ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ರಸ್ತೆ ಮೇಲೆ ನೀರು; ಕುಸಿದ ಮನೆಗಳು

ನಗರದಲ್ಲಿ ತೀವ್ರ ಮಳೆ * ತಗ್ಗು ಪ್ರದೇಶದ ಮನೆಗಳ ಒಳಗೆ ನುಗ್ಗಿದ ನೀರು * ಸಂಚಾರ ದಟ್ಟಣೆ
Last Updated 26 ಜುಲೈ 2021, 4:43 IST
ಅಕ್ಷರ ಗಾತ್ರ

ಬೆಂಗಳೂರು:ನಗರದ ಹಲವೆಡೆ ಭಾನುವಾರ ರಾತ್ರಿ ಬಿರುಸಿನ ಮಳೆ ಸುರಿದಿದ್ದು, ಪ್ರಮುಖ ರಸ್ತೆ ಹಾಗೂ ಕೆಳ ಸೇತುವೆಗಳಲ್ಲಿ ನೀರು ಹೊಳೆಯಂತೆ ಹರಿಯಿತು. ಹಲವಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೂ ನೀರು ನುಗ್ಗಿದೆ. ಮಳೆಯ ತೀವ್ರತೆಗೆ ಕೆಲವೆಡೆ ಮನೆಗಳು ಉರುಳಿಬಿದ್ದಿವೆ.

ಮಳೆಗಾಲ ಶುರುವಾದ ದಿನದಿಂದಲೇ ನಗರದಲ್ಲಿ ಮೋಡ‌ ಕವಿದ ವಾತಾವರಣ ಇರುತ್ತಿತ್ತು. ಕೆಲವೊಮ್ಮೆ ಮಳೆಯಾಗಿತ್ತಾದರೂ ಅದರ ತೀವ್ರತೆ ಅಷ್ಟಾಗಿ ಇರಲಿಲ್ಲ. ಭಾನುವಾರ ಸಂಜೆ ಬಳಿಕ ನಗರದ ಬಹುತೇಕ ಕಡೆ ಜೋರಾಗಿ ಮಳೆ ಸುರಿಯಿತು. ಕೆಲವೆಡೆ ಬಿರುಸಾದ ಗಾಳಿಯೂ ಬೀಸಿತು.

ವಿಲ್ಸನ್ ಗಾರ್ಡನ್, ಶಾಂತಿನಗರ, ಯಶವಂತಪುರ, ಪೀಣ್ಯ, ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ಮಹಾಲಕ್ಷ್ಮಿ ಬಡಾವಣೆ, ಆರ್‌.ಟಿ.ನಗರ, ಹೆಬ್ಬಾಳ, ಶಿವಾಜಿನಗರ, ಅಶೋಕನಗರ, ಎಂ.ಜಿ.ರಸ್ತೆ, ಕೋರಮಂಗಲ, ಮಡಿವಾಳ, ಬನಶಂಕರಿ, ಬಸವನಗುಡಿ, ಹನುಮಂತನಗರ, ಗಿರಿನಗರ, ದೀಪಾಂಜಲಿ ನಗರ, ರಾಜರಾಜೇಶ್ವರಿ ನಗರ, ಮೈಸೂರು ರಸ್ತೆ ಭಾಗದ ಪ್ರದೇಶಗಳು ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಮಳೆ ಜೋರಾಗಿತ್ತು. ಕಾಲುವೆಗಳು ನೀರಿನಿಂದ ತುಂಬಿ ಹರಿದವು.

ಶಿವಾನಂದ ವೃತ್ತದ ಬಳಿಯ ರೈಲ್ವೆ ಕೆಳಸೇತುವೆ, ಮೆಜೆಸ್ಟಿಕ್ ಬಳಿಯ ರೈಲ್ವೆ ಕೆಳ ಸೇತುವೆ, ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ಸೇತುವೆಗಳ ಬಳಿ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯಿತು. ಅಲ್ಲೆಲ್ಲ ವಾಹನಗಳ‌ ಸಂಚಾರ ಕೆಲಹೊತ್ತು ಸ್ಥಗಿತಗೊಳಿಸಲಾಗಿತ್ತು.

ರಾತ್ರಿ ಮಳೆ ಕಡಿಮೆಯಾಗಿ ನೀರಿನ ಪ್ರಮಾಣ ತಗ್ಗಿದ ನಂತರವೇ ವಾಹನಗಳ ಸಂಚಾರ ಪುನಃ ಆರಂಭವಾಯಿತು.

ಕೆಲ ಚಾಲಕರು, ಹರಿಯುವ‌ ನೀರಿನಲ್ಲೇ ವಾಹನಗಳನ್ನು ಚಲಾಯಿಸಲು ಹೋಗಿ ನೀರಿ‌ನ ಮಧ್ಯೆಯೇ ಸಿಲುಕಿಕೊಂಡಿದ್ದರು. ಸಾರ್ವಜನಿಕರೇ ಅಂತವರ ವಾಹನಗಳನ್ನು ದಡ ತಲುಪಿಸಲು ನೆರವಾದರು.

ನ್ಯಾಷನಲ್‌ ಗೇಮ್ಸ್‌ ವಿಲೇಜ್‌ನಲ್ಲಿ ಜಲಮಂಡಳಿಯ ಕಾಮಗಾರಿಯಿಂದಾಗಿ ನೀರಿನ ಹರಿವಿಗೆ ಅಡ್ಡಿಯಾಗಿ ಸಮಸ್ಯೆ ಸೃಷ್ಟಿಯಾಯಿತು.

‘ನಗರದಲ್ಲಿ ಆಗಾಗ ಉತ್ತಮ ಮಳೆಯಾಗುತ್ತಿದೆ. ಪ್ರಮುಖ ರಸ್ತೆ ಹಾಗೂ ಕೆಳ ಸೇತುವೆಗಳಲ್ಲಿ ನೀರು ಹರಿದ‌ ದೂರುಗಳು ಬಂದಿದ್ದವು. ಸ್ಥಳಕ್ಕೆ‌ ಹೋದ ಸಿಬ್ಬಂದಿ, ನೀರು ಹರಿದು ಹೋಗುವಂತೆ ಮಾಡಿದ್ದಾರೆ. ಮರ ಹಾಗೂ ಕೊಂಬೆಗಳು ಬಿದ್ದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ' ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT