ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆನಿದ್ರೆಯಲ್ಲೇ ರಾತ್ರಿ ಕಳೆಯುವ ಜನರು

ಚೊಕ್ಕಸಂದ್ರ: ಕೆರೆ ಕೋಡಿ ಒಡೆದ ಬಳಿಕ ಆತಂಕದಲ್ಲಿ ನಿವಾಸಿಗಳು l ರಾಜಕಾಲುವೆ ಒತ್ತುವರಿ, ಬಡಾವಣೆಗಳಿಗೆ ನುಗ್ಗುವ ಮಳೆನೀರು
Last Updated 30 ಅಕ್ಟೋಬರ್ 2019, 5:34 IST
ಅಕ್ಷರ ಗಾತ್ರ

ಬೆಂಗಳೂರು: ಒಂದೆಡೆ ರಾಜಕಾಲುವೆ ಒತ್ತುವರಿಯಾಗಿದ್ದರೆ, ಮತ್ತೊಂದೆಡೆ ತಡೆಗೋಡೆಗಳೇ ಇಲ್ಲ. ಜೋರು ಮಳೆ ಬಂದರೆ ನೀರು ನುಗ್ಗುವ ಭಯದಲ್ಲಿ ಚೊಕ್ಕಸಂದ್ರ ವಾರ್ಡ್‌ ಜನರು ಅರೆನಿದ್ರೆಯಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದಾರೆ.

ಅ.9ರಂದು ರಾತ್ರಿ ಚೊಕ್ಕಸಂದ್ರ ಕೆರೆ ಕೋಡಿ ಒಡೆದ ಬಳಿಕ ಮನೆಗಳಿಗೆ ನುಗ್ಗಿದ ನೀರು ಎಂಟನೇ ಮೈಲಿ ಸುತ್ತಮುತ್ತಲ ಮಾರುತಿ ಬಡಾವಣೆ, ಬೆಲ್ಮಾರ್ ಲೇಔಟ್‌, ರುಕ್ಮಿಣಿ ನಗರದ ಜನರ ನಿದ್ರೆಗೆಡಿಸಿದೆ. ರಾತ್ರಿ ಮಲಗಿದ್ದಾಗ ಮಳೆ ಸುರಿದರೆ ಏನು ಗತಿ ಎಂಬ ಆತಂಕದಲ್ಲೇ ದಿನ ದೂಡುತ್ತಿದ್ದಾರೆ.

ಚೊಕ್ಕಸಂದ್ರ ಕೆರೆ ಕೋಡಿ ಬಿದ್ದರೆ ಆ ನೀರು ದೊಡ್ಡಬಿದರಕಲ್ಲು ಕೆರೆ ಸೇರುತ್ತದೆ. ಈ ನೀರು ಹರಿದು ಹೋಗಲು ಇರುವ ರಾಜಕಾಲುವೆ ಈ ಬಡಾವಣೆಗಳಲ್ಲಿ ಹಾದು ಹೋಗಿದೆ. ಆದರೆ, ಅದು ಒತ್ತುವರಿಯಾಗಿ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗಿದೆ.

ಎಂಟನೇ ಮೈಲಿಯಿಂದ ನೆಲಗದರಹಳ್ಳಿ ರಸ್ತೆಯಲ್ಲಿ ಸಾಗಿದರೆ 500 ಮೀಟರ್ ದೂರದಲ್ಲಿ ರಾಜಕಾಲುವೆಯ ಸೇತುವೆಯೊಂದು ಎದುರಾಗುತ್ತದೆ. ಆ ಸೇತುವೆ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ. ಅಲ್ಲಿ ನಿಂತು ನೋಡಿದರೆ ರಾಜಕಾಲುವೆಯ ಅಗಲ ನಾಲ್ಕೈದು ಅಡಿ ಮಾತ್ರ ಇದೆ.

‘ರಾಜಕಾಲುವೆಯನ್ನೇ ನುಂಗುವ ರೀತಿಯಲ್ಲಿ ಒತ್ತುವರಿ ಮಾಡಲಾಗಿದೆ. ಕಾಂಪೌಂಡ್‌ ನಿರ್ಮಿಸಿ ಬಾಳೆ, ಬದನೆ ಬೆಳೆಯಲಾಗಿದೆ. ಇಷ್ಟು ಕಿರಿದಾದ ರಾಜಕಾಲುವೆಯಲ್ಲಿ ನೀರು ರಭಸವಾಗಿ ನುಗ್ಗಿದರೆ ಅಕ್ಕ–ಪಕ್ಕದ ಬಡಾವಣೆಗಳಿಗೆ ವ್ಯಾಪಿಸಿಕೊಳ್ಳುತ್ತದೆ. ಚೊಕ್ಕಸಂದ್ರ ಕೆರೆ ಕೋಡಿ ಒಡೆದಾಗ ಬಡಾವಣೆಗಳಿಗೆ ನೀರು ನುಗ್ಗಲು ಇದೇ ಕಾರಣ’ ಎಂದು ನಿವಾಸಿಗಳು ಆರೋಪಿಸುತ್ತಾರೆ.

ರಾಜಕಾಲುವೆ ಒತ್ತುವರಿ ಮಾಡಿರುವ ಮನೆಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ಗುರುತು ಮಾಡಿದ್ದಾರೆ. ಆದರೆ, ತೆರವುಗೊಳಿಸದ ಕಾರಣ ಇಡೀ ಬಡಾವಣೆ ಜನ ತೊಂದರೆ ಅನುಭವಿಸಬೇಕಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಡೆಗೋಡೆಯೇ ಇಲ್ಲ: ಮಾರುತಿ ಬಡಾವಣೆ, ಬೆಲ್ಮಾರ್ ಲೇಔಟ್‌ನಲ್ಲಿ ಈ ರಾಜಕಾಲುವೆಗೆ ಎರಡು ಕಡೆ ತಡೆಗೋಡೆಯೇ ಇಲ್ಲ. ಮತ್ತೆ ಜೋರು ಮಳೆ ಬಂದರೆ ನೀರು ನುಗ್ಗುವ ಭಯದಲ್ಲಿ ಈ ಬಡಾವಣೆಗಳ ನಿವಾಸಿಗಳಿದ್ದಾರೆ.

ಕೂಡಲೇ ತಡೆಗೋಡೆ ನಿರ್ಮಿಸಿದರೆ ಜನರು ನೆಮ್ಮದಿಯಿಂದ ನಿದ್ರೆ ಮಾಡಬಹುದು ಎನ್ನುತ್ತಾರೆ. ಇಲ್ಲದಿದ್ದರೆ ರಾತ್ರಿ ಆಗಾಗ ಎಚ್ಚರವಾಗಿ ನೋಡಬೇಕಾದ ಅನಿವಾರ್ಯ ಇದೆ ಎನ್ನುತ್ತಾರೆ ನಿವಾಸಿ ಚಂದ್ರಶೇಖರ್.

‘ರಾಜಕಾಲುವೆ ಒತ್ತುವರಿ ತೆರವು ಮಾಡಿ ತಡೆಗೋಡೆ ನಿರ್ಮಾಣ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಮತ್ತೊಮ್ಮೆ ಒತ್ತಡ ಹೇರಲಾಗುವುದು’ ಎಂದು ಚೊಕ್ಕಸಂದ್ರ ವಾರ್ಡ್ ಸದಸ್ಯೆ ಸರ್ವಮಂಗಳಾ ‘ಪ್ರಜಾವಾಣಿ’ಗೆ ತಿಳಿಸಿದರು.

₹13 ಕೋಟಿ ಮೊತ್ತದ ಟೆಂಡರ್

ದಾಸರಹಳ್ಳಿ ವಲಯದ ವಿವಿಧ ಕಾಮಗಾರಿಗಳಿಗೆ ₹13.70 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ ಎಂದು ದಾಸರಹಳ್ಳಿ ಶಾಸಕ ಆರ್‌.ಮಂಜುನಾಥ್‌ ತಿಳಿಸಿದರು.

ಚರಂಡಿಗಳಿಗೆ ಮೋರಿ, ಮಳೆ ನೀರು ಚರಂಡಿಗಳನ್ನು ನಿರ್ಮಿಸಲು ಕೆಲವು ದಿನಗಳ ಹಿಂದೆ ಅಲ್ಪಾವಧಿ ಟೆಂಡರ್ ಕರೆಯಲಾಗಿದೆ. ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

***

ರಾಜಕಾಲುವೆಗೆ ತಡೆಗೋಡೆಗಳೇ ಇಲ್ಲದಿರುವುದು ಜನರ ನಿದ್ರೆಗೆಡಿಸಿದೆ. ಬಿಬಿಎಂಪಿ ಕೂಡಲೇ ತಡೆಗೋಡೆಗಳನ್ನು ನಿರ್ಮಿಸಬೇಕು.

-ರಂಗಸ್ವಾಮಿ, ಬೆಲ್ಮಾರ್ ಲೇಔಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ಕೆರೆ ಕೋಡಿ ಒಡೆದ ದಿನ ಆದ ಅನಾಹುತದಿಂದ ಜನ ಕಂಗಾಲಾಗಿದ್ದಾರೆ. ನೀರು ಸರಾಗವಾಗಿ ಹರಿದು ಹೋಗುವಂತೆ ಬಿಬಿಎಂಪಿ ಮಾಡಬೇಕು -

ಎಸ್.ಕೆ. ಕುಮಾರ್, ಬೆಲ್ಮಾರ್ ಲೇಔಟ್ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT