ಗುರುವಾರ , ಡಿಸೆಂಬರ್ 3, 2020
23 °C

ಮಹಿಳೆಗೆ ಕಿರುಕುಳ ಆರೋಪ: ಇನ್‌ಸ್ಪೆಕ್ಟರ್, ಪಿಎಸ್‌ಐಗಳ ವಿರುದ್ಧ ಎಫ್ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಿಳೆಯೊಬ್ಬರನ್ನು ಅಕ್ರಮ ಬಂಧನದಲ್ಲಿಟ್ಟು ಕಿರುಕುಳ ನೀಡಿದ್ದ ಆರೋಪದಡಿ ಇನ್‌ಸ್ಪೆಕ್ಟರ್, ಪಿಎಸ್‌ಐಗಳು ಸೇರಿದಂತೆ ನಾಲ್ವರು ಪೊಲೀಸರ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘42 ವರ್ಷದ ಮಹಿಳೆಯೊಬ್ಬರು ನೀಡಿರುವ ದೂರಿನನ್ವಯ ನ್ಯಾಯಾಲಯದ ನಿರ್ದೇಶನದಂತೆ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ವಿಜಯನಗರ ಠಾಣೆ ಇನ್‌ಸ್ಪೆಕ್ಟರ್ ಭರತ್, ಪಿಎಸ್‌ಐಗಳಾದ ಸಂತೋಷ್‌ಕುಮಾರ್, ಅಕ್ಷತಾ ಹಾಗೂ ಹೆಡ್‌ ಕಾನ್‌ಸ್ಟೆಬಲ್ ಲಿಂಗರಾಜು ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಲೈಂಗಿಕ ಕಿರುಕುಳ (ಐಪಿಸಿ 354), ಮಹಿಳೆಯರ ಗೌರವಕ್ಕೆ ಧಕ್ಕೆ ತಂದ (ಐಪಿಸಿ 354–ಬಿ), ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲು ತಪ್ಪು ಮಾಡಿದ (ಐಪಿಸಿ 166–ಎ), ಜೀವ ಬೆದರಿಕೆ (ಐಪಿಸಿ 506), ಅಪರಾಧ ಸಂಚು (ಐಪಿಸಿ 34), ಅಕ್ರಮ ಬಂಧನ (ಐಪಿಸಿ 341) ಹಾಗೂ ಕ್ರಿಮಿನಲ್ ಸಂಚು (ಐಪಿಸಿ 120ಬಿ) ರೂ‍ಪಿಸಿದ್ದ ಆರೋಪ ಐವರು ಪೊಲೀಸರ ಮೇಲಿದೆ’ ಎಂದೂ ಮೂಲಗಳು ಹೇಳಿವೆ.

‘ಪ್ರಕರಣವೊಂದರ ವಿಚಾರಣೆಗಾಗಿ 2019ರ ಜೂನ್ 14ರಂದು ಸಂಜೆ ಮಹಿಳೆಗೆ ಕರೆ ಮಾಡಿ ಕರೆಸಿದ್ದ ಪೊಲೀಸರು, ಅವರನ್ನು ಬಂಧಿಸಿ ರಾತ್ರಿಯಿಡಿ ಠಾಣೆಯಲ್ಲಿ ಇರಿಸಿಕೊಂಡಿದ್ದರು. ಮರುದಿನ ನ್ಯಾಯಾಲಯಕ್ಕೆ ಹಾಜರುಪಡಿಸಿ 7 ದಿನ ಕಸ್ಟಡಿಗೆ ಪಡೆದುಕೊಂಡಿದ್ದರು. ಕಸ್ಟಡಿ ಅವಧಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಸುಳ್ಳು ಹೇಳಿಕೆಯನ್ನೂ ಪಡೆದಿದ್ದರು. ಈ ಬಗ್ಗೆ ಯಾರಿಗಾದರೂ ಹೇಳಿದರೆ ಮಕ್ಕಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿಯೂ ಬೆದರಿಸಿದ್ದರು’ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು