ಶುಕ್ರವಾರ, ಜೂನ್ 18, 2021
21 °C

ಅನುದಾನ ಮೊತ್ತದಲ್ಲಿ ತಾರತಮ್ಯ: ಮುಖ್ಯಮಂತ್ರಿಗೆ ಎಚ್.ಡಿ. ದೇವೇಗೌಡ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ’ಬಿಬಿಎಂಪಿ ವ್ಯಾಪ್ತಿಯ ದಾಸರಹಳ್ಳಿ ಕ್ಷೇತ್ರದ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ವಿವಿಧ ದುರಸ್ತಿ ಕಾರ್ಯಕ್ಕೆ ಸರ್ಕಾರ ಅನುಮೋದನೆ ನೀಡಿರುವ ಅನುದಾನದ ಮೊತ್ತದಲ್ಲಿ ತಾರತಮ್ಯ ಎಸಗಲಾಗಿದೆ. ಕ್ಷೇತ್ರಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕು‘ ಎಂದು ಒತ್ತಾಯಿಸಿ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

’ಬಿಬಿಎಂಪಿಗೆ ಹೊಸದಾಗಿ ಸೇರಿರುವ 110 ಹಳ್ಳಿಗಳ ಪೈಕಿ ದಾಸರಹಳ್ಳಿ ಕ್ಷೇತ್ರದ ಐದು ಹಳ್ಳಿಗಳಲ್ಲಿ ಜಲಮಂಡಳಿಯು ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳನ್ನು ನಿರ್ವಹಿಸುತ್ತಿದೆ. ಈ ಕಾಮಗಾರಿಗಾಗಿ ಬಿಬಿಎಂಪಿ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ₹405.96 ಕೋಟಿ ಮೊತ್ತದ ಅಂದಾಜು ವೆಚ್ಚದ ಪ್ರಸ್ತಾವ ಸಲ್ಲಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆಯು ₹327 ಕೋಟಿ ಮೊತ್ತದ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ‘ ಎಂದು ಅವರು ತಿಳಿಸಿದ್ದಾರೆ.

’ಈ ಪೈಕಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ₹110 ಕೋಟಿ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವ ಸಲ್ಲಿಸಿದ್ದರೂ ಸರ್ಕಾರದಿಂದ ₹190 ಕೋಟಿ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಯಲಹಂಕ ಮತ್ತು ಬ್ಯಾಟರಾಯನಪುರ ಕ್ಷೇತ್ರಕ್ಕೆ ₹156 ಕೋಟಿ ಬಿಡುಗಡೆ ಮಾಡಬೇಕು ಎಂದು ಪ್ರಸ್ತಾವದಲ್ಲಿ ಹೇಳಿದ್ದರೂ ₹185 ಕೋಟಿಗೆ ಅನುಮೋದನೆ ನೀಡಲಾಗಿದೆ. ಆದರೆ, ದಾಸರಹಳ್ಳಿ ಕ್ಷೇತ್ರಕ್ಕೆ ₹107.55 ಕೋಟಿ ನೀಡುವುದಾಗಿ ನೀವೇ (ಬಿ.ಎಸ್. ಯಡಿಯೂರಪ್ಪ) ಲಿಖಿತ ಉತ್ತರ ನೀಡಿದ್ದರೂ, ₹25 ಕೋಟಿಗಳ ಅನುದಾನಕ್ಕೆ ಮಾತ್ರ ಕ್ರಿಯಾಯೋಜನೆ ಸಲ್ಲಿಸಲು ಆದೇಶಿಸಲಾಗಿದೆ. ಈ ತಾರತಮ್ಯ ಹೋಗಲಾಡಿಸಿ, ಪ್ರಸ್ತಾವ ಸಲ್ಲಿಸಿದ್ದ ಮೊತ್ತದಷ್ಟು ಅನುದಾನ ನೀಡಬೇಕು‘ ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ದಾಸರಹಳ್ಳಿ ಕ್ಷೇತ್ರದ ಜೆಡಿಎಸ್‌ ಶಾಸಕ ಆರ್. ಮಂಜುನಾಥ್ ಕೂಡ ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು