ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಯದೇವ ಆಸ್ಪತ್ರೆ: 170 ಮಂದಿಗೆ ಸ್ಟೆಂಟ್‌ ಅಳವಡಿಕೆ

Published : 1 ಅಕ್ಟೋಬರ್ 2024, 15:48 IST
Last Updated : 1 ಅಕ್ಟೋಬರ್ 2024, 15:48 IST
ಫಾಲೋ ಮಾಡಿ
Comments

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಮ್ಮಿಕೊಂಡಿದ್ದ ಆಂಜಿಯೋಪ್ಲಾಸ್ಟಿ ಕಾರ್ಯಾಗಾರದಲ್ಲಿ 170 ಹೃದ್ರೋಗಿಗಳಿಗೆ ಉಚಿತವಾಗಿ ಸ್ಟೆಂಟ್‌ ಅಳವಡಿಸಲಾಗಿದೆ. 

ಸಂಸ್ಥೆಯು ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್ ಹಾಗೂ ಅಮೆರಿಕದ ಮೆಡ್‌ಟ್ರಾನಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಾಗಾರ ಹಮ್ಮಿಕೊಂಡಿತ್ತು. ಸೆ.24 ಹಾಗೂ ಸೆ.25ರಂದು ಸಂಸ್ಥೆಯ ಮೈಸೂರು ಶಾಖೆ, ಸೆ.26ರಿಂದ ಸೆ.28ರವರೆಗೆ ಬೆಂಗಳೂರಿನ ಸಂಸ್ಥೆಯ ಆವರಣದಲ್ಲಿ ಈ ಕಾರ್ಯಾಗಾರ ನಡೆದಿದೆ. 

ರೈತರು, ದಿನಗೂಲಿ ನೌಕರರು, ಆಟೋ ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ರಾಜ್ಯದ ಹೃದ್ರೋಗಿಗಳ ಜೊತೆಗೆ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಅಸ್ಸಾಂ, ಬಿಹಾರ ಸೇರಿ ವಿವಿಧ ರಾಜ್ಯದಗಳ ರೋಗಿಗಳೂ ಕಾರ್ಯಾಗಾರದಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಒಟ್ಟು 200 ಸ್ಟೆಂಟ್‌ಗಳನ್ನು ಅಳವಡಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ತಿಳಿಸಿದ್ದಾರೆ.

‘ಕೇವಲ ಐದು ದಿನಗಳಲ್ಲಿ 170 ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡಲಾಗಿದೆ. 17 ಕ್ಯಾಥ್ ಲ್ಯಾಬ್‌ಗಳು, 120 ಪೂರ್ಣಾವಧಿಯ ಹೃದ್ರೋಗ ತಜ್ಞರು, ಅಗತ್ಯ ತಾಂತ್ರಿಕ ಹಾಗೂ ನರ್ಸಿಂಗ್ ಸಿಬ್ಬಂದಿ ಮತ್ತು ಗುಣಮಟ್ಟದ ಮೂಲಸೌಕರ್ಯದಿಂದ ಇದು ಸಾಧ್ಯವಾಗಿದೆ’ ಎಂದಿದ್ದಾರೆ. 

ಅನಾರೋಗ್ಯ ಸಮಸ್ಯೆ: ‘ಕಾರ್ಯಾಗಾರದಲ್ಲಿ ಚಿಕಿತ್ಸೆ ಪಡೆದವರಲ್ಲಿ 32 ವರ್ಷದ ನೌಕರ ಕಿರಿಯ ರೋಗಿಯಾದರೆ, 77 ವರ್ಷದ ಕೂಲಿ ಕೆಲಸಗಾರ ಹಿರಿಯ ರೋಗಿಯಾಗಿದ್ದಾರೆ. ಶೇ 24ರಷ್ಟು ಮಂದಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. 27 ಮಂದಿ ಮಹಿಳೆಯರಾಗಿದ್ದರು. ಶೇ 60ರಷ್ಟು ಮಂದಿ ಮಧುಮೇಹಿಗಳಾಗಿದ್ದರೆ, ಶೇ 54ರಷ್ಟು ಮಂದಿ ಅಧಿಕ ರಕ್ತದೊತ್ತಡ, ಶೇ 33ರಷ್ಟು ಮಂದಿ ಧೂಮಪಾನಿಗಳು ಮತ್ತು ಶೇ35ರಷ್ಟು ಮಂದಿ ಕೊಲೆಸ್ಟ್ರಾಲ್ ಸಮಸ್ಯೆ ಹೊಂದಿದ್ದವರೂ ಆಗಿದ್ದಾರೆ. ಈ ಸಮಸ್ಯೆಗಳು ಹಿರಿಯರಿಗೆ ಸೀಮಿತವಾಗದೆ, ಕಿರಿಯರಲ್ಲೂ ಕಾಣಿಸಿಕೊಳ್ಳುತ್ತಿವೆ’ ಎಂದು ಹೇಳಿದ್ದಾರೆ.

‘ಕಾರ್ಯಾಗಾರದಲ್ಲಿ ಚಿಕಿತ್ಸೆ ಪಡೆದವರಿಗೆ ಮನೆಗೆ ತೆರಳುವ ಮುನ್ನ ಸಮಾಲೋಚನೆಯನ್ನೂ ನಡೆಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿದೆ. ರಕ್ತ ತೆಳುಗೊಳಿಸುವ ಮಾತ್ರೆಗಳನ್ನು ನಿಲ್ಲಿಸಬಾರದು ಎಂದು ಸೂಚಿಸಲಾಗಿದೆ. ಒಂದು ವೇಳೆ ನಿಲ್ಲಿಸಿದಲ್ಲಿ ಮತ್ತೆ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ, ರಕ್ತದೊತ್ತಡ ಮತ್ತು ಸಕ್ಕರೆ ಅಂಶದಲ್ಲಿ ನಿಯಂತ್ರಣ ಸಾಧಿಸಬೇಕು. ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ, ದಿನನಿತ್ಯ ವ್ಯಾಯಾಮ ಮಾಡಬೇಕೆಂದು ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT