ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಆಯುವವರ ಕಷ್ಟಕ್ಕೆ ಮಿಡಿದ ಹಸಿರು ದಳ

ರಾಜ್ಯದಾದ್ಯಂತ 3,500 ಕುಟುಂಬಗಳಿಗೆ ಉಚಿತವಾಗಿ ಆಹಾರ ಸಾಮಗ್ರಿ ಪೊಟ್ಟಣ ವಿತರಣೆ
Last Updated 5 ಏಪ್ರಿಲ್ 2020, 21:22 IST
ಅಕ್ಷರ ಗಾತ್ರ

ಬೆಂಗಳೂರು: ಕಸದ ರಾಶಿಯಲ್ಲಿ ಪ್ಲಾಸ್ಟಿಕ್‌, ಕಾಗದ ಮುಂತಾದುವುಗಳನ್ನು ಆಯ್ದುಕೊಂಡು ಬದುಕು ಕಟ್ಟಿಕೊಳ್ಳುವ ಕುಟುಂಬಗಳು ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಲಾಕ್‌ಡೌನ್‌ ಘೋಷಣೆ ಆದ ಬಳಿಕ ಅತ್ಯಂತ ಸಂಕಷ್ಟಕ್ಕೆ ಸಿಲುಕಿವೆ. ಅಕ್ಷರಶಃ ಬೀದಿಪಾಲಾಗಿರುವ ಇಂತಹ ಕುಟುಂಬಗಳ ಹಸಿವು ತಣಿಸಲು ‘ಹಸಿರುದಳ’ ನೆರವಾಗುತ್ತಿದೆ.

ರಾಜ್ಯದಾದ್ಯಂತ ಇಂತಹ ಸಾವಿರಾರು ಕುಟುಂಬಗಳನ್ನು ಗುರುತಿಸಿರುವ ಹಸಿರು ದಳ ದಾನಿಗಳ ನೆರವಿನಿಂದ ಅವರಿಗೆ ಧವಸಧಾನ್ಯ ಹಾಗೂ ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಉಚಿತವಾಗಿ ಪೂರೈಸುತ್ತಿದೆ.

‘ಸಹಜ ಸ್ಥಿತಿ ಇರುವಾಗಲೂ ಕಸ ಆಯುವ ಕುಟುಂಬಗಳು ಜೀವನ ಸಾಗಿಸುವುದು ಕಷ್ಟ. ಲಾಕ್‌ಡೌನ್‌ ಘೋಷಣೆ ಆದ ಬಳಿಕ ಇಂತಹ ಕುಟುಂಬಗಳ ಒಪ್ಪೊತ್ತಿನ ಊಟಕ್ಕೂ ಕಷ್ಟ ಪಡಬೇಕಾಗುತ್ತದೆ ಎಂಬುದು ನಮಗೆ ಗೊತ್ತಿತ್ತು. ಹಾಗಾಗಿ ಮಾರ್ಚ್‌ 23ರಿಂದಲೇ ಇಂತಹ ಕುಟುಂಬಗಳಿಗೆ ಆಹಾರ ಧಾನ್ಯ, ಹಾಗೂ ದಿನಸಿ ಸಾಮಾಗ್ರಿ ಪೂರೈಸಲು ಆರಂಭಿಸಿದೆವು’ ಎಂದು ಹಸಿರು ದಳದ ನಳಿನಿ ಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಮೊದಲಿನಿಂದಲೂ ಕಸ ಆಯುವವರ ಅಭಿವೃದ್ಧಿ ಬಗ್ಗೆ ಕೆಲಸ ಮಾಡುತ್ತಿರುವುದರಿಂದ ಇಂತಹ ಕುಟುಂಬಗಳಿಗೆ ಆಹಾರ ಸಾಮಗ್ರಿ ತಲುಪಿಸುವುದು ಸುಲಭವಾಯಿತು. ಪ್ರತಿ ಕುಟುಂಬಕ್ಕೆ 25 ಕೆ.ಜಿ.ಅಕ್ಕಿ, 5 ಕೆ.ಜಿ. ಬೇಳೆ,ಅರ್ಧ ಕೆ.ಜಿ.ಕಡಲೆಕಾಯಿ, ಒಂದು ಕೆ.ಜಿ.ಸಕ್ಕರೆ, ಎಣ್ಣೆ, ಸಾಂಬಾರ್‌ ಹುಡಿ, ಉಪ್ಪುಗಳನ್ನೊಳಗೊಂಡ ಪೊಟ್ಟಣಗಳನ್ನು ನೀಡುತ್ತಿದ್ದೇವೆ. ಅನೇಕ ದಾನಿಗಳು ನಮಗೆ ನೆರವಾಗಿದ್ದಾರೆ. ನಮ್ಮ ಜೊತೆ ‘ವಿತ್ ಬೆಂಗಳೂರು’ ಸಂಘಟನೆಯವರೂ ಕಸ ಆಯುವ ಕಾರ್ಮಿಕರಿಗೆ ನೆರವಾಗುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಮೊದಲ ಹಂತದಲ್ಲಿ 3500 ಮಂದಿಗೆ ಆಹಾರ ಪೂರೈಸಿದ್ದೇವೆ. ಇನ್ನೂ ಸುಮಾರು 5000 ಕುಟುಂಬಗಳಿಗೆ ಆಹಾರ ಪೂರೈಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

ಶುಚಿತ್ವದ ಮಾಹಿತಿ: ಕೊರೊನಾ ಸೋಂಕು ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಪಾಡುವ ಹಾಗೂ ಶುಚಿತ್ವ ಕಾಪಾಡುವುದರ ಮಹತ್ವದ ಬಗ್ಗೆಯೂ ಅವರಿಗೆ ತಿಳಿ ಹೇಳುತ್ತಿದ್ದೇವೆ ಎಂದರು.

‘ಲಾಕ್‌ಡೌನ್‌ ಘೋಷಣೆ ಆದ ಬಳಿಕ ಬಹುತೇಕ ಕಸ ಆಯುವ ಕುಟುಂಬಗಳು ಅಕ್ಷರಶಃ ಬೀದಿಗೆ ಬೀಳುವ ಹಂತದಲ್ಲಿದ್ದವು. ನಮ್ಮ ಕಷ್ಟ ಕಾಲದಲ್ಲೆಲ್ಲ ನೆರವಾಗಿದ್ದ ಹಸಿರು ದಳದವರು ಈ ಬಾರಿಯೂ ನಮ್ಮ ಕೈಬಿಡಲಿಲ್ಲ. ಅವರು ಆಹಾರ ಸಾಮಗ್ರಿ ನೀಡಿದ್ದರಿಂದ ಊಟಕ್ಕೆ ಕಷ್ಟವಾಗಲಿಲ್ಲ. ನಂತರ ಬೇರೆ ಕೆಲವು ಸಂಘಟನೆಯವರು ಆಹಾರ ಒದಗಿಸಿದರು’ ಎಂದು ಬನಶಂಕರಿಯ ಸಂಪಂಗಿ ತಿಳಿಸಿದರು.

‘ಲಾಕ್‌ಡೌನ್‌ ಬಳಿಕ ಹೊರಗಡೆ ಹೋಗುವಂತಿಲ್ಲ. ನಮ್ಮ ಕೆಲಸಕ್ಕೂ ಕತ್ತರಿ. ಜೀವನ ನಡೆಸುವುದೇ ಕಷ್ಟ ಎಂಬ ಸ್ಥಿತಿ ಇತ್ತು. ಅಂತಹ ಸಮಯದಲ್ಲಿ ಹಸಿರು ದಳದವರು ಸ್ವತಃ ಬಂದು ನಮಗೆ ಆಹಾರ ಸಾಮಗ್ರಿ ವಿತರಿಸಿದರು. ಇದರಿಂದ ನಮ್ಮ ಮನೆ ಮಕ್ಕಳು ಉಪವಾಸ ಇರುವುದು ತಪ್ಪಿದೆ. ನಮ್ಮ ವಠಾರದಲ್ಲಿ 100ಕ್ಕೂ ಹೆಚ್ಚು ಗುಡಿಸಲುಗಳಿವೆ. ಅವರಿಗೂ ಆಹಾರ ಸಾಮಗ್ರಿ ವಿತರಿಸಿದ್ದಾರೆ’ ಎಂದು ಕರಿಯಮ್ಮನ ಅಗ್ರಹಾರದ ಮುಮ್ತಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT