ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ನಡುವೆ ಇಂಡೋ–ಪಾಕ್ ಕಂದಕ: ಸಚಿವ ಶ್ರೀರಾಮುಲು ಬೇಸರ

‘ಕಾಯಕಲ್ಪ’ ಪ್ರಶಸ್ತಿ ಪ್ರದಾನ
Last Updated 6 ನವೆಂಬರ್ 2019, 21:20 IST
ಅಕ್ಷರ ಗಾತ್ರ

ಬೆಂಗಳೂರು: ‘ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರ ನಡುವೆ ವೇತನ ತಾರತಮ್ಯ ಇದೆ. ಇದರಿಂದಾಗಿಯೇವೈದ್ಯರು ಹಾಗೂ ಸಿಬ್ಬಂದಿಯಲ್ಲಿ ಭಾರತ–ಪಾಕಿಸ್ತಾನದ ಹಾಗೆ ಕಂದಕ ಸೃಷ್ಟಿಯಾಗುತ್ತಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಬೇಸರ ವ್ಯಕ್ತಪಡಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಗರದಲ್ಲಿ ಬುಧವಾರ ಹಮ್ಮಿಕೊಂಡ ಸಮಾರಂಭದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ‘ಕಾಯಕಲ್ಪ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ವೈದ್ಯಕೀಯ ಕಾಲೇಜುಗಳಲ್ಲಿಕಾರ್ಯನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗೆ ಉತ್ತಮ ವೇತನ ದೊರೆಯುತ್ತಿದೆ. ಆದರೆ, ಆರೋಗ್ಯ ಇಲಾಖೆಯಡಿ ಸೇವೆ ಸಲ್ಲಿಸುತ್ತಿರುವ ಆಸ್ಪತ್ರೆಗಳಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗೆ ಅಲ್ಲಿ ನೀಡುವಷ್ಟು ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಈ ತಾರತಮ್ಯ ಸಮನ್ವಯಕ್ಕೆ ತೊಡಕಾಗಿದೆ. ಈ ಅಸಮಾಧಾನವನ್ನು ಸಚಿವರು ಹಾಗೂ ಅಧಿಕಾರಿಗಳ ಮೇಲೆ ತೋರಿದಲ್ಲಿ ಅಮಾನತು ಮಾಡುತ್ತಾರೆ ಎಂಬ ಭಯ ವೈದ್ಯರಲ್ಲಿದೆ. ಹಾಗಾಗಿ, ಕೆಲವು ವೇಳೆ ರೋಗಿಗಳ ಮೇಲೆ ಸಿಟ್ಟು ಹೊರಹಾಕುತ್ತಾರೆ. ಮುಂದಿನ ದಿನಗಳಲ್ಲಿ ವೇತನ ತಾರತಮ್ಯ, ತಜ್ಞ ವೈದ್ಯರ ಕೊರತೆ ನೀಗಿಸಲಾಗುವುದು’ ಎಂದರು.

ಎಂಜಿನಿಯರ್ ನೇಮಕ: ‘ಸರ್ಕಾರಿ ಆಸ್ಪತ್ರೆಗಳ ಮೇಲ್ವಿಚಾರಣೆ ಹಾಗೂ ವಿವಿಧ ವಿಭಾಗಗಳನ್ನು ನೋಡಿಕೊಳ್ಳಲು
ಎಂಜಿನಿಯರ್‌ಗಳನ್ನು ನೇಮಿಸಲಾಗುತ್ತದೆ. ಸ್ವಚ್ಛತೆ ವಿಚಾರವಾಗಿ ದೂರುಗಳು ಬರುತ್ತಿದ್ದು, ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಗುತ್ತಿಗೆ ಪದ್ಧತಿಯ ಬದಲಾಗಿ ಕಾರ್ಪೋರೇಟ್ ಟೆಂಡರ್‌ ಪದ್ಧತಿಯನ್ನು ತರಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ₹ 2,500 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಈವರೆಗೆ ಶೇ 30ರಷ್ಟು ಅನುದಾನ ಮಾತ್ರ ಖರ್ಚಾಗಿದೆ. ಕಳೆದ ವರ್ಷಶೇ 85 ರಷ್ಟು ಖರ್ಚುಮಾಡಲಾಗಿತ್ತು. ಈ ವರ್ಷ ಶೇ 99ರಷ್ಟು ಖರ್ಚು ಮಾಡಿ, ಗುಣಮಟ್ಟದ ಆರೋಗ್ಯ ಸೇವೆ ಹಾಗೂ ವ್ಯವಸ್ಥೆ ಸುಧಾರಣೆಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಆಸ್ಪತ್ರೆಗಳಿಗೆ ಪ್ರಶಸ್ತಿ ಪ್ರದಾನ
‘ಕಾಯಕಲ್ಪ’ ಪ್ರಶಸ್ತಿಗೆ ಆಯ್ಕೆಯಾಗಿರುವ 27 ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಥಮ ಸ್ಥಾನವನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆ ಪಡೆದಿದ್ದು, ₹ 50 ಲಕ್ಷ ನಗದು ಬಹುಮಾನಕ್ಕೆ ಭಾಜನವಾಯಿತು. ರಾಜೀವ್‌ ಗಾಂಧಿ ಎದೆ ರೋಗಗಳ ಸಂಸ್ಥೆದ್ವಿತೀಯ ಸ್ಥಾನ ಪಡೆಯುವ ಮೂಲಕ ₹ 20 ಲಕ್ಷ ನಗದು ಬಹುಮಾನ ಪಡೆಯಿತು. ತಾಲ್ಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ವಿಭಾಗದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆರೋಗ್ಯ ಕೇಂದ್ರ ₹ 15 ಲಕ್ಷ ಬಹುಮಾನ, ಕೋಲಾರ ಜಿಲ್ಲೆಯ ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರವು ₹ 10 ಲಕ್ಷ ಬಹುಮಾನ ಪಡೆದುಕೊಂಡಿತು.

30 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಶಸ್ತಿ ಬಂದಿದ್ದು, ತಲಾ ₹ 2 ಲಕ್ಷ ಬಹುಮಾನ ಪಡೆದುಕೊಂಡಿವೆ. ಸ್ವಚ್ಛ ಸ್ವಸ್ಥ ಸರ್ವತ್ರ ಕಾರ್ಯಕ್ರಮದಡಿ ಆಯ್ಕೆಯಾದ 44 ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಲಾ ₹ 10 ಲಕ್ಷ ನಗದು ಬಹುಮಾನ ನೀಡಲಾಯಿತು.

*
ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ಮಾಡಕೂಡದು. ವೈದ್ಯರು ಒತ್ತಡ ನಡುವೆ ಸೇವೆ ಸಲ್ಲಿಸುತ್ತಿರುತ್ತಾರೆ. ವೈದ್ಯಕೀಯ ಸೇವೆಯಲ್ಲಿ ಸಮಸ್ಯೆ ಇದ್ದಲ್ಲಿ ನಮ್ಮ ಜತೆಗೆ ಮಾತನಾಡಿ.
-ಬಿ. ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT