ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಭಾರಿ ಮಳೆ; ಸಂಚಾರ ಅಸ್ತವ್ಯಸ್ತ

Published : 6 ಆಗಸ್ಟ್ 2024, 4:08 IST
Last Updated : 6 ಆಗಸ್ಟ್ 2024, 4:08 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಸೋಮವಾರ ಸಂಜೆ ಮತ್ತು ರಾತ್ರಿ ಭಾರಿ ಮಳೆಯಾಯಿತು. ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಯಿತು.

ಸೋಮವಾರ ಸಂಜೆ ಹಲವು ಭಾಗಗಳಲ್ಲಿ ಉತ್ತಮವಾಗಿ ಸುರಿದಿದ್ದ ಮಳೆ, ರಾತ್ರಿ 9ರ ನಂತರ ಬಿರುಸುಗೊಂಡಿತು. ಗುಡುಗು–ಮಿಂಚು ಸಹಿತ ಅರ್ಧ ತಾಸು ಭಾರಿ ಮಳೆಯಾಯಿತು. ಇದರಿಂದ ರಸ್ತೆಯಲ್ಲಿ ಮಳೆ ನೀರು ನಿಂತು, ವಾಹನ ಸಂಚಾರಕ್ಕೆ ಹಲವೆಡೆ ಅಡ್ಡಿಯಾಯಿತು. ನಗರದ ಕೆಲವು ಭಾಗಗಳಲ್ಲಿ ಮಧ್ಯರಾತ್ರಿಯವರೆಗೂ ಮಳೆ ಸುರಿಯಿತು. ಹಲವು ಪ್ರದೇಶಗಳಲ್ಲಿ 7 ಸೆಂಟಿ ಮೀಟರ್‌ಗೂ ಹೆಚ್ಚು ಪ್ರಮಾಣದಲ್ಲಿ ಮಳೆಯಾಯಿತು.

ನಾಗವಾರ ರಸ್ತೆ, ಹೆಣ್ಣೂರು ರಸ್ತೆ, ಬಳ್ಳಾರಿ ರಸ್ತೆಯ ಸಿಬಿಐ ಮೇಲ್ಸೇತುವೆ, ಹೆಬ್ಬಾಳ ಮೇಲ್ಸೇತುವೆ ಸುತ್ತಮುತ್ತ, ಸಂಜಯನಗರದಿಂದ ಭೂಪಸಂದ್ರ ರಸ್ತೆ, ವಿಮಾನ ನಿಲ್ದಾಣ ರಸ್ತೆ, ಮೇಖ್ರಿ ವೃತ್ತ, ವೀರಣ್ಣಪಾಳ್ಯ ಸರ್ವಿಸ್‌ ರಸ್ತೆ, ಮೈಸೂರು ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ನೀರು ನಿಂತು ಸಂಚಾರ ನಿಧಾನಗತಿಯಲ್ಲಿತ್ತು.

ಪೀಣ್ಯ ಕೈಗಾರಿಕಾ ಪ್ರದೇಶ, ಯಲಹಂಕ, ಜಕ್ಕೂರು, ವಿಶ್ವನಾಥ ನಾಗೇನಹಳ್ಳಿ, ಪುಲಕೇಶಿನಗರ, ಸಂಪಂಗಿರಾಮನಗರ, ವನ್ನಾರ್‌ಪೇಟೆ, ವಿಶ್ವೇಶ್ವರಪುರ, ಬನಶಂಕರಿ, ವಿದ್ಯಾಪೀಠ, ನಾಯಂಡಹಳ್ಳಿ, ಕೆಂಗೇರಿ, ರಾಜರಾಜೇಶ್ವರಿನಗರ, ಬಸವಪುರಗಳಲ್ಲಿ 3 ಸೆಂ.ಮೀನಿಂದ 5 ಸೆಂ.ಮೀನಷ್ಟು ಮಳೆಯಾಗಿದೆ.

ಹೇರೋಹಳ್ಳಿ, ಚೌಡೇಶ್ವರಿ ವಾರ್ಡ್‌, ಬಾಗಲಗುಂಟೆ, ಯಶವಂತಪುರ, ಹೆಬ್ಬಾಳ, ಮಾರುತಿ ಮಂದಿರ, ಹಂಪಿನಗರ, ವಿಜಯನಗರ, ರಾಜಾಜಿನಗರ, ಬಿಟಿಎಂ ಲೇಔಟ್‌, ಮಾರತ್‌ಹಳ್ಳಿ, ಮಹದೇವಪುರ, ವಿಜ್ಞಾನನಗರ, ಹೂಡಿ, ಕಾಟನ್‌ಪೇಟೆ, ರಾಜಮಹಲ್‌ ಗುಟ್ಟಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯಿತು.

ಬೈಕ್ ಮೇಲೆ ಬಿದ್ದ ಮರ: ಹನುಮಂತನಗರದಲ್ಲಿ ಮರ ಬಿದ್ದು, ಬೈಕ್ ಪೂರ್ಣ ಜಖಂಗೊಂಡಿತು. ಬಿಬಿಎಂಪಿ ಸಿಬ್ಬಂದಿ ಸುರಿಯುವ ಮಳೆಯಲ್ಲೇ, ಬಿದ್ದ ಮರ ತೆರವು ಕಾರ್ಯಾಚರಣೆ ನಡೆಸಿದರು.

ನಗರದ ಹಲವು ರಸ್ತೆಗಳು ಜಲಾವೃತವಾಗಿದ್ದರಿಂದ ದ್ವಿಚಕ್ರ ವಾಹನ ಸವಾರರು ಪ್ರಯಾಸಪಟ್ಟು ಸಾಗಿದರು. ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಯಶವಂತಪುರ, ಕೆಂಗೇರಿ, ನಾಯಂಡಹಳ್ಳಿ ಮುಖ್ಯ ರಸ್ತೆಗಳಲ್ಲಿ ಮಳೆನೀರಿನಿಂದ ಗುಂಡಿಗಳು ಗೊತ್ತಾಗದೆ ಕೆಲವು ಬೈಕ್‌ ಸವಾರರು ಬಿದ್ದರು. ಯಶವಂತಪುರದಲ್ಲಿ ಐಐಎಸ್ಸಿ ಬಳಿಯ ಕೆಳ ಸೇತುವೆಯಲ್ಲಿ ಅಂದಾಜು ಎರಡು ಅಡಿ ನೀರು ನಿಂತಿತ್ತು. 

ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಳೆ ನೀರು ತುಂಬಿಕೊಂಡಿತು. ವಿಲ್ಸನ್ ಗಾರ್ಡನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವು ಮನೆಗಳಿಗೆ ನೀರಿ ನುಗ್ಗಿದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲಾಟ್‌ಫಾರಂ ನಲ್ಲಿ ಮಳೆ ನೀರು ಎಲ್ಲೆಡೆ ಸೋರಿತು. ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಸಾಕಷ್ಟು ಪರದಾಡಿ, ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT