ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆಗಳ ಸಮಾವೇಶಕ್ಕೆ ಇಂದು ಮೋದಿ

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ದಾವಣಗೆರೆ: ‘ಸಮಾವೇಶಗಳ ನಗರ’ ದಾವಣಗೆರೆಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಇದೇ ದಿನ ನಗರ ದೇವತೆ ದುಗ್ಗಮ್ಮ ದೇವಿ ಜಾತ್ರೆಯೂ ನಡೆಯುತ್ತಿರುವುದರಿಂದ ನಗರದಲ್ಲಿ ಹಬ್ಬದ ರಂಗು ದುಪ್ಪಟ್ಟಾಗಿದೆ. ಬಿ.ಎಸ್‌.ಯಡಿಯೂರಪ್ಪ ಅವರ 75ನೇ ಜನ್ಮದಿನವೂ ಇದೇ ದಿನ ಜೋಡಣೆಯಾಗಿರುವುದರಿಂದ ಬಿಜೆಪಿ ಪಾಲಿಗೆ ಹಲವು ನಿರೀಕ್ಷೆಗಳ ಸಮಾವೇಶವಾಗಿ ಮಾರ್ಪಟ್ಟಿದೆ.

ಸಮಾವೇಶ ನಡೆಯಲಿರುವ ನಗರದ ಹೈಸ್ಕೂಲ್‌ ಮೈದಾನದಲ್ಲಿ ಸಕಲ ವ್ಯವಸ್ಥೆ ಆಗಿದೆ. ನಗರದ ಪ್ರಮುಖ ವೃತ್ತಗಳೆಲ್ಲವೂ ಕೇಸರಿ ಬಾವುಟಗಳಿಂದ ರಾರಾಜಿಸುತ್ತಿವೆ. ಫ್ಲೆಕ್ಸ್‌, ಬ್ಯಾನರ್‌ಗಳಿಗೆ ಲೆಕ್ಕವೇ ಇಲ್ಲ. ಪೊಲೀಸ್‌ ಭದ್ರತೆ ಹೆಚ್ಚಿದೆ. ಜನರಿಗೆ ಕುಡಿಯುವ ನೀರು, ಉಪಾಹಾರ ವಿತರಿಸಲು ಬಿಜೆಪಿಯ ನೂರಾರು ಸ್ವಯಂ ಸೇವಕರು ಸಜ್ಜಾಗಿದ್ದಾರೆ.

ಬಿಎಸ್‌ವೈಗೆ ಮರದ ನೇಗಿಲು ಉಡುಗೊರೆ: ಯಡಿಯೂರಪ್ಪ ಅವರ ಜನ್ಮದಿನದ ನೆನಪಿಗಾಗಿಯೇ ‘ರೈತ ಬಂಧು ಯಡಿಯೂರಪ್ಪ’ ಸಮಾವೇಶ ಎಂದು ಹೆಸರಿಡಲಾಗಿದೆ.

‘ಯಡಿಯೂರಪ್ಪ ರೈತ ನಾಯಕರಾಗಿರುವುದರಿಂದ ಮರದ ನೇಗಿಲನ್ನೇ ಉಡುಗೊರೆಯಾಗಿ ನೀಡಲು ನಿರ್ಧರಿಸಲಾಗಿದೆ. ನರೇಂದ್ರ ಮೋದಿ ಅವರೇ ಜನ್ಮದಿನದ ಉಡುಗೊರೆಯಾಗಿ ಮರದ ನೇಗಿಲು ನೀಡಲಿದ್ದಾರೆ’ ಎಂದು ಮುಖಂಡ ಎಂ.ಪಿ.ರೇಣುಕಾಚಾರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಗವಾನಿ ಮರದಿಂದ ನೇಗಿಲು ಮಾಡಲಾಗಿದೆ. ಹೊನ್ನಾಳಿಯ ಕೆಂಚಿಕೊಪ್ಪದ ಮಂಜುನಾಥ ಆಚಾರ್ ನೇಗಿಲು ಕೆತ್ತಿದ್ದಾರೆ. ನಾಲ್ಕು ಕೆ.ಜಿ. ತೂಕವಿದ್ದು, ನಾಲ್ಕು ಅಡಿ ಉದ್ದವಿದೆ. ಈ ಮರ ನಮ್ಮ ಜಮೀನನಲ್ಲೇ ಬೆಳೆದಿದ್ದು’ ಎಂದು ಹೇಳಿದರು.

‘ಮುಷ್ಟಿ ಅಕ್ಕಿ ಅಭಿಯಾನ’ಕ್ಕೂ ಚಾಲನೆ: ಆತ್ಮಹತ್ಯೆ ಮಾಡಿಕೊಳ್ಳದ್ದಂತೆ ರೈತರಿಗೆ ಪ್ರತಿಜ್ಞೆ ಬೋಧಿಸುವ ‘ಮುಷ್ಟಿ ಅಕ್ಕಿ ಅಭಿಯಾನ’ಕ್ಕೂ ಸಮಾವೇಶದಲ್ಲಿ ಪ್ರಧಾನಿ ಚಾಲನೆ ನೀಡಲಿದ್ದಾರೆ. ರಾಜ್ಯದಾದ್ಯಂತ 15 ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ
ಹಳ್ಳಿಗಳಿಗೆ ಕಾರ್ಯಕರ್ತರು ತೆರಳಲಿದ್ದು, 100ಕ್ಕೂ ಹೆಚ್ಚು ರೈತರನ್ನು ಒಂದೆಡೆ ಸೇರಿಸಿ ಪ್ರತಿಜ್ಞೆ ಬೋಧಿಸಲಾಗುತ್ತದೆ.

ರೈತ ಮೋರ್ಚಾದ ನೇತೃತ್ವದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಲಕ್ಷಾಂತರ ಸಂಖ್ಯೆಯ ರೈತರನ್ನು ಸೇರಿಸುವ ಉಮೇದಿನಲ್ಲಿದೆ ಬಿಜೆಪಿ. ಚುನಾವಣೆಯ ಹೊಸ್ತಿಲಲ್ಲಿ, ಮಧ್ಯ ಕರ್ನಾಟಕದಲ್ಲಿ ಪ್ರಧಾನ ಮಂತ್ರಿಗಳ ಮೊದಲ ಸಮಾವೇಶ ಇದಾಗಿದ್ದರಿಂದ ಸಾಲ ಮನ್ನಾ ಘೋಷಣೆ ಮಾಡುತ್ತಾರೆ ಅಥವಾ ಮಹದಾಯಿ ನದಿ ನೀರು ಹಂಚಿಕೆ ವಿಷಯ ಪ್ರಸ್ತಾಪಿಸುತ್ತಾರೆ ಎಂಬ ನಿರೀಕ್ಷೆಗಳು ರೈತರಿಗಿದೆ.

ಒಂದೂವರೆ ತಿಂಗಳ ಹಿಂದೆ ಪಕ್ಕದ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮಾವೇಶ ನಡೆಸಿ, ಕೇಂದ್ರದ ಅನುದಾನ ಬಳಕೆ ಬಗ್ಗೆ ರಾಜ್ಯದ ಮುಖ್ಯಮಂತ್ರಿಗೆ ಲೆಕ್ಕ ಕೇಳಿದ್ದರು. ದಾವಣಗೆರೆಯಲ್ಲಿ ಮೋದಿ, ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದ ರೈತರ ಆತ್ಮಹತ್ಯೆಗಳ
ಲೆಕ್ಕ ಕೇಳುವುದು ಖಚಿತ ಎನ್ನುತ್ತಾರೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT