ಗುರುವಾರ , ಜೂನ್ 30, 2022
25 °C
ಅತಿ ದಟ್ಟಣೆ 12 ಕಾರಿಡಾರ್‌ಗಳ ಅಭಿವೃದ್ಧಿ, ನಿರ್ವಹಣೆ ಯೋಜನೆ

ತಾಂತ್ರಿಕ ಅರ್ಹತೆ ಪಡೆಯದ ಗುತ್ತಿಗೆದಾರನಿಗೆ ಕಾಮಗಾರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್‌) ಮೂಲಕ ಅನುಷ್ಠಾನಗೊಳಿಸಲಿರುವ ನಗರದ 12 ಅತಿ ದಟ್ಟಣೆ ಕಾರಿಡಾರ್‌ಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯ ಇನ್ನೊಂದು ಭ್ರಷ್ಟಾಚಾರ ಬಯಲಿಗೆ ಬಂದಿದೆ.

ಟೆಂಡರ್‌ ಪ್ರಕಿಯೆಯ ತಾಂತ್ರಿಕ ಪರಿಶೀಲನೆ ಹಂತದಲ್ಲೇ ಅನರ್ಹಗೊಂಡ ಗುತ್ತಿಗೆದಾರನಿಗೇ ಕಾಮಗಾರಿ ನೀಡಲು ಶಿಫಾರಸು ಮಾಡುವ ಮೂಲಕ ನಿಗಮವು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. 

ಟೆಂಡರ್‌ ನಿಯಮಗಳ ಪ್ರಕಾರ ಯಾವುದೇ ಗುತ್ತಿಗೆದಾರ ತಾಂತ್ರಿಕ ಪರಿಶೀಲನೆಯಲ್ಲಿ ಅನರ್ಹಗೊಂಡರೆ ಅವರ ಬಿಡ್‌ ಅನ್ನು ಹಣಕಾಸು ಪರಿಶೀಲನೆಗೆ ಪರಿಗಣಿಸುವುದೇ ಇಲ್ಲ. ಆದರೂ ಈ ಯೋಜನೆಯ ಪ್ಯಾಕೇಜ್‌ –3ರಲ್ಲಿ ಗುತ್ತಿಗೆದಾರ ಉದಯ್‌ ಶಿವಕುಮಾರ್ ಅವರ ಇನ್‌ಫ್ರಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ತಾಂತ್ರಿಕ ಅರ್ಹತೆ ಪಡೆಯದಿದ್ದರೂ ಅವರ ಹಣಕಾಸು ಬಿಡ್‌ ತೆರೆಯಲಾಗಿದೆ. ಅಷ್ಟೇ ಅಲ್ಲ, ಅಂತಿಮವಾಗಿ ಈ ಸಂಸ್ಥೆಗೇ ಕಾಮಗಾರಿಯ ಗುತ್ತಿಗೆ ವಹಿಸಲು ನಿಗಮವು ಶಿಫಾರಸು ಮಾಡಿದೆ.

ಈ ಯೋಜನೆಯ ಪ್ಯಾಕೇಜ್‌– 3ರಲ್ಲಿ ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕ‍ಪುರ ರಸ್ತೆ ಹಾಗೂ ಸಿಲ್ಕ್‌ಬೋರ್ಡ್‌ನಿಂದ ಮೈಸೂರು ರಸ್ತೆವರೆಗಿನ ಹೊರವರ್ತುಲ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕಾಮಗಾರಿಗಳು ಸೇರಿದ್ದವು. ಒಟ್ಟು 49.45 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿಗೆ ₹ 39.35 ಕೋಟಿ ಮತ್ತು ಐದು ವರ್ಷಗಳ ವಾರ್ಷಿಕ ನಿರ್ವಹಣೆಗೆ ₹ 120.34 ಕೋಟಿ ಅಂದಾಜು ವೆಚ್ಚ ಸೇರಿದಂತೆ ಒಟ್ಟು ₹ 159.69 ಕೋಟಿಯ ಕಾಮಗಾರಿಗೆ 2021ರ ಜ.6ರಂದು ಟೆಂಡರ್‌ ಕರೆಯಲಾಗಿತ್ತು. ಆರ್‌ಎಂಎನ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌, ಉದಯ್‌ ಶಿವಕುಮಾರ್‌ ಅವರ ಇನ್‌ಫ್ರಾ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಶ್ರೀನಿವಾಸ ಕನ್‌ಸ್ಟ್ರಕ್ಷನ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗಳು ಟೆಂಡರ್‌ಗೆ ಅರ್ಜಿ ಸಲ್ಲಿಸಿದ್ದವು. ಈ ಗುತ್ತಿಗೆ ಸಂಸ್ಥೆಗಳ ತಾಂತ್ರಿಕ ಅರ್ಹತೆಯ ಪರಿಶೀಲನೆಗಾಗಿ ಏ. 21ರಂದು ತಾಂತ್ರಿಕ ಪರಿಶೀಲನಾ ಸಮಿತಿ ಸಭೆ ನಡೆದಿತ್ತು.

ಟೆಂಡರ್‌ ಷರತ್ತುಗಳ ಪ್ರಕಾರ, ಪ್ಯಾಕೇಜ್‌– 3ರ ಟೆಂಡರ್‌ ಗುತ್ತಿಗೆ ಪಡೆಯಲು ಗುತ್ತಿಗೆ ಸಂಸ್ಥೆಯು ನಗರದಲ್ಲಿ 25 ಕಿ.ಮೀ ಉದ್ದದ ರಸ್ತೆ/ಹೆದ್ದಾರಿಯನ್ನು ಕನಿಷ್ಠ ಪಕ್ಷ 1 ವರ್ಷ ನಿರ್ವಹಣೆ ಮಾಡಿದ ಅನುಭವ ಹೊಂದಿರಬೇಕು. ಆದರೆ, ಉದಯ್‌ ಶಿವಕುಮಾರ್‌ ಇನ್‌ಫ್ರಾ ಪ್ರೈವೇಟ್‌ ಸಂಸ್ಥೆಯು ಈ ಕುರಿತ ದಾಖಲೆಗಳನ್ನು ಇ–ಪೊರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಿರಲಿಲ್ಲ. ಈ ಕಾರಣಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್‌ ಕುಮಾರ್‌ ಅಧ್ಯಕ್ಷತೆಯ ಟೆಂಡರ್‌ ಪರಿಶೀಲನಾ ಸಮಿತಿಯು ಈ ಸಂಸ್ಥೆಯನ್ನು ತಾಂತ್ರಿಕವಾಗಿ ಅನರ್ಹಗೊಳಿಸಿತ್ತು.

ಈ ಬಗ್ಗೆ ಪ್ರತಿಕ್ರಿಯೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಲಭ್ಯರಾಗಲಿಲ್ಲ.

ಟೆಂಡರ್‌ ಷರತ್ತುಗಳು

* ಈ ಕಾಮಗಾರಿ ಅನುಷ್ಠಾನಕ್ಕೆ ತಾಂತ್ರಿಕ ಅರ್ಹತೆ ಪಡೆಯಲು ಗುತ್ತಿಗೆದಾರ ಕಳೆದ ಐದು ವರ್ಷಗಳಲ್ಲಿ ಯಾವುದಾದರೂ ಎರಡು ವರ್ಷಗಳಲ್ಲಿ ಕಾಮಗಾರಿಯ ಒಟ್ಟು ವೆಚ್ಚಕ್ಕಿಂತ ದುಪ್ಪಟ್ಟು ವಾರ್ಷಿಕ ವಹಿವಾಟು  ಹೊಂದಿರಬೇಕು.

* ಇದೇ ಮಾದರಿಯ ಯಾವುದಾದರೂ ಒಂದು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮುಖ್ಯ ಗುತ್ತಿಗೆದಾರರಾಗಿ ಪೂರ್ಣಗೊಳಿಸಿರಬೇಕು. ಅದರ ಅಭಿವೃದ್ಧಿ ವೆಚ್ಚ ಹಾಗೂ ವಾರ್ಷಿಕ ನಿರ್ವಹಣೆಯ ವೆಚ್ಚವು ಕಾಮಗಾರಿ ವೆಚ್ಚದ ಶೇ 50ರಷ್ಟಾದರೂ ಇರಬೇಕು.

* ಐದು ವರ್ಷಗಳಲ್ಲಿ ಯಾವುದಾದರೂ ಒಂದು ವರ್ಷ ಡಾಂಬರೀಕರಣ ಕಾಮಗಾರಿ ನಡೆಸಿರಬೇಕು ಹಾಗೂ ಸೈನ್‌ ಬೋರ್ಡ್‌ ಅಳವಡಿಕೆ, ಸಂಚಾರ ನಿರ್ವಹಣೆ ಪರಿಕರಗಳ ಅಳವಡಿಕೆ ಮಾಡಿದ ಅನುಭವ ಇರಬೇಕು.

* ಯಾವುದಾದರೂ ಒಂದು ವರ್ಷ ಈ ಕಾಮಗಾರಿಯ ಪ್ಯಾಕೇಜ್‌ಗೆ ಗೊತ್ತುಪಡಿಸಿದ ರಸ್ತೆಯ ಒಟ್ಟು ಉದ್ದದ ಶೇ 50ರಷ್ಟು ಉದ್ದದ ರಸ್ತೆಯನ್ನು ನಿರ್ವಹಣೆ ಮಾಡಿದ ಅನುಭವ ಇರಬೇಕು.

* ಗುತ್ತಿಗೆದಾರ ಅಥವಾ ಉಪಗುತ್ತಿಗೆದಾರರು ಕನಿಷ್ಠ ಕಟ್ಟಡ/ ರಸ್ತೆಗಳ ವಿದ್ಯುದೀಕರಣ ನಡೆಸುವ ₹ 5 ಕೋಟಿ ವೆಚ್ಚದ ಕಾಮಗಾರಿ ನಿರ್ವಹಣೆಗೆ ಅಗತ್ಯವಿರುವ ಪರವಾನಗಿ ಹೊಂದಿರಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು