ಶನಿವಾರ, ಜನವರಿ 18, 2020
19 °C

ಸ್ವಚ್ಛತೆಯ ಗೀಳು: ನಿತ್ಯ 8 ತಾಸು ಸ್ನಾನ, ಮೂರು ಸಾಬೂನು ಖಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ವಚ್ಛತೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುತ್ತಿದ್ದ ಯುವಕನೋರ್ವ ದಿನಕ್ಕೆ 8 ತಾಸು ಸ್ನಾನ ಮಾಡಿ, ಮೂರು ಸಾಬೂನುಗಳನ್ನು ಖಾಲಿ ಮಾಡುತ್ತಿದ್ದ. ಇದರಿಂದಾಗಿ ಆತನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಮಸ್ಯೆಯನ್ನು ಪತ್ತೆ ಮಾಡಿ ಚಿಕಿತ್ಸೆ ಕೊಡಿಸುವಲ್ಲಿ ನಗರದ ವೈದ್ಯರು ಯಶಸ್ವಿಯಾಗಿದ್ದಾರೆ. 

ಎಷ್ಟು ಉಜ್ಜಿದರೂ ದೇಹ ಸರಿಯಾಗಿ ಸ್ವಚ್ಛವಾಗುತ್ತಿಲ್ಲ ಎಂದು ಭಾವಿಸುವ ಯುವಕ, ಮತ್ತೆ ಮತ್ತೆ ಸ್ನಾನ ಮಾಡುತ್ತಿದ್ದ. ದಿನಕ್ಕೆ ಎರಡರಿಂದ ಮೂರು ಬಾರಿಯಾದರೂ ಸ್ನಾನ ಮಾಡುತ್ತಿರುವುದು ಕುಟುಂಬದ ಸದಸ್ಯರಿಗೆ ಆತಂಕ ಉಂಟುಮಾಡಿತ್ತು. ಇದರಿಂದಾಗಿ ಯುವಕನನ್ನು ಯಲಹಂಕದ ಪೀಪಲ್ ಟ್ರೀ ಮಾರ್ಗ ಆಸ್ಪತ್ರೆಗೆ ಕರೆದೊಯ್ದ ಕುಟುಂಬದ ಸದಸ್ಯರು, ಈ ಬಗ್ಗೆ ವೈದ್ಯರಿಗೆ ತಿಳಿಸಿದರು. ಡಾ.ಸತೀಶ್ ರಾಮಯ್ಯ ನೇತೃತ್ವದ ವೈದ್ಯರ ತಂಡ ಯುವಕ ಸ್ವಚ್ಛತೆಯ ಗೀಳಿನಿಂದ ಮುಕ್ತವಾಗುವುದಕ್ಕೆ ನೆರವಾಗಿದೆ.

ಇದೇ ರೀತಿ, ನಗರದ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಯುವತಿಯೊಬ್ಬರು ಇ–ಮೇಲ್ ಗೀಳು ಹೊಂದಿರುವುದನ್ನು ವೈದ್ಯರು ಪತ್ತೆಮಾಡಿದ್ದಾರೆ. ತಪ್ಪಾದ ಇ-ಮೇಲ್ ಕಳುಹಿಸಿರುವೆ ಎಂದು ಭಾವಿಸುತ್ತಿದ್ದ ಆಕೆ ಪದೇ ಪದೇ ಲ್ಯಾಪ್‍ಟ್ಯಾಪ್ ತೆಗೆದು ನೋಡುತ್ತಿದ್ದಳು. ಈ ಗೀಳನ್ನು ಗುರುತಿಸಿ, ಚಿಕಿತ್ಸೆ ನೀಡಲಾಗಿದೆ.

ಯುವಕರಲ್ಲೇ ಅಧಿಕ: ‘ಗೀಳು ರೋಗವನ್ನು ನಿರ್ಲಕ್ಷ್ಯ ಮಾಡಬಾರದು. ಚಿಕಿತ್ಸೆ ಸಿಗದಿದ್ದರೆ ರೋಗಿಯ ಸ್ಥಿತಿ ಗಂಭೀರ ವಾಗುತ್ತದೆ. ಇದು ಯಾರಿಗೆ ಬೇಕಾದರೂ ಬರಬಹುದು. 20ರಿಂದ  30 ವರ್ಷದೊಳಗಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ರೋಗಿ ಗಂಭೀರ ಸ್ಥಿತಿ ತಲುಪುವ ಮೊದಲೇ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ’ ಎಂದು  ಡಾ.ಸತೀಶ್ ರಾಮಯ್ಯ ತಿಳಿಸಿದರು. 

‘ರೋಗಿಗಳು ತಮಗೆ ಅರಿವು ಇದ್ದರೂ ವಿಚಿತ್ರವಾದ ಗೀಳನ್ನು ಬೆಳೆಸಿಕೊಂಡಿರುತ್ತಾರೆ. ಗೀಳು ರೋಗದ ಬಗ್ಗೆ ಗೊತ್ತಾದರೂ ಚಿಕಿತ್ಸೆ ಪಡೆಯಲು ಕೆಲವರು ಹಿಂಜರಿಯುತ್ತಾರೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯ ಇದೆ’ ಎಂದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು