗಿ ನಿತ್ಯವೂ ಮಾತನಾಡುತ್ತಿದ್ದರು’.

‘ನೀನು ನೋಡುವುದಕ್ಕೆ ತುಂಬಾ ಚೆನ್ನಾಗಿದ್ದೀಯಾ. ನೀನು ಇದಕ್ಕಿಂತಲೂ ಚೆನ್ನಾಗಿರಬೇಕು. ಅದಕ್ಕಾಗಿ ಕೈ ತುಂಬಾ ಹಣ ಸಂಪಾದಿಸುವ ಕೆಲಸ ಮಾಡಬೇಕು’ ಎಂದು ಶೀಲಾ ಹೇಳುತ್ತಿದ್ದಳು. ಜತೆಗೆ, ‘ನನಗೆ ತುಂಬಾ ಕಾಂಟ್ಯಾಕ್ಟ್ ಇದೆ. ನೀನು ಏಕೆ ದಿನಾಲೂ ಮನೆಯಲ್ಲೇ ಇರುತ್ತೀಯಾ. ನನ್ನ ಥರ ಬಿಂದಾಸ್‌ ಜೀವನ ನಡೆಸಬೇಕು. ನಾನು ಪತಿಯಿಂದ ವಿಚ್ಛೇದನ ಪಡೆದು, ಈಗ ಬೇರೊಂದು ಮದುವೆಯಾಗಿ ಸುಖವಾಗಿದ್ದೇನೆ‍’ ಎನ್ನುತ್ತಿದ್ದಳು’ ಎಂದು ಪೊಲೀಸರು ಹೇಳಿದರು.

‘ಸಂತ್ರಸ್ತೆಗೆ ಮಕ್ಕಳು ಆಗಿರಲಿಲ್ಲ. ಆ ವಿಷಯವನ್ನೇ ಪದೇ ಪದೇ ಪ್ರಸ್ತಾಪಿಸುತ್ತಿದ್ದ ಶೀಲಾ, ‘ನಿನ್ನ ಗಂಡ ನಿನಗೆ ಮೋಸ ಮಾಡುತ್ತಿದ್ದಾನೆ. ನೀನು ಗಂಡನಿಗೆ ವಿಚ್ಛೇದನ ಕೊಡು. ಐಷಾರಾಮಿ ಜೀವನ ಹೇಗೆ ನಡೆಸಬೇಕೆಂದು ನಾನು ಹೇಳಿಕೊಡುತ್ತೇನೆ’ ಎಂದು ಹೇಳುತ್ತಿದ್ದಳು’.

‘ಏಪ್ರಿಲ್ 5ರಂದು ಬೆಳಿಗ್ಗೆ ಮಹಿಳೆಯ ಮನೆಗೆ ಹೋಗಿದ್ದ ಶೀಲಾ, ‘ನಿನ್ನ ವಿಷಯವನ್ನು ನನ್ನ ಚಿಕ್ಕಮ್ಮಳಿಗೆ ಹೇಳಿದ್ದೇನೆ. ನಿನಗೆ ಮಕ್ಕಳಾಗುವ ರೀತಿಯಲ್ಲಿ ಅವರು ಸಲಹೆ ನೀಡುತ್ತಾರೆ. ಅವರ ಮನೆಗೆ ಹೋಗಿ ಬರೋಣ ಬಾ’ ಎಂದು ಹೇಳಿ ಕರೆದೊಯ್ದಿದ್ದಳು.’

‘ಅಪಾರ್ಟ್‌ಮೆಂಟ್‌ ಸಮುಚ್ಚಯದಿಂದ ರಾಜಾಜಿನಗರದವರೆಗೆ ಅವರಿಬ್ಬರು, ಓಲಾ ಕ್ಯಾಬ್‌ನಲ್ಲಿ ಹೋಗಿದ್ದರು. ಅಲ್ಲಿಂದ ಇನ್ನೊಬ್ಬ ಮಹಿಳೆ ಜೊತೆಗೆ ಬೇರೊಂದು ಕಾರಿನಲ್ಲಿ ಶಾಸಕರ ಭವನದ ಹತ್ತಿರ ತೆರಳಿದ್ದರು. ಅಲ್ಲಿಗೆ ಬಂದಿದ್ದ ಮತ್ತೊಬ್ಬ ಮಹಿಳೆ, ಸಂತ್ರಸ್ತೆಯನ್ನು ಆಶ್ರಮಕ್ಕೆ ಕರೆದೊಯ್ದಿದ್ದಳು’ ಎಂದು ಪೊಲೀಸರು ವಿವರಿಸಿದರು.

‘ನಂತರ, ಮಹಿಳೆಯನ್ನು ಆಶ್ರಮದಲ್ಲೇ ಕೂಡಿಟ್ಟು ಕಿರುಕುಳ ನೀಡಲಾಗುತ್ತಿತ್ತು. ಆರೋಪಿ ಶೀಲಾ ಹಾಗೂ ಆಕೆಯ ಸ್ನೇಹಿತೆಯರು ನಿತ್ಯವೂ ಸಂತ್ರಸ್ತೆಗೆ ಕರೆ ಮಾಡಿ, ‘ನಿನ್ನ ಪತಿಗೆ ವಿಚ್ಛೇದನ ಕೊಡುವವರೆಗೂ ನೀವು ಇಲ್ಲಿಯೇ ಇರಬೇಕು. ಆಕಸ್ಮಾತ್  ಆಶ್ರಮದಿಂದ ಹೊರಗೆ ಹೋಗಲು ಯತ್ನಿಸಿದರೆ ಜೀವ ಸಹಿತ ಬಿಡುವುದಿಲ್ಲ. ಒಂದು ಗತಿ ಕಾಣಿಸುತ್ತೇವೆ’ ಎಂದು ಬೆದರಿಸುತ್ತಿದ್ದರು. ಅದರಿಂದಾಗಿ ಭಯದಲ್ಲೇ ಸಂತ್ರಸ್ತೆ ಕಾಲ ಕಳೆಯುತ್ತಿದ್ದಳು. ಈ ಬಗ್ಗೆ ಅವರೇ ದೂರಿನಲ್ಲಿ ಹೇಳಿಕೊಂಡಿದ್ದಾರೆ’ ಎಂದು ಹೇಳಿದರು.

ಮಾರಾಟ ಮಾಡಲು ಸಂಚು: ‘ಶೀಲಾ ಒಳ್ಳೆಯವಳು ಎಂದು ಆಗಾಗ ಮಾತನಾಡಿಸುತ್ತಿದ್ದೆ. ಅದನ್ನೇ ದುರುಪಯೋಗಪಡಿಸಿಕೊಂಡ ಆಕೆ, ಪತಿಗೆ ವಿಚ್ಛೇದನ ಕೊಡಿಸಿ ವೇಶ್ಯಾವಾಟಿಕೆಗಾಗಿ ನನ್ನನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದಳು’ ಎಂದು ಸಂತ್ರಸ್ತೆಯು ದೂರಿನಲ್ಲಿ ತಿಳಿಸಿದ್ದಾಳೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !