ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟುನಿಟ್ಟಿನ ಹೋಮ್‌ ಕ್ವಾರಂಟೈನ್‌: ವಿಶೇಷ ನಿಗಾ

ಎಸ್‌ಒಪಿ ಬಿಡುಗಡೆ ಮಾಡಿದ ಬಿಬಿಎಂಪಿ
Last Updated 7 ಜೂನ್ 2020, 20:05 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಹಬ್ಬುವಿಕೆ ತಡೆಯಲು ಮನೆಯಲ್ಲೇ ಪ್ರತ್ಯೇಕ ವಾಸಕ್ಕೆ (ಹೋಮ್‌ ಕ್ವಾರಂಟೈನ್‌) ಶಿಫಾರಸು ಮಾಡಿದವರ ಮೇಲೆ ನಿಗಾ ಇಡುವ ಸಲುವಾಗಿ ಬಿಬಿಎಂಪಿ 460 ವಿಶೇಷ ತಂಡಗಳನ್ನು ರಚಿಸಿದೆ. ಹೋಮ್‌ ಕ್ವಾರಂಟೈನ್‌ಗೆ ಸಂಬಂಧಿಸಿದಂತೆ ಪಾಲಿಸಬೇಕಾದ ಮಾದರಿ ಕಾರ್ಯವಿಧಾನವನ್ನೂ (ಎಸ್‌ಒಪಿ) ಬಿಬಿಎಂಪಿ ಬಿಡುಗಡೆ ಮಾಡಿದೆ.

ಎಸ್‌ಒಪಿಯ ಕಟ್ಟುನಿಟ್ಟಿನ ಪಾಲನೆ ಬಗ್ಗೆ ನಿಗಾ ಇಡಲು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವೈದ್ಯರು ಹಾಗೂ ಮಾಹಿತಿ ತಂತ್ರಜ್ಞಾನ ತಜ್ಞರು ಸೇರಿದಂತೆ ಏಳು ಮಂದಿಯನ್ನು ಒಳಗೊಂಡ ಹೋಮ್‌ ಕ್ವಾರಂಟೈನ್‌ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ.

ಪ್ರತಿ ಬೂತ್‌ ಮಟ್ಟದಲ್ಲಿ ರಚಿಸಿರುವ ಸಮಿತಿಯಲ್ಲಿ ಬೂತ್‌ ಮಟ್ಟದ ಅಧಿಕಾರಿ (ಬಿಎಲ್‌ಒ) ಹಾಗೂ ಇಬ್ಬರು ಸ್ಥಳೀಯ ಅಧಿಕಾರಿಗಳು (ಬೆಸ್ಕಾಂ, ಜಲಮಂಡಳಿ, ಪೊಲೀಸ್‌, ಗೃಹರಕ್ಷಕದಳದ ಸಿಬ್ಬಂದಿ) ಇರುತ್ತಾರೆ. ಹೋಮ್‌ ಕ್ವಾರಂಟೈನ್‌ಗೆ ಒಳಗಾದವರು ಎಸ್‌ಒಪಿಯಲ್ಲಿರುವ ನಿಯಮಗಳನ್ನು ಪಾಲಿಸುವಂತೆ ಈ ಸಮಿತಿ ನೋಡಿಕೊಳ್ಳಲಿದೆ.

ತಂಡಗಳು ಹೋಮ್‌ಕ್ವಾರಂಟೈನ್‌ಗೆ ಸೂಚಿಸಿರುವವರ ಮನೆಗಳಿಗೆ ಭೇಟಿ ನೀಡಿ ಅವರ ಮನೆಗೆ ಪೋಸ್ಟರ್ ಅಂಟಿಸಲಿದೆ. ನಿಯಮಗಳ ಬಗ್ಗೆ ಪ್ರತ್ಯೇಕ ವಾಸಕ್ಕೆ ಒಳಪಡುವವರಿಗೆ ಹಾಗೂ ಅವರ ಮನೆಯವರಿಗೂ ಮಾಹಿತಿ ನೀಡಲಿದೆ. ಅವರ ಮನೆಯ ಫೋಟೊ ತೆಗೆದು ಕ್ವಾರಂಟೈನ್‌ ವಾಚ್‌ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಲಿದೆ. ಅಕ್ಕಪಕ್ಕದ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡಲಿದೆ. ಹೋಂ ಕ್ವಾರಂಟೈನ್‌ ಅವಧಿಯಲ್ಲಿ ಕನಿಷ್ಠ ಎರಡು ಮೂರು ಬಾರಿಯದರೂ ಈ ತಂಡ ಮನೆಗೆ ಬೇಟಿ ನೀಡಲಿದೆ. ಉಳಿದ ಅವಧಿಯಲ್ಲಿ ಅಕ್ಕಪಕ್ಕದ ನಿವಾಸಿಗಳು ಅಥವಾ ಆರ್‌ಡಬ್ಲ್ಯುಎ ಸದಸ್ಯರು ನಿಗಾ ಇಡಲಿದ್ದಾರೆ.

ಹೋಮ್‌ ಕ್ಯಾರಂಟೈನ್‌ಗೆ ಒಳಗಾಗುವವರ ಮೇಲೆ ನಿಗಾ ಇಡಲು ಆರ್‌ಡಬ್ಲ್ಯುಎಗಳು ಖಾಸಗಿ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಬಹುದು ಅಥವಾ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬಹುದು. ಆದರೆ ಅದರಿಂದ ಅವರ ಖಾಸಗಿತನಕ್ಕೆ ಧಕ್ಕೆ ಉಂಟಾಗಬಾರದು ಎಂದು ಎಸ್‌ಒಪಿಯಲ್ಲಿ ಹೇಳಲಾಗಿದೆ. ವಾರ್ಡ್‌ ಸಮಿತಿಗಳು ಹಾಗೂ ಇತರ ನಾಗರಿಕ ಸಂಘ ಸಂಸ್ಥೆಗಳ ನೆರವನ್ನೂ ಪಡೆಯುವಂತೆ ಸೂಚಿಸಲಾಗಿದೆ.

ಮನೆಯಲ್ಲೇ ಪ್ರತ್ಯೇಕ ವಾಸ ಯಾರಿಗೆ?
* 7 ದಿನ ಸಾಂಸ್ಥಿಕ ಕ್ವಾರಾಂಟೈನ್‌ ಪೂರ್ಣಗೊಳಿಸಿದ ಅಂತರರಾಷ್ಟ್ರೀಯ ಪ್ರಯಾಣಿಕರು
* ಮಹಾರಾಷ್ಟ್ರ ಹೊರತುಪಡಿಸಿ ಇತರ ರಾಜ್ಯಗಳಿಂದ ಬರುವ ರೋಗಲಕ್ಷಣವಿಲ್ಲದ ಪ್ರಯಾಣಿಕರು
* ಮಹಾರಾಷ್ಟ್ರದಿಂದ ಬಂದು 7ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಪೂರ್ಣಗೊಳಿಸಿದವರು
* ಮಹಾರಾಷ್ಟ್ರದಿಂದ ವ್ಯಾಪಾರವಲ್ಲದ ಉದ್ದೇಶಕ್ಕಾಗಿ ಬಂದವರು (ಕೋವಿಡ್‌–19 ಇಲ್ಲ ಎಂದು ದೃಢಪಟ್ಟಿರಬೇಕು)
* ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ಹೊಂದಿರುವ ವಿಶೇಷ ವರ್ಗದ ಪ್ರಯಾಣಿಕರು
* ಕುಟುಂಬದ ಸದಸ್ಯರು ಮೃತಪಟ್ಟಿದ್ದರೆ
* ಗರ್ಭಿಣಿಯರು
* 10 ವರ್ಷ ಮೇಲ್ಪಟ್ಟ ಮಕ್ಕಳು
* 60 ವರ್ಷ ಮೇಲ್ಪಟ್ಟವರು
* ಗಂಭೀರ ಕಾಯಿಲೆ ಹೊಂದಿರುವವರು
* ಯಾತನೆ ಅನುಭವಿಸುತ್ತಿರುವವರು

ಇವರಿಗಿದೆ ಹೋಮ್‌ ಕ್ವಾರಂಟೈನ್‌ನಿಂದ ವಿನಾಯಿತಿ
* ಮಹಾರಾಷ್ಟ್ರದಿಂದ ವ್ಯಾಪಾರದ ಉದ್ದೇಶಕ್ಕೆ ಬರುವವರು ( ಕೋವಿಡ್‌-19 ಇಲ್ಲ ಎಂದುಎರಡು ದಿನಗಳಿಂದ ಈಚೆಗೆ ದೃಢಪಟ್ಟಿರಬೇಕು)
* ಇಲ್ಲಿಗೆ ಬಂದ ಏಳು ದಿನಗಳ ಒಳಗೆ ವಾಪಾಸ್‌ ತೆರಳಲು ಟಿಕೆಟ್‌ ಕಾಯ್ದಿರಿಸಿರುವ ಮಹಾರಾಷ್ಟ್ರ ಹೊರತಾಗಿ ಅನ್ಯರಾಜ್ಯಗಳ ಪ್ರಯಾಣಿಕರು
* ಒಂದು ದಿನದ ಮಟ್ಟಿಗೆ ಬಂದು ಹೋಗುವವರು (ವಿಮಾನದ / ರೈಲಿನ ಟಿಕೆಟ್‌ ಕಾಯ್ದಿರಿಸಿದ ದಾಖಲೆ ಬೇಕು)

ಎಷ್ಟು ದಿನ ಹೋಮ್‌ ಕ್ವಾರಂಟೈನ್‌?
ಪ್ರಯಾಣಿಕರು; ಸಾಂಸ್ಥಿಕ ಕ್ವಾರಂಟೈನ್‌: ಹೋಮ್‌ ಕ್ವಾರಂಟೈನ್‌
ಅಂತರರಾಷ್ಟ್ರೀಯ ಪ್ರಯಾಣಿಕರು: 7 ದಿನ: 7 ದಿನ
ವಿನಾಯಿತಿ ಪಡೆದವರು: –:14 ದಿನ
ಅನ್ಯರಾಜ್ಯದವರು (ಮಹಾರಾಷ್ಟ್ರ ಹೊರತಾಗಿ): –:14ದಿನ
ಮಹಾರಾಷ್ಟ್ರದವರು:7 ದಿನ: 7 ದಿನ
ವಿನಾಯಿತಿ ಪಡೆದ ಮಹಾರಾಷ್ಟ್ರ ನಿವಾಸಿಗಳು:–: 21 ದಿನ

ಹೋಮ್‌ ಕ್ವಾರಂಟೈನ್‌ಗೆ ಏನೇನು ನಿಗಾ?
* ಮನೆಯ ಬಾಗಿಲಿನಲ್ಲಿ ಭಿತ್ತಿಪತ್ರ ಅಂಟಿಸಲಾಗುತ್ತದೆ
* ಇಬ್ಬರು ನೆರೆಹೊರೆಯವರಿಗೆ/ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘದವರಿಗೆ/ ಬಡಾವಣೆ ನಿವಾಸಿಗಳ ಸಂಘದವರಿಗೆ (ಆರ್‌ಡಬ್ಲ್ಯುಎ) ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ
* ನಿಯಮ ಉಲ್ಲಂಘಿಸಿದರೆ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ
* ಗಂಭೀರ ಕಾಯಿಲೆ ಇರುವವರು, 60 ಮೀರಿದವರು ದೇಹದ ಉಷ್ಣಾಂಶ, ಆಕ್ಸಿಮೀಟರ್‌ನಲ್ಲಿ ದಾಖಲಾಗುವ ಬೆರಳ ತುದಿಯ ರಕ್ತದೊತ್ತಡ ಮುಂತಾದ ಮಾಹಿತಿಯನ್ನು ನೀಡಲು ಕ್ವಾರಂಟೈನ್‌ ವಾಚ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಕಡ್ಡಾಯ. ಆರೋಗ್ಯಸೇತು ಹಾಗೂ ಆಪ್ತಮಿತ್ರ ಆ್ಯಪ್‌ ಡೌನ್‌ಲೋಡ್‌ ಮಾಡಿರುವುದು ಕಡ್ಡಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT