ಭಾನುವಾರ, ನವೆಂಬರ್ 17, 2019
21 °C
ಉತ್ತರಾಂಚಲ ರೀತಿ ಕ್ರಮ ಕೈಗೊಳ್ಳಲು ಆಗ್ರಹ: ಎಚ್‌.ಡಿ. ದೇವೇಗೌಡ

ಸಿ.ಎಂ ವಿರುದ್ಧ ಪ‍್ರಕರಣ ದಾಖಲಿಸಲು ಆಗ್ರಹ

Published:
Updated:
Prajavani

ಹಾಸನ: ‘ಉತ್ತರಾಂಚಲದಲ್ಲಿ ಕುದುರೆ ವ್ಯಾಪಾರ ಆರೋಪದಡಿ ಅಲ್ಲಿನ ಮುಖ್ಯಮಂತ್ರಿ ವಿರುದ್ಧವೇ ದೂರು ದಾಖಲಿಸಲಾಗಿದೆ. ಕರ್ನಾಟಕದಲ್ಲಿ ಆಪರೇಷನ್ ಕಮಲ ಆರೋಪದಡಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೂ ಪ್ರಕರಣ ದಾಖಲಿಸಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಆಗ್ರಹಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಉತ್ತರಾಂಚಲದ ಮಾನದಂಡವನ್ನು ಕರ್ನಾಟಕದಲ್ಲೂ ಅಳವಡಿಸಬೇಕಲ್ಲವೇ? ಶಾಸಕರ ಕುದುರೆ ವ್ಯಾಪಾರ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರವು ಇಬ್ಬಗೆಯ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.

ಅನರ್ಹ ಶಾಸಕರ ಕುರಿತು ಯಡಿಯೂರಪ್ಪ ಮಾತನಾಡಿರುವ ಆಡಿಯೊ ಕುರಿತು, ‘ಈ ಸಂಬಂಧ ಕಾಂಗ್ರೆಸ್‌ನವರು ರಾಜ್ಯಪಾಲರಿಗೆ ಈಗಾಗಲೇ ದೂರು ನೀಡಿದ್ದಾರೆ. ರಾಷ್ಟ್ರಪತಿಗೂ ದೂರು ನೀಡುವುದಾಗಿ ಹೇಳುತ್ತಿದ್ದಾರೆ. ಆಡಿಯೊ ವಿಚಾರ ಈಗಾಗಲೇ ಪ್ರಧಾನಿ ಹಾಗೂ ರಾಷ್ಟ್ರಪತಿಗೂ ಗೊತ್ತಿದೆ. ಆದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಒಂದೇ ಮಾನದಂಡ ಅನುಸರಿಸಬೇಕು. ಆದರೆ, ಇಲ್ಲಿ ಏನು ಮಾಡುತ್ತಾರೆ ಕಾದು ನೋಡಬೇಕಿದೆ’ ಎಂದರು.

‘ಅನರ್ಹ ಶಾಸಕರ ಹೇಳಿಕೆ ಕುರಿತು ತನಿಖೆ ನಡೆಯಲಿ’
ಬೆಳಗಾವಿ: ‘ನಾವು ರಾಜೀನಾಮೆ ನೀಡಲು ಸಿದ್ದರಾಮಯ್ಯ ಕಾರಣ, ಅವರೇ ನಮ್ಮನ್ನು ಕಳುಹಿಸಿದರು' ಎಂದು ಅನರ್ಹ ಶಾಸಕರು ಹೇಳಿದ್ದಾರೆ. ಈ ಹೇಳಿಕೆ ಕುರಿತು ತನಿಖೆ ನಡೆಯಬೇಕು’ ಎಂದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

‘ಶಾಸಕರಿಗೆ ಆಮಿಷ ಒಡ್ಡಿ ಮೈತ್ರಿ ಸರ್ಕಾರ ಕೆಡವಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬಿಜೆಪಿ ಸರ್ಕಾರ ವಜಾಗೊಳಿಸಬೇಕು’ ಎಂದು ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವ ಕುರಿತು ಭಾನುವಾರ ಇಲ್ಲಿ ಪ್ರತಿಕ್ರಿಯೆ ನೀಡಿದರು.

‘ಕಾಂಗ್ರೆಸ್‌ನವರು ಅಧಿಕಾರ ಕಳೆದುಕೊಂಡು ಹತಾಶರಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಸಮ್ಮಿಶ್ರ ಸರ್ಕಾರದ ಆಂತರಿಕ ಕಚ್ಚಾಟದಿಂದಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು‌ ರಾಜೀನಾಮೆ ನೀಡಿದ್ದಾರೆ. ಇದನ್ನು ಬಿಟ್ಟು ಬಿಜೆಪಿಯವರನ್ನು ಗುರಿಯಾಗಿಸಿ ಕಾಂಗ್ರೆಸ್‌ನವರು ರಾಜ್ಯಪಾಲರಿಗೆ ಮನವಿ ಕೊಟ್ಟಿರುವುದು ರಾಜಕೀಯ ಪ್ರೇರಿತವಾದುದಾಗಿದೆ. ಇಂಥ ಸರ್ಕಸ್‌ಗಳನ್ನು ಕಾಂಗ್ರೆಸ್‌ನವರು ನಿಲ್ಲಿಸಬೇಕು’ ಎಂದರು.

ಪ್ರತಿಕ್ರಿಯಿಸಿ (+)