ಬುಧವಾರ, ಅಕ್ಟೋಬರ್ 16, 2019
28 °C

ಮಳೆಗೆ ಕೊಚ್ಚಿ ಹೋದ ಮೋರಿ, ರಸ್ತೆ: ಸಂಚಾರ ದುಸ್ತರ

Published:
Updated:
Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕೆರೆಗಳು ಕೋಡಿ ಬಿದ್ದಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ರಸ್ತೆ, ಮೋರಿಗಳು ಕೊಚ್ಚಿ ಹೋಗಿದ್ದು ಗ್ರಾಮಗಳ ಸಂರ್ಪಕವೇ ಕಡಿತಗೊಂಡಿದೆ.

ತಾಲ್ಲೂಕಿನ ಪ್ರಸಿದ್ದ ಯಾತ್ರಾಸ್ಥಳ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಗೌರಿಬಿದನೂರು ಕಡೆಯಿಂದ ಮಾಕಳಿ ಮಾರ್ಗವಾಗಿ ಹೋಗಲು ಇದ್ದ ರಸ್ತೆ ಜೋರು ಮಳೆಗೆ ಕೊಚ್ಚಿ ಹೋಗಿದೆ. ಇದರಿಂದ ವಾಹನಗಳ ಸಂಚಾರ ಸ್ಥಗಿತ
ಗೊಂಡಿದೆ. ಕಂಟನಕುಂಟೆ, ಹಾಡೋನ ಹಳ್ಳಿ ಮೂಲಕ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗುವಂತಾಗಿದೆ.

ಇದೇ ಅವ್ಯವಸ್ಥೆ ಸಾಸಲು ಹೋಬಳಿಯ ಕೊಚ್ಚಿಗೆಮಚ್ಚೇನಹಳ್ಳಿ ಗ್ರಾಮದ ಜನರದ್ದು ಸಹ ಆಗಿದೆ. ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಇದ್ದ ಏಕೈಕ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಮೋರಿ, ಮೂರು ತಿಂಗಳ ಹಿಂದೆಯೇ ಬಿದ್ದ ಮಳೆಗೆ ಕೊಚ್ಚಿಹೋಗಿತ್ತು. ಜನರ ಒತ್ತಾಯದ ಮೇರೆಗೆ ತಾತ್ಕಾಲಿಕವಾಗಿ ಬೃಹತ್‌ ಪೈಪ್‌ಗಳನ್ನು ಹಾಕಿ ನಿರ್ಮಿಸಿದ್ದ ಮೋರಿಯೂ ಈಗ ಕೊಚ್ಚಿ ಹೋಗಿದೆ. ಹೀಗಾಗಿ ಗ್ರಾಮದ ಜನರು ಮಳೆ ನೀರು ನಿಂತ ನಂತರವಷ್ಟೇ ಕಾಲ್ನಡಿಗೆಯಲ್ಲಿ ಗ್ರಾಮಕ್ಕೆ ಹೋಗುವಂತಾಗಿದೆ. ಶಾಲಾ ಮಕ್ಕಳು ಮೋರಿಯಲ್ಲಿನ ನೀರಿನಲ್ಲೇ ನಡೆದು ಹೋಗುವ ಸ್ಥಿತಿ ಇದೆ.

ನಂದಿಬೆಟ್ಟದ ತಪ್ಪಲಿನ ಸಾಲಿನಲ್ಲಿ ಬರುವ ಚಿಕ್ಕರಾಯಪ್ಪನಹಳ್ಳಿ, ಚನ್ನಾಪುರ ಕೆರೆಗಳು ಕೋಡಿ ಬಿದ್ದಿವೆ. ಮೆಳೆಕೋಟೆ ಕೆರೆಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಘಾಟಿ ಕ್ಷೇತ್ರದಲ್ಲಿನ ವಿಶ್ವೇಶ್ವರಯ್ಯ ಪಿಕಪ್‌ ಡ್ಯಾಂ ತುಂಬಿದ್ದು ಜೋಗ್‌ಫಾಲ್ಸ್‌ ಮಾದರಿಯಲ್ಲಿ ನೀರು ಧುಮ್ಮಿಕ್ಕುತ್ತಿದೆ. ನೀರು ಹರಿಯುವುದನ್ನು ನೋಡಲು ಹಾಗೂ ನೀರಿನಲ್ಲಿ ಸ್ನಾನ ಮಾಡಲು ನೂರಾರು ಜನ ಮುಗಿಬೀಳುತ್ತಿದ್ದಾರೆ.

Post Comments (+)