ಸೋಮವಾರ, ನವೆಂಬರ್ 18, 2019
22 °C

ಸಮನ್ಸ್ ರದ್ದು ಕೋರಿ ಹೈಕೋರ್ಟ್‌ಗೆ ಎಚ್‌ಡಿಕೆ ಅರ್ಜಿ

Published:
Updated:

ಬೆಂಗಳೂರು: ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿಯ 3 ಎಕರೆ 34 ಗುಂಟೆ ಜಮೀನು ಅಕ್ರಮ ಡಿನೋಟಿಫಿಕೇಷನ್ ಪ್ರಕರಣದ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಕೋರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠದ ಮುಂದೆ ಸೆ.23ರಂದು ವಿಚಾರಣೆಗೆ ನಿಗದಿಯಾಗಿದೆ.

ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ರದ್ದುಪಡಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಅ.4ರಂದು ವಿಚಾರಣೆಗೆ ಹಾಜರಾಗುವಂತೆ ಕುಮಾರಸ್ವಾಮಿ ಅವರಿಗೆ ಸಮನ್ಸ್ ನೀಡಿತ್ತು.

ಪ್ರಕರಣ ಏನು?: ಹಲಗೆವಡೇರಹಳ್ಳಿಯಲ್ಲಿ ಬಿಡಿಎ ಬಡಾವಣೆಗಾಗಿ ವಶಪಡಿಸಿಕೊಂಡಿದ್ದ 3 ಎಕರೆ 34 ಗುಂಟೆ ಜಮೀನನ್ನು 2007ರಲ್ಲಿ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಆರ್‌ಟಿಐ ಕಾರ್ಯಕರ್ತ ಎಂ.ಎಸ್. ಮಹಾದೇವಸ್ವಾಮಿ ಲೋಕಾಯುಕ್ತಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು. 7 ವರ್ಷಗಳ ಕಾಲ ತನಿಖೆ ನಡೆಸಿದ ಪೊಲೀಸರು, 2019ರ ಜನವರಿಯಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಆಕ್ಷೇಪಿಸಿ ದೂರುದಾರ ಮಹಾದೇವಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಬಿ ರಿಪೋರ್ಟ್ ರದ್ದುಪಡಿಸಿತ್ತು. ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾಗುವಂತೆ ಕುಮಾರಸ್ವಾಮಿ ಸೇರಿ 19 ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದೆ.

ಪ್ರತಿಕ್ರಿಯಿಸಿ (+)