ಸೋಮವಾರ, ಅಕ್ಟೋಬರ್ 26, 2020
25 °C
ಅಧಿಕಾರಿಗಳ ನಡೆ ಖಂಡಿಸಿದ ಮುಷ್ಕರ ನಿರತ ನೌಕರರು

ಆರೋಗ್ಯ ಸಿಬ್ಬಂದಿ ಮುಷ್ಕರ ಕಾನೂನು ಕ್ರಮದ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ಕೈಗೊಂಡಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ನಿರ್ದೇಶ ಕರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ 30 ಸಾವಿರಕ್ಕೂ ಅಧಿಕ ನೌಕರರು ನಡೆಸುತ್ತಿರುವ ಮುಷ್ಕರ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಅವರು ಸೇವೆಗೆ ಗೈರಾದ ಪರಿಣಾಮ ವಿವಿಧ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗುತ್ತಿದ್ದು, ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿಲ್ಲ.

ಕೋವಿಡ್ ವ್ಯಾಪಿಸುತ್ತಿರುವ ಹೊತ್ತಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಸೇರಿದಂತೆ ಎಲ್ಲ ಆರೋಗ್ಯ ಸಿಬ್ಬಂದಿ ನಿರಂತರವಾಗಿ ಕೆಲಸ ಮಾಡಬೇಕಾಗಿದೆ. ಆರೋಗ್ಯ ಸೇವೆ ಒದಗಿಸುವಲ್ಲಿ ಅಸಹಕಾರ, ವರದಿ ಸಲ್ಲಿಸದಿರುವುದು ಸರಿಯಲ್ಲ ಎಂದು ಎನ್‌ಎಚ್‌ಎಂ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಸದರಿ ಸಿಬ್ಬಂದಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದೊಂದಿಗೆ ಒಡಂಬಡಿಕೆ ಮಾಡಿಕೊಂಡು, ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಅಸಹಕಾರ ತೋರುವ ನೌಕರರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ನಿರ್ದೇಶಕರ ಈ ನಡೆಗೆ ಆರೋಗ್ಯ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಮುಷ್ಕರವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ನೌಕರರ ಮೇಲೆ ಗದಾಪ್ರಹಾರ: ‘ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಯಾವುದೇ ಬೇಡಿಕೆ ಈಡೇರರುವುದರಿಂದ ಮುಷ್ಕರ ಪ್ರಾರಂಭಿಸಿದ್ದೇವೆ. ಅಧಿಕಾರಿಗಳು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು ಗದಾಪ್ರಹಾರ ಮಾಡಲು ಮುಂದಾಗಿರುವುದು ಖಂಡನೀಯ. ಬೇಡಿಕೆಗಳು ಈಡೇರುವವರೆಗೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ’ ಎಂದು ಆರೋಗ್ಯ ಇಲಾಖೆ  ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಯಮೋಜಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.